ಕಾರವಾರ: ಅಂಡಮಾನ್-ನಿಕೋಬಾರ್ ದ್ವೀಪ ಪ್ರದೇಶದಲ್ಲಿ ನೌಕಾಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ (Karwar News) ಅಂಕೋಲಾ ತಾಲೂಕಿನ ಲಕ್ಷ್ಮೀಶ್ವರ ಮೂಲದ ನೌಕಾಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಕಳೆದ 4 ದಿನಗಳ ಹಿಂದೆ ಆಕಸ್ಮಿಕ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅವರ ಪಾರ್ಥಿವ ಶರೀರವನ್ನು ಗುರುವಾರ (ಜ.೫) ಹುಟ್ಟೂರಿಗೆ ತರಲಾಗುತ್ತಿದೆ.
ನಾಗರಾಜ ಮುಕುಂದ ಕಳಸ (33) ಅಕಾಲಿಕವಾಗಿ ನಿಧನರಾಗಿರುವ ನೌಕಾಸೇನಾ ಸಿಬ್ಬಂದಿ. ಭುವನೇಶ್ವರದಲ್ಲಿರುವ ಐಎನ್ಎಸ್ ಚಿಲಕ ನೌಕಾದಳ ತರಬೇತಿ ಕೇಂದ್ರದಲ್ಲಿ 2010ರಲ್ಲಿ ತರಬೇತಿಯನ್ನು ಪಡೆದು, ಕಾರವಾರದ ಕದಂಬ ನೌಕಾನೆಲೆಯಲ್ಲಿ ಭಾರತೀಯ ನೌಕಾಸೇನೆಗೆ ಸೇರ್ಪಡೆಯಾಗಿದ್ದರು.
ಬಳಿಕ ಮುಂಬೈನಲ್ಲಿ ಸೇವೆ ಸಲ್ಲಿಸಿ ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ತಮ್ಮ ಸೇವೆಯನ್ನು ಮುಂದುವರಿಸಿದ್ದರು. ಸೇವಾ ನಿವೃತ್ತಿಗೆ ಎರಡು ವರ್ಷ ಬಾಕಿ ಇರುವಾಗಲೇ ದುರ್ದೈವವಶಾತ್ ಅಸುನೀಗಿದ್ದಾರೆ.
ಅಂಡಮಾನ್ ನಿಕೋಬಾರ್‌ನಿಂದ ಪಾರ್ಥಿವ ಶರೀರವನ್ನು ಗುರುವಾರ (ಜ.೫) ಬೆಳಗಿನ ಜಾವ ಅಂಕೋಲಾಕ್ಕೆ ತಲುಪಿಸಲಾಗುತ್ತಿದೆ ಎನ್ನುವ ಮಾಹಿತಿ ಇದ್ದು, ಲಕ್ಷ್ಮೀಶ್ವರದ ಮೂಲ ಮನೆಯಲ್ಲಿ ಬೆಳಗ್ಗೆ 7 ಗಂಟೆಯಿಂದ 2 ಗಂಟೆಗಳ ಕಾಲ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುವುದು. ಬಳಿಕ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.