-ಎಸ್.ಎಸ್.ಸಂದೀಪ, ವಿಸ್ತಾರ ನ್ಯೂಸ್, ಕಾರವಾರ
ಕರಾವಳಿ ನಗರಿ ಕಾರವಾರದ (Karwar) ಜಿಲ್ಲಾ ಗ್ರಂಥಾಲಯಕ್ಕೆ (District library) 150 ವರ್ಷಗಳ ಇತಿಹಾಸವಿದ್ದು, ಬ್ರಿಟಿಷರ (British) ಕಾಲದಲ್ಲೇ ನಿರ್ಮಾಣವಾದ ಈ ಗ್ರಂಥಾಲಯದಲ್ಲಿ ಪುರಾತನ (Ancient) ಕಾಲದ ಹಲವಾರು ಪುಸ್ತಕಗಳಿರುವುದು ತುಂಬಾ ವಿಶೇಷ.
ಸುಮಾರು 300 ವರ್ಷಗಳಷ್ಟು ಹಳೆಯ ಮಹಾಭಾರತದ ಹಸ್ತಪ್ರತಿ ಮಾದರಿಯ ಪುಸ್ತಕ ಇಲ್ಲಿರುವುದು ಗಮನಾರ್ಹವಾಗಿದೆ. ತೀರಾ ಅಪರೂಪದ ಸಂಗ್ರಹವಾಗಿರುವ ಈ ಪುಸ್ತಕವನ್ನು ಗ್ರಂಥಾಲಯ ಸಿಬ್ಬಂದಿ ಜೋಪಾನವಾಗಿ ಸಂರಕ್ಷಿಸಿಟ್ಟಿದ್ದಾರೆ.
ಇದನ್ನೂ ಓದಿ: ICC World Cup 2023: ವಿಶ್ವಕಪ್ಗೆ ಬಾಲಿವುಡ್ ಬಾದ್ ಷಾ ರಾಯಭಾರಿ; ಆ ಒಂದು ‘ದಿನ’ಕ್ಕೆ ಶತಕೋಟಿ ಮಿಡಿತ
ಮಹಾಭಾರತ ನಮ್ಮ ದೇಶದ ಇತಿಹಾಸವನ್ನು ತಿಳಿಸಿಕೊಡುವ ಮಹಾಕಾವ್ಯಗಳಲ್ಲಿ ಒಂದು. ವೇದವ್ಯಾಸ ಮಹರ್ಷಿಗಳಿಂದ ರಚಿತವಾಗಿರುವ ಧಾರ್ಮಿಕ, ಪೌರಾಣಿಕ ಇತಿಹಾಸ ಸಾರುವ ಈ ಮಹಾಗ್ರಂಥ 18 ಪರ್ವಗಳನ್ನು ಹೊಂದಿದೆ. ಇಂತಹದ್ದೊಂದು ಮಹಾಕಾವ್ಯದ ಸುಮಾರು 312 ವರ್ಷಗಳಷ್ಟು ಹಳೆಯದಾದ, ಸಂಸ್ಕೃತ ಭಾಷೆಯಲ್ಲಿರುವ ಮಹಾಭಾರತ ಗ್ರಂಥ ಕಾರವಾರದ ಜಿಲ್ಲಾ ಗ್ರಂಥಾಲಯದಲ್ಲಿದೆ.
ಮಹಾಭಾರತದ 12 ಪರ್ವಗಳನ್ನು ಒಳಗೊಂಡಿರುವ ಈ ಗ್ರಂಥ ಸುಮಾರು 1500ಕ್ಕೂ ಹೆಚ್ಚು ಪುಟಗಳಲ್ಲಿದ್ದು ಪುರಾತನ ಸಂಗ್ರಹಗಳಲ್ಲಿ ಒಂದಾಗಿದೆ. ಆದಿ, ಸಭಾ, ಅನುಶಾಸನ, ವಿರಾಟ, ಉದ್ಯೋಗ, ಭೀಷ್ಮ, ದ್ರೋಣ, ಕರ್ಣ, ಶಲ್ಯ, ಸೌಪ್ತಿಕಾ. ಸ್ತ್ರೀ ಮತ್ತು ಶಾಂತಿ ಪರ್ವಗಳು ಇಲ್ಲಿನ ಗ್ರಂಥದಲ್ಲಿ ಓದಲು ಲಭ್ಯವಿವೆ.
1711ರಲ್ಲಿ ಮುದ್ರಿತವಾದ ಮಹಾಭಾರತ ಗ್ರಂಥ
ಸಾಕಷ್ಟು ಹಳೆಯ ಪುಸ್ತಕವಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ ಗ್ರಂಥಾಲಯದ ಸಿಬ್ಬಂದಿ ಈ ಪುಸಕ್ತವನ್ನು ವಿಶೇಷ ಕಾಳಜಿಯಲ್ಲಿ ಇರಿಸಿದ್ದಾರೆ. 1711ರಲ್ಲಿ ಮುಂಬೈಯಲ್ಲಿ ಮುದ್ರಿತವಾಗಿರುವ ಈ ಗ್ರಂಥವನ್ನು ಎರಡು ಭಾಗಗಳಲ್ಲಿ ವಿಂಗಡಿಸಲಾಗಿದೆ. ಗ್ರಂಥದ ಹಾಳೆಗಳು ಸೂಕ್ಷ್ಮವಾಗಿರುವ ಕಾರಣ ಓದಲು ಅನುಕೂಲವಾಗುವಂತೆ ಒಂದೊಂದು ಪರ್ವವನ್ನು ಕಟ್ಟಿಗೆಯ ಹಲಗೆಯಿಂದ ಪ್ರತ್ಯೇಕಿಸಿ ಇಡಲಾಗಿದೆ.
ಅಲ್ಲದೇ ಪುಸ್ತಕವನ್ನು ಹತ್ತಿಯ ಬಟ್ಟೆಯಲ್ಲಿ ಕಟ್ಟಿ, ಗಾಳಿಯಾಡದಂತೆ ನ್ಯಾಪ್ತೋಲಿನ್ ಗುಳಿಗೆಗಳೊಂದಿಗೆ ಕಪಾಟಿನಲ್ಲಿ ಇರಿಸಲಾಗುತ್ತದೆ. 1986ರಿಂದ ಈ ಪುಸ್ತಕವನ್ನು ಗ್ರಂಥಾಲಯದ ವಿರಳ ಪುಸ್ತಕಗಳ ವಿಭಾಗದಲ್ಲಿ ಇರಿಸಲಾಗಿದ್ದು, ತಿಂಗಳಿಗೊಮ್ಮೆ ಗ್ರಂಥಾಲಯದ ಸಿಬ್ಬಂದಿ ಪುಸ್ತಕವನ್ನು ತೆರೆದು ಪರಿಶೀಲಿಸಿ ಯಾವುದೇ ಹಾನಿಯಾಗದಂತೆ ಜೋಪಾನವಾಗಿರಿಸಲಾಗಿದೆ ಎನ್ನುತ್ತಾರೆ ಗ್ರಂಥಾಲಯದ ಸಿಬ್ಬಂದಿ ದೀಪಾ.
ಇದನ್ನೂ ಓದಿ: ರಾಯಗಢ ಭೂಕುಸಿತದಲ್ಲಿ 10 ಮಂದಿ ಸಾವು; ರಕ್ಷಣೆ ಮಾಡುತ್ತಿದ್ದ ಅಧಿಕಾರಿಗೆ ಹೃದಯ ಸ್ತಂಭನ
ದಾನವಾಗಿ ಗ್ರಂಥಾಲಯಕ್ಕೆ ಕೊಡುಗೆ
ಈ ಹಿಂದೆ ಮುಂಬೈ ಮೂಲದ ವ್ಯಕ್ತಿಯೊಬ್ಬರು ಈ ಮಹಾಗ್ರಂಥವನ್ನು ಗ್ರಂಥಾಲಯಕ್ಕೆ ದಾನವಾಗಿ ನೀಡಿದ್ದು, ಅವರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಈ ಕುರಿತು ಅಧ್ಯಯನ ಮಾಡಲು ಬಯಸುವವರಿಗೆ ಪುಸ್ತಕವನ್ನು ಗ್ರಂಥಾಲಯದಲ್ಲೇ ಓದಲು ಅವಕಾಶವಿದ್ದು, ಪ್ರತಿವರ್ಷ ಇಲ್ಲಿ ನಡೆಯುವ ಪುಸ್ತಕ ಪ್ರದರ್ಶನದಲ್ಲಿ ಮಹಾಭಾರತದ ಪುರಾತನ ಪುಸ್ತಕವನ್ನು ಪ್ರದರ್ಶನಕ್ಕೆ ಇರಿಸಲಾಗುತ್ತದೆ ಎಂದು ಜಿಲ್ಲಾ ಗ್ರಂಥಾಲಯ ಇಲಾಖೆಯ ಪ್ರಭಾರಿ ಉಪ ನಿರ್ದೇಶಕ ರಾಘವೇಂದ್ರ. ಕೆ.ವಿ. ವಿಸ್ತಾರ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.
ಬ್ರಿಟಿಷರ ಕಾಲದ ಗ್ರಂಥಾಲಯ
ಇನ್ನು ಕಾರವಾರದ ಈ ಜಿಲ್ಲಾ ಗ್ರಂಥಾಲಯಕ್ಕೂ ಸಾಕಷ್ಟು ಇತಿಹಾಸವಿದ್ದು, 1864ರ ಮೇ 1ರಂದು ಬ್ರಿಟಿಷರ ಕಾಲದಲ್ಲಿ ಇದು ಸ್ಥಾಪನೆಯಾಗಿದೆ. ಅಂದಿನ ಬ್ರಿಟಿಷ್ ಅಧಿಕಾರಿಯಾಗಿದ್ದ ಆರ್.ವೈಟ್ ಎಂಬುವವರು ಗ್ರಂಥಾಲಯ ಸ್ಥಾಪನೆಯ ಕಾರ್ಯವನ್ನು ಕೈಗೊಂಡಿದ್ದು, ಅಂದಿನಿಂದ ಇಂದಿನವರೆಗೆ ಕಾರವಾರ ಜಿಲ್ಲಾ ಗ್ರಂಥಾಲಯ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.
ಇದನ್ನೂ ಓದಿ: ಗಿನ್ನೀಸ್ ದಾಖಲೆ ಮಾಡಲು ಹೋಗಿ 45 ನಿಮಿಷ ಕುರುಡಾದ ವ್ಯಕ್ತಿ; ಒಂದೇ ಸಮನೆ ಅಳುವ ಮುನ್ನ ಇರಲಿ ಎಚ್ಚರ!
ಸದ್ಯ 159 ವರ್ಷಗಳನ್ನು ಪೂರೈಸಿರುವ ಕಾರವಾರದ ಈ ಗ್ರಂಥಾಲಯ ಇಂದಿಗೂ ಜ್ಞಾನಾರ್ಜನೆಯ ಕೇಂದ್ರವಾಗಿ ಮುಂದುವರಿದಿದ್ದು, ಪ್ರತಿನಿತ್ಯ 300ರಿಂದ 400 ಮಂದಿ ಗ್ರಂಥಾಲಯಕ್ಕೆ ಭೇಟಿ ನೀಡುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆ, ಕಥೆ, ಕಾದಂಬರಿ, ಐತಿಹಾಸಿಕ ಗ್ರಂಥಗಳೂ ಸೇರಿ ಸಾವಿರಾರು ಸಂಖ್ಯೆಯ ಪುಸ್ತಕಗಳನ್ನು ಒಳಗೊಂಡಿರುವುದರ ಜೊತೆಗೆ ಡಿಜಿಟಲ್ ಗ್ರಂಥಾಲಯವನ್ನೂ ಹೊಂದುವ ಮೂಲಕ ಆಧುನಿಕತೆಯನ್ನ ಮೈಗೂಡಿಸಿಕೊಂಡು ಓದುಗರ ನೆಚ್ಚಿನ ಕೇಂದ್ರವಾಗಿದೆ.