ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು 2022-23ನೇ ಸಾಲಿನಲ್ಲಿ ನಡೆಸಿದ ಕನ್ನಡ ಪ್ರವೇಶ, ಕಾವ, ಜಾಣ ಮತ್ತು ರತ್ನ ಪರೀಕ್ಷೆಗಳ (Kasapa Exam) ಫಲಿತಾಂಶವನ್ನು ಪ್ರಕಟಿಸಲಾಗಿದೆ. ನಾಲ್ಕು ವಿಭಾಗದಲ್ಲಿ ಪರೀಕ್ಷೆ ನಡೆದಿದ್ದು, ಒಟ್ಟು 1190 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅವರಲ್ಲಿ 596 ಮಂದಿ ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ರಾಜ್ಯದ ಒಟ್ಟು 18 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಕನ್ನಡ ಪ್ರವೇಶ, ಕಾವ, ಜಾಣ ಮತ್ತು ರತ್ನ ವಿಭಾಗದಲ್ಲಿ ತಲಾ ಮೂವರು ಅಭ್ಯರ್ಥಿಗಳು ಮೊದಲ ಮೂರು ಶ್ರೇಣಿಯನ್ನು ಪಡೆದುಕೊಳ್ಳಲಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆಯಲ್ಲಿ ತಿಳಿಸಿದೆ.
ಕನ್ನಡ ಸಾಹಿತ್ಯ ಪರಿಷತ್ತು 2022-23ನೇ ಸಾಲಿನಲ್ಲಿ ನಡೆಸಿದ ಕನ್ನಡ ಪ್ರವೇಶ, ಕಾವ, ಜಾಣ ಮತ್ತು ರತ್ನ ಪರೀಕ್ಷೆಗಳ ಫಲಿತಾಂಶದ ಪಟ್ಟಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ಫಲಕದಲ್ಲಿ ಹಾಗೂ ಪರಿಷತ್ತಿನ ವೆಬ್‌ಸೈಟ್‌ನಲ್ಲಿಯೂ ಪರಿಶೀಲಿಸಬಹುದಾಗಿದೆ.
ಅಂಕಪಟ್ಟಿ ಹಾಗೂ ಪ್ರಮಾಣಪತ್ರಗಳನ್ನು ಶೀಘ್ರದಲ್ಲಿಯೇ ಎಲ್ಲ ಅಭ್ಯರ್ಥಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪರೀಕ್ಷಾ ವಿಭಾಗದಿಂದ ಅಂಚೆಯ ಮೂಲಕ ಕಳುಹಿಸಿಕೊಡಲಾಗುವುದು. ಮರು ಮೌಲ್ಯಮಾಪನ ಹಾಗೂ ಮರು ಎಣಿಕೆಗೆ ಅಂಕಪಟ್ಟಿಗಳು ಕಳುಹಿಸಿದ ದಿನಾಂಕದಿಂದ ಒಂದು ತಿಂಗಳೊಳಗಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ದೂರವಾಣಿ: 080-26623584, 26612991, 22423867 ಇವರನ್ನು ಕಚೇರಿ ಸಮಯದಲ್ಲಿ ಸಂಪರ್ಕಿಸಲು ಕೋರಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Kasapa Awards: ಮಾರ್ಚ್ 12ರಂದು ಕನ್ನಡ ಸಾಹಿತ್ಯ ಪರಿಷತ್ತಿನ 2021ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿ ಪ್ರದಾನ
ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಎಲ್ಲ ಅಭ್ಯರ್ಥಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು, ಸಮಸ್ತ ಕನ್ನಡಿಗರ ಪರವಾಗಿ ಅಭಿನಂದನೆಗಳು. ಕನ್ನಡ ಸಾಹಿತ್ಯ ಪರೀಕ್ಷೆಯ ಕುರಿತು ಸಂಪೂರ್ಣ ಮಾಹಿತಿ ಪಡೆದು ಪರೀಕ್ಷೆಯಲ್ಲಿ ಭಾಗವಹಿಸಿದ ಎಲ್ಲ ಅಭ್ಯರ್ಥಿಗಳಿಗೂ ಗೌರವ ನಮನ. ಮುಂದಿನ ದಿನಗಳಲ್ಲಿ ಕನ್ನಡ ಭಾಷೆ, ನುಡಿ, ಸಂಸ್ಕೃತಿಗಳ ಅಧ್ಯಯನಕ್ಕಾಗಿ ಹೆಚ್ಚಿನ ಕನ್ನಡಾಸಕ್ತರು ತೊಡಗಿಕೊಳ್ಳುವುದಲ್ಲದೆ, ಕನ್ನಡ ಸಾಹಿತ್ಯ ಪರೀಕ್ಷೆಯ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಕರೆ ನೀಡಿದ್ದಾರೆ.