ತೀರ್ಥಹಳ್ಳಿ: “ಕಸ್ತೂರಿ ರಂಗನ್ ವರದಿ (Kasturirangan Report) ಮಲೆನಾಡಿಗೆ ಮಾರಕ. ಅದರ ಕುರಿತು ದೆಹಲಿಯಲ್ಲಿ ಚರ್ಚೆ ಆದಾಗ ಈ ವರದಿ ಜಾರಿಯಾದರೆ ರಕ್ತಪಾತವಾಗುತ್ತದೆ. ಸಾವಿರಾರು ವರ್ಷದಿಂದ ಒಂದೆಡೆ ವಾಸ ಮಾಡುತ್ತಿರುವ ರೈತರು, ಮೂಲ ನಿವಾಸಿಗಳನ್ನು ಒಕ್ಕೆಲೆಬ್ಬಿಸುವುದು ಸರಿಯಾದ ಮಾರ್ಗ ಅಲ್ಲ ಎಂದು ವಾದಿಸಿದ್ದೆ. ಅದೇ ರೀತಿ ಅಡಿಕೆ ಧಾರಣೆ ಕುಸಿದಾಗ ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿ ಆಮದು ಸುಂಕ ಏರಿಕೆ ಮಾಡಿ ಬೆಲೆ ಸ್ಥಿರವಾಗಿ ಇರುವಂತೆ ನೋಡಿಕೊಂಡಿದ್ದೇನೆ” ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ತಾಲೂಕಿನ ಕೋಣಂದೂರಿನಲ್ಲಿ 25 ಕೋಟಿ ರೂ. ವೆಚ್ಚದ ರಸ್ತೆ, ಆಸ್ಪತ್ರೆ, ಪೊಲೀಸ್ ಗೃಹ ನಿರ್ಮಾಣ, ಅಂಗನವಾಡಿ ಕೇಂದ್ರಗಳ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, “ನನಗೆ ಜನರ ಸಮಸ್ಯೆಗಳನ್ನು ಹತ್ತಿರದಿಂದ ಅನುಭವಿಸಿ ಗೊತ್ತಿದೆ. ಕೋಣಂದೂರು ಬೆಳೆಯುತ್ತಿರುವ ಪ್ರದೇಶ ಇಲ್ಲಿ ಆಸ್ಪತ್ರೆ ಅಭಿವೃದ್ಧಿಯಾದರೆ ಅದರ ಪ್ರಯೋಜನ ಬಡವರಿಗೆ ಆಗುತ್ತದೆ. ಇಲ್ಲಿನ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಜನ ಒತ್ತಾಯ ಮಾಡದೆಯೇ ಮಾಡಲಾಗಿದೆ. ಅದು ನನ್ನ ಬದ್ಧತೆ. ಗೃಹ ಸಚಿವ ಆದ ನಂತರ ತೀರ್ಥಹಳ್ಳಿ ಕ್ಷೇತ್ರಕ್ಕೆ ಅಭಿವೃದ್ಧಿಗಾಗಿ 4500 ಕೋಟಿ ರೂ.ಗೂ ಹೆಚ್ಚಿನ ಅನುದಾನವನ್ನು ತರಲಾಗಿದೆ. ತಾಲೂಕು ಹಿಂದೆಂದೂ ಕಾಣದ ಅಭಿವೃದ್ಧಿ ಕಾಣುತ್ತಿದೆ” ಎಂದರು.
“ಗೃಹ ಸಚಿವನಾಗಿ ಒಂದೂ ಕಪ್ಪು ಚುಕ್ಕಿ ಇಲ್ಲದೆ ಕೆಲಸ ಮಾಡಿರುವೆ. ಪಿಎಸ್ಐ ಹಗರಣದಲ್ಲಿ ಭಾಗಿಯಾದ ಎಲ್ಲರನ್ನೂ ಜೈಲಿಗೆ ಹಾಕಲಾಗಿದೆ. ಆದರೆ ಪರೀಕ್ಷೆ ಬರೆಯದೆ ಶಿಕ್ಷಕರಾದವರನ್ನು ಹಿಂದಿನ ಸರ್ಕಾರ ಏನೂ ಮಾಡಿರಲಿಲ್ಲ ಅಂಥವರನ್ನೂ ಪತ್ತೆ ಹಚ್ಚಿ ಜೈಲಿಗೆ ಅಟ್ಟಿದ್ದೇವೆ. ಆದರೆ ಅದರ ವಿರುದ್ಧ ಮಾತಾಡದವರು ಪಿಎಸ್ಐ ಹಗರಣ ಆದಾಗ ಭಾರಿ ಟೀಕೆ ಮಾಡಿದ್ದರು” ಎಂದು ಪರೋಕ್ಷವಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರನ್ನು ಕುಟುಕಿದರು.
ಇದನ್ನೂ ಓದಿ: Ponniyin Selvan 2 : ‘ಪೊನ್ನಿಯಿನ್ ಸೆಲ್ವನ್-2’ ಚಿತ್ರದ ಮೊದಲನೇ ಹಾಡು ಬಿಡುಗಡೆʼ; ಸಿನಿಮಾ ಬಿಡುಗಡೆ ದಿನಾಂಕವೂ ಫಿಕ್ಸ್
ವೇದಿಕೆಯಲ್ಲಿ ಲೋಕೋಪಯೋಗಿ ಮುಖ್ಯ ಇಂಜಿನಿಯರ್ ಕಾಂತರಾಜ, ಆಡಿಷನಲ್ ಎಸ್. ಪಿ.ಅನಿಲ್ ಕುಮಾರ್ ,.. ಡಿವೈಎಸ್‌ಪಿ ಗಜಾನನ ಸುತರಾ, ತಾಲೂಕು ವೈದ್ಯಾಧಿಕಾರಿ ನಟರಾಜ್, ಕೋಣಂದೂರು ಆಸ್ಪತ್ರೆಯ ವೈದ್ಯಾಧಿಕಾರಿ ಮಂಜುನಾಥ್, ಮುಖಂಡರಾದ ಅಪೂರ್ವ ಶರಧಿ, ಮಂಜುನಾಥ್, ಪೂರ್ಣೇಶ್, ಅಡಕೆ ಪ್ರಕಾಶ್, ಕೋಣಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.