ಹಗರಿಬೊಮ್ಮನಹಳ್ಳಿ: ಅಕ್ರಮ ಮರಳು ಸಾಗಾಟ (Illegal Sand Transport) ಹಾಗೂ ಮಟ್ಕಾ (Matka) ದಂಧೆಗೆ ಸಂಪೂರ್ಣ ಕಡಿವಾಣ ಹಾಕುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಸೂಚನೆ ನೀಡಿದ್ದಾರೆ. ಶನಿವಾರ ಹಗರಿಬೊಮ್ಮನಹಳ್ಳಿ ತಾಲೂಕು ಕೆಡಿಪಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಕ್ರಮ ಮರಳು ಸಾಗಾಟ ಹಾಗೂ ಮಟ್ಕಾ ದಂಧೆ ತಾಲೂಕಿನಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಬಗ್ಗೆ ಸಾಕಷ್ಟು ದೂರುಗಳಿವೆ. ಇದಕ್ಕೆ ಸಂಪೂರ್ಣ ಕಡಿವಾಣ ಹಾಕಲೇಬೇಕಿದೆ ಎಂದು ಹೇಳಿದರು.
ಪೊಲೀಸರು ಹಾಗೂ ಆರ್‌ಟಿಒ ಅಧಿಕಾರಿಗಳು ತಂಡವಾಗಿ ಕೆಲಸ ಮಾಡಿ, ಈ ಬಗ್ಗೆ ಗಮನ ಹರಿಸಬೇಕು ಎಂದು ಸೂಚನೆ ನೀಡಿದರು.
ಇದನ್ನೂ ಓದಿ: Raichur News: ಮಸ್ಕಿ; ವನಸಿರಿ ಫೌಂಡೇಶನ್ ನಿಂದ ವನಮಹೋತ್ಸವ ಕಾರ್ಯಕ್ರಮ
ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಗಳಲ್ಲಿ ಬೆಡ್ ಕೊರತೆ ಬಗ್ಗೆ ಪ್ರಶ್ನಿಸಿದಾಗ ಮಾಹಿತಿ ನೀಡದ ಅಧಿಕಾರಿಗಳ ವಿರುದ್ದ ಗರಂ ಆದ ಸಚಿವರು, ಹುಡುಗಾಟ ಆಡುತ್ತೀರಾ ಎಂದು ತರಾಟೆಗೆ ತೆಗೆದುಕೊಂಡರು. ಹಾಸ್ಟೆಲ್ ಗಳಲ್ಲಿ ಯಾವುದೇ ಕೊರತೆ ಇದ್ದರೆ ತಕ್ಷಣ ಗಮನಕ್ಕೆ ತನ್ನಿ. ನಾನು ದಿಢೀರ್ ಭೇಟಿ ನೀಡಿದಾಗ ಲೋಪ ಕಂಡು ಬಂದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪಡಿತರ ಚೀಟಿ ಯಲ್ಲಿ ಹೆಸರು ತೆಗೆದು ಹಾಕಿರುವುದರಿಂದ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ಶಾಸಕ ನೇಮರಾಜ್ ನಾಯ್ಕ್ ಪ್ರಸ್ತಾಪಿಸಿದಾಗ, ಸಚಿವರು ಆಹಾರ ಮತ್ತು ನಾಗರಿಕ ಇಲಾಖೆ ಶಿರಸ್ತೇದಾರ್ ನಾಗರಾಜ್ ಅವರನ್ನು ತರಾಟೆಗೆ ತೆಗೆದುಕೊಂಡರು. ಬಡವರಿಗೆ ತೊಂದರೆ ಕೊಡಬಾರದು. ಸೂಕ್ತ ಮಾಹಿತಿ ಇಲ್ಲದೆ ಬಂದಿದ್ದೀರಿ. ಇನ್ಮುಂದೆ ಇದೆಲ್ಲ ನಡೆಯಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: Electric Shock : ವಿದ್ಯುತ್ ದುರಂತಕ್ಕೆ ಒಂದೇ ಕುಟುಂಬದ ಮೂವರು ಬಲಿ; ಸರ್ಕಾರದಿಂದ ತಲಾ 2 ಲಕ್ಷ ರೂ. ಪರಿಹಾರ
ನಮ್ಮ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ ಜಾರಿಯಲ್ಲಿ ಅಸಡ್ಡೆ ತೋರಬಾರದು ಎಂದು ಹೇಳಿದರು.
ತಾಲೂಕಿನಲ್ಲಿ ಮಳೆ ಕೊರತೆ ಲಕ್ಷಣ ಕಂಡು ಬರುತ್ತಿದೆ. ತಕ್ಷಣ ಬೆಳೆವಿಮೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿ. ಶೇಂಗಾ, ಮೆಕ್ಕೆಜೋಳಕ್ಕೆ ವಿಮೆ ಮೊತ್ತ ಹೆಚ್ಚು ಬರುತ್ತದೆ. ನೈಸರ್ಗಿಕ ವಿಕೋಪ ಆದರೆ ವಿಮೆ ನೆರವಿಗೆ ಬರುತ್ತದೆ ಎಂದು ಜಿಲ್ಲಾಧಿಕಾರಿ ದಿವಾಕರ್ ತಿಳಿಸಿದರು.
ನರೇಗಾ ಯೋಜನೆಯ ಸಂಪೂರ್ಣ ಪ್ರಯೋಜನ ಪಡೆಯಬೇಕು. ಬೋಗಸ್ ಬಿಲ್ ಗಳನ್ನು ಮಾಡಿ ಹಣ ದುರುಪಯೋಗ ಮಾಡಿಕೊಂಡರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.
ಮನೆ ಬಾಗಿಲಿಗೆ ಇ ಸ್ವತ್ತು ಅಭಿಯಾನ ಜಿಲ್ಲಾ ಮಟ್ಟದಲ್ಲಿ ಮಾಡುತ್ತಿದ್ದು ಹಗರಿಬೊಮ್ಮನಹಳ್ಳಿ ಯಲ್ಲೂ ಪರಿಣಾಮಕಾರಿಯಾಗಿ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ರೈತರಿಗೆ ಅಗತ್ಯ ದಾಖಲೆ ಹಾಗೂ ಇತರೆ ಸೇವೆ ತ್ವರಿತ ವಾಗಿ ದೊರಕುವಂತಾಗಬೇಕು, ಪಿಡಿಒಗಳ ಕಾರ್ಯವೈಖರಿ ಬಗ್ಗೆ ಸಾಕಷ್ಟು ದೂರುಗಳಿವೆ. ಹೀಗಾಗಿ ಪಂಚಾಯಿತಿ ಪಿಡಿಒಗಳಿಗೆ ಪಂಚತಂತ್ರ -2 ಅಡಿ ಬಯೋಮೆಟ್ರಿಕ್ ಕಡ್ಡಾಯಗೊಳಿಸಿ ವೇತನ ಪಾವತಿ ಮಾಡುವಂತೆ ಸಚಿವರು ಇದೇ ಸಂದರ್ಭದಲ್ಲಿ ಜಿ.ಪಂ. ಸಿಇಒ ಸದಾಶಿವ ಪ್ರಭು ಅವರಿಗೆ ಸೂಚನೆ ನೀಡಿದರು. ಒಂದೊಮ್ಮೆ ಬಯೋಮೆಟ್ರಿಕ್ ಇಲ್ಲದಿದ್ದರೆ ಅನಧಿಕೃತ ಗೈರು ಎಂದು ಪರಿಗಣಿಸಲು ನಿರ್ದೇಶನ ನೀಡಿದರು.
ಇದನ್ನೂ ಓದಿ: Viral News : ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಎಮ್ಮೆಗಳು; ಕಾಲುವೆಗೆ ಹಾರಿ ರಕ್ಷಣೆ
ಈ ಸಂದರ್ಭದಲ್ಲಿ ಎಸ್ ಪಿ ಹರಿಬಾಬು, ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು ಉಪಸ್ಥಿತರಿದ್ದರು.