ಬೆಂಗಳೂರು: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ತೆಗೆದುಕೊಳ್ಳುವವರು ಕೂಡ ಸಿಇಟಿ (KCET 2023) ಬರೆಯಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ. ಮೇ 20 ಮತ್ತು 21 ರಂದು ಸಿಇಟಿ-2023 ನಡೆಯಲಿದ್ದು, ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯನ್ನು ಬರೆಯಲು ತೀರ್ಮಾನಿಸಿದ್ದರೂ ಸಿಇಟಿಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ.
ಏ.21ರಂದು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ ನಂತರ, ನಿರೀಕ್ಷೆಗಿಂತ ಕಡಿಮೆ ಅಂಕ ಪಡೆದ ಹಿನ್ನೆಲೆಯಲ್ಲಿ ಕೆಲವು ವಿದ್ಯಾರ್ಥಿಗಳು ದ್ವಿತೀಯ ಪಿಯು ಪೂರಕ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸಿಇಟಿ-2023ಕ್ಕೆ ಹಾಜರಾಗಲು ಅರ್ಹತೆಯ ಮಾನದಂಡಗಳ ಬಗ್ಗೆ ಕೆಇಎ ಸ್ಪಷ್ಟನೆ ನೀಡಿದೆ.
ಸಿಇಟಿ-2023ಕ್ಕೆ ನೋಂದಣಿ ಮಾಡಿ ಶುಲ್ಕ ಪಾವತಿಸಿರುವ ಎಲ್ಲಾ ಅಭ್ಯರ್ಥಿಗಳು, ಮೇ 20 ಮತ್ತು 21 ರಂದು ನಡೆಸಲಾಗುವ ಸಿಇಟಿ-2023 ಪರೀಕ್ಷೆಗೆ ಹಾಜರಾಗಬೇಕು. ಈ ಹಿಂದೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಆಯಾ ವರ್ಷದ ಸಿಇಟಿ ಪರೀಕ್ಷೆಗೆ ಹಾಜರಾಗಿದ್ದರೆ ಮಾತ್ರ ನಿಯಮಗಳ ಪ್ರಕಾರ ಸೀಟು ಹಂಚಿಕೆಗೆ ಪರಿಗಣಿಸಲಾಗುತ್ತಿತ್ತು. ಅದೇ ನಿಯಮವನ್ನು ಈ ಬಾರಿಯೂ ಪಾಲಿಸಲಾಗುತ್ತದೆ ಎಂದು ಅಭ್ಯರ್ಥಿಗಳು ಮತ್ತು ಪೋಷಕರ ಗಮನಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಂದಿದೆ.
ಮೇ 20, 21 ರಂದು ಸಿಇಟಿ ಪರೀಕ್ಷೆ
ಈ ಬಾರಿ ಮೇ 20, 21 ಮತ್ತು 22ರಂದು ಸಿಇಟಿ-2023 ಪರೀಕ್ಷೆ ನಡೆಯಲಿದೆ ಎಂದು ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. ಅಲ್ಲದೆ ಪರೀಕ್ಷೆಯ ವೇಳಾ ಪಟ್ಟಿಯನ್ನು (CET Exam Time table) ಪ್ರಕಟಿಸಿದ್ದು, ಯಾವಾಗ ಯಾವ ಪರೀಕ್ಷೆ ನಡೆಯಲಿದೆ ಎಂಬ ಮಾಹಿತಿಯನ್ನು ಒದಗಿಸಿದೆ.
ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿರುವ ವೇಳಾಪಟ್ಟಿ ಪ್ರಕಾರ,
ಮೇ 20- ಜೀವಶಾಸ್ತ್ರ ಮತ್ತು ಗಣಿತ
ಮೇ 21- ರಾಸಾಯನಶಾಸ್ತ್ರ, ಭೌತಶಾಸ್ತ್ರ
ಮೇ 22- ಹೊರನಾಡು, ಗಡಿನಾಡು ಕನ್ನಡಿಗರಿಗೆ ಕನ್ನಡ ಪರೀಕ್ಷೆ ನಡೆಯಲಿದೆ. ಬೆಂಗಳೂರು, ಬೀದರ್, ಬೆಳಗಾವಿ, ಬಳ್ಳಾರಿ, ವಿಜಯಪುರ, ಮಂಗಳೂರು ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಈ ಪರೀಕ್ಷೆ ನಡೆಯಲಿದೆ.
ಇದನ್ನೂ ಓದಿ | 2nd PUC Result 2023 : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ. 74.67 ವಿದ್ಯಾರ್ಥಿಗಳು ಪಾಸ್; ವೆಬ್‌ಸೈಟ್‌ನಲ್ಲಿ ರಿಸಲ್ಟ್
ವೃತ್ತಿಶಿಕ್ಷಣ ಕೋರ್ಸುಗಳಾದ ವೈದ್ಯಕೀಯ, ದಂತ ವೈದ್ಯಕೀಯ, ಇಂಡಿಯನ್ ಸಿಸ್ಟಮ್ಸ್ ಆಫ್ ಮೆಡಿಸಿನ್ ಮತ್ತು ಹೋಮಿಯೋಪತಿ (ಆಯುಶ್), ಎಂಜಿನಿಯರಿಂಗ್/ವಾಸ್ತುಶಿಲ್ಪ ಕೋರ್ಸುಗಳು, ಫಾರ್ಮ್ ಸೈನ್ಸ್ ಅಂದರೆ ಬಿಎಸ್ಸಿ. (ಕೃಷಿ), ಬಿ.ಎಸ್.ಸಿ. (ರೇಷ್ಮೆ ಕೃಷಿ), ಬಿ.ಎಸ್.ಸಿ (ತೋಟಗಾರಿಕೆ), ಬಿ.ಎಸ್.ಸಿ (ಅರಣ್ಯ), ಬಿ.ಎಸ್.ಸಿ. ಬಿ.ಎಸ್.ಕೆ (ಆಹಾರ ವಿಜ್ಞಾನ), ಬಿಟೆಕ್ (ಡೈರಿ ಟೆಕ್), ಬಿಎಫ್ಎಸ್ಸಿ (ಫಿಶರೀಸ್), ಬಿ.ಟೆಕ್ (ಫುಡ್ ಸೈನ್ಸ್ & ಟೆಕ್), ಅಕ್ರಿ ಬಯೋ ಟೆಕ್, ಬಿಎಚ್ಎಸ್ಸಿ (ಹೋಮ್ ಸೈನ್ಸ್), ಬಿ.ಟೆಕ್ (ಅಗ್ರಿ ಎಂಗ್ಜಿ) ), B.Sc. (ಅಗ್ರಿ ಮಾರ್ಕೆಟಿಂಗ್ & ಕೋ-ಆಪ್), ಬಿ-ಫಾರ್ಮಾ, ಫಾರ್ಮಾ-ಡಿ ಕೋರ್ಸುಗಳ ಪ್ರವೇಶಕ್ಕೆ ಈ ಪರೀಕ್ಷೆ ನಡೆಸಲಾಗುತ್ತದೆ. ರಾಜ್ಯ ಸರ್ಕಾರ ನೀಡಿದ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ.