ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 5 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಟರ್ಮಿನಲ್ 2, ವಿದೇಶಿ ವಿಮಾನಗಳ ಹಾರಾಟಕ್ಕೆ ಸಜ್ಜಾಗಿದೆ. ಸೆಪ್ಟೆಂಬರ್ 1ರಿಂದ ವಿದೇಶಿ ವಿಮಾನಯಾನ ಸೇವೆ ಪ್ರಾರಂಭ ಮಾಡುವುದಾಗಿ ಬಿಐಎಎಲ್ ತಿಳಿಸಿತ್ತು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಇದೀಗ ಸೆ.12ರಿಂದ ಅಂತಾರಾಷ್ಟ್ರೀಯ ವಿಮಾನ ಸೇವೆ ಆರಂಭಿಸಲು ಮುಹೂರ್ತ ನಿಗದಿಯಾಗಿದೆ.
ಕಳೆದ ವರ್ಷ ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿ ಅವರು ಟರ್ಮಿನಲ್ 2 ಅನ್ನು ಉದ್ಘಾಟಿಸಿದ್ದರು. ನಂತರ ಕೇವಲ ಮೂರು ದೇಶಿಯ ವಿಮಾನಯಾನ ಸಂಸ್ಥೆಗಳು ಕಾರ್ಯಾಚರಣೆ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ, ನಾಳೆಯಿಂದ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಕೂಡ ಲಭ್ಯವಾಗಲಿದೆ.
ಈವರೆಗೆ ಟಿ-2ನಲ್ಲಿ ಆಕಾಸ್, ಏರ್ ಏಷ್ಯಾ, ಮತ್ತು ವಿಸ್ತಾರ ವಿಮಾನಯಾನ ಸಂಸ್ಥೆಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು. ಇನ್ನುಮುಂದೆ ದೇಶಿಯ ವಿಮಾನಯಾನ ಸೇವೆಗಳ ಜತೆಗೆ ವಿದೇಶಿ ವಿಮಾನಯಾನ ಸಂಸ್ಥೆಗಳು ವಿಮಾನಯಾನ ಸೇವೆ ಒದಗಿಸಲಿವೆ.
ಇದನ್ನೂ ಓದಿ | DK Shivakumar: ಕರ್ನಾಟಕ ಹೂಡಿಕೆದಾರರ ನೆಚ್ಚಿನ ತಾಣ: ನೆದರ್ಲೆಂಡ್ಸ್ ನಿಯೋಗಕ್ಕೆ ಡಿಸಿಎಂ ಡಿಕೆಶಿ ಆಹ್ವಾನ
ವಿದೇಶಿ ವಿಮಾನಯಾನ ಹಾರಾಟಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಟಿ1 ನಲ್ಲಿ ಇದ್ದಂತಹ ಕಸ್ಟಮ್ಸ್ ಅಧಿಕಾರಿಗಳ ಕಚೇರಿ, ಚಿಲ್ಲರೆ ಹಾಗೂ ಆಹಾರ ಮಳಿಗೆಗಳು ಸಹ ಸ್ಥಳಾಂತರ ಆಗಿವೆ. ಇನ್ನು ಬಿ.ಐ.ಎ.ಎಲ್ ಸಿಬ್ಬಂದಿ ಮೊದಲ ವಿಮಾನ ಹತ್ತಲು ಆಗಮಿಸುವ ಪ್ರಯಾಣಿಕರನ್ನು ಜಾನಪದ ಕಲಾತಂಡಗಳೊಂದಿಗೆ ಸ್ವಾಗತಿಸಲು ಸಜ್ಜಾಗಿದ್ದಾರೆ. ಜತೆಗೆ ಟಿ-1 ರಲ್ಲಿ ವಿದೇಶಿ ವಿಮಾನ ಹಾರಾಟ ಮುಂದುವರಿಯಲಿದೆ. ಮುಂದಿನ ದಿನಗಳಲ್ಲಿ ಟರ್ಮಿನಲ್-1 ರಲ್ಲಿ ಸಂಪೂರ್ಣವಾಗಿ ದೇಶಿಯ ವಿಮಾನಗಳು ಹಾರಾಟ ಮಾಡಲಿದ್ದು. ಟರ್ಮಿನಲ್ 2ರಲ್ಲಿ 27 ವಿದೇಶಿ ವಿಮಾನಗಳು ಸೇರಿದಂತೆ 2 ದೇಶಿ ವಿಮಾನಗಳು ಮಾತ್ರ ಹಾರಾಟ ಮಾಡಲಿವೆ.