ಬನವಾಸಿ: ಮಲೆನಾಡಿನಲ್ಲಿ ಗಾಳ ಹಾಕಿ ಮೀನು ಹಿಡಿಯುವುದು ಹಲವರ ನೆಚ್ಚಿನ ಹವ್ಯಾಸ. ಅದರೊಂದಿಗೆ ಮೀನು ಪ್ರಿಯರ ಹಳ್ಳಿಗಳಲ್ಲಿ ಸಾಂಘಿಕವಾಗಿ ನಡೆಯುವ ಕೆರೆ ಬೇಟೆಯೂ ಅಷ್ಟೇ ರೋಚಕ. ಊರಿನ ಜನರೆಲ್ಲ ಕೆರೆಯಲ್ಲಿ ಇಳಿದು, ನೀರಿನಲ್ಲಿ ಮೀನುಗಳನ್ನು ಹುಡುಕಿ, ಹಿಡಿಯುವುದೇ ಕೆರೆ ಬೇಟೆ. ಇಂತಹ ಒಂದು ಕೆರೆ ಬೇಟೆ (Kere Bete) ಸಮೀಪದ ಗುಡ್ನಾಪೂರ ಗ್ರಾಮ ಪಂಚಾಯಿತಿಯ ಅಜ್ಜರಣಿ ಗ್ರಾಮದ ರಾಮತೀರ್ಥ ಕೆರೆಯಲ್ಲಿ ಶುಕ್ರವಾರ (ಮಾ.24) ನಡೆಯಿತು.
ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಬಿದಿರಿನಿಂದ ಮಾಡಿದ ಕುಣಿಗಳನ್ನು ಹಿಡಿದು ಮುಂಜಾನೆಯೇ ಮೀನು ಬೇಟೆಗೆ ಇಳಿದು ಅದೃಷ್ಟ ಪರೀಕ್ಷೆಗೆ ಮುಂದಾದರು. ಕೆಲವರಿಗೆ ಮೀನು ಸಿಕ್ಕರೆ, ಇನ್ನೂ ಕೆಲವರು ಮೀನು ಸಿಗದೆ ನಿರಾಸೆಯಿಂದ ಮರಳಿದರು. ರಸ್ತೆಯ ಪಕ್ಕದಲ್ಲಿ ನಿಂತು ನೂರಾರು ಜನ ಕೆರೆ ಬೇಟೆಯ ದೃಶ್ಯ ನೋಡುತ್ತ ಸಂಭ್ರಮಿಸಿದರು.
ಇದನ್ನೂ ಓದಿ: Amit Shah visit : ಅಮಿತ್ ಶಾ ಬೆನ್ನು ತಟ್ಟಿ ಮಾತಾಡಿಸಿದ್ದರಿಂದ ಆನೆ ಬಲ ಬಂದಿದೆ ಎಂದ ಬಿ.ವೈ ವಿಜಯೇಂದ್ರ
ವರ್ಷಕ್ಕೊಮ್ಮೆ ನಡೆಯುವ ಕೆರೆ ಬೇಟೆ, ಕೇವಲ ಮೀನು ಹಿಡಿಯುವ ಕಾಯಕ ಅಲ್ಲದೆ ಕ್ರೀಡೆಯ ಮನೋರಂಜನೆಯನ್ನು ನೀಡುತ್ತದೆ. ಕಳೆದ ಎರಡು ವರ್ಷ ಕೆರೆ ನೀರು ಬತ್ತಿರಲಿಲ್ಲ. ಈ ಬಾರಿ ಕೆರೆ ಬತ್ತಿರುವುದರಿಂದ ಗ್ರಾಮಸ್ಥರು ಕೆರೆ ಬೇಟೆಗೆ ಮುಂದಾಗಿದ್ದಾರೆ. ಕೆರೆ ಬೇಟೆಯಿಂದ ಗ್ರಾಮದ ಜನರಲ್ಲಿ ಸ್ನೇಹ ಭಾವನೆ ಮೂಡುತ್ತದೆ ಎಂದು ಊರಿನ ಗ್ರಾಮಸ್ಥ ನಂಜುಂಡಿ ಅಭಿಪ್ರಾಯ ವ್ಯಕ್ತಪಡಿಸಿದರು. ನೂರಾರು ಜನರು ಈ ಕೆರೆ ಬೇಟೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಇದನ್ನೂ ಓದಿ: WPL 2023: ಮುಂಬೈ vs ಯುಪಿ ವಾರಿಯರ್ಸ್ ಎಲಿಮಿನೇಟರ್ ಕಾದಾಟ; ಯಾರಿಗೆ ಒಲಿಯಲಿದೆ ಫೈನಲ್ ಅದೃಷ್ಟ