Site icon Vistara News

Prajadhwani : ಕಾಂಗ್ರೆಸ್‌ನಲ್ಲಿ ಭಿನ್ನಮತ ಒಪ್ಪಿಕೊಂಡ ಮುನಿಯಪ್ಪ, ರಾಜಕೀಯವಾಗಿ ಕೊಂದೇಬಿಟ್ರು ಎಂದ ಸುಧಾಕರ್‌

ಕೋಲಾರ: ಕಾಂಗ್ರೆಸ್‌ನ ಮಹತ್ವಾಕಾಂಕ್ಷೆಯ ಪ್ರಜಾಧ್ವನಿ ಯಾತ್ರೆಯಲ್ಲಿ ಕಾಣಿಸಿರುವ ಒಡಕಿನ ಧ್ವನಿಯನ್ನು ಹಿರಿಯ ನಾಯಕ ಕೆ.ಎಚ್.‌ ಮುನಿಯಪ್ಪ ಅವರೇ ಒಪ್ಪಿಕೊಂಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಕೋಲಾರದಲ್ಲಿ ಇರುವ ಭಿನ್ನಮತವನ್ನು ಅವರೇ ಒಪ್ಪಿದ್ದಾರೆ.

ಕೋಲಾರದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೇಸ್ ಮನೆಯಲ್ಲಿ ಕೆಲವೊಮ್ಮೆ ಭಿನ್ನಾಭಿಪ್ರಾಯಗಳು ಬರೋದು ಸಹಜ ಎಂದು ಹೇಳಿದರು. ಮುನಿಯಪ್ಪ ಅವರು ಪ್ರಜಾಧ್ವನಿ ಯಾತ್ರೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೂ ಬಳಿಕ ನಾಪತ್ತೆಯಾಗಿದ್ದರು. ಅವರಿಗೆ ರಮೇಶ್‌ ಕುಮಾರ್‌, ಕೊತ್ತೂರು ಮಂಜುನಾಥ್‌, ಎಂ.ಸಿ. ಸುಧಾಕರ್‌ ಮೇಲೆ ಇರುವ ಅಸಮಾಧಾನದಿಂದ ಹೀಗೆ ಮಾಡಿದ್ದಾರೆ ಎಂದು ಹೇಳಲಾಗುತ್ತಿತ್ತು.

ʻʻನಂಜೇಗೌಡ ನೀನು ದೆಹಲಿಗೆ, ಬೆಂಗಳೂರಿಗೆ ಎಲ್ಲೂ ಬರಬೇಡ. ನೀನು ಪಕ್ಷ ಸಂಘಟನೆ‌ ಮಾಡು ಎಂದು ಹೇಳಿ ಟಿಕೆಟ್ ಭರವಸೆ ನೀಡಿದ್ದೆ. ಅದರಂತೆ ನಂಜೇಗೌಡ ಇಂದು ಶಾಸಕರಾಗಿ ಉತ್ತಮ ಸೇವೆ ಮಾಡಿದ್ದಾರೆ. ನಂಜೇಗೌಡ ಅವರನ್ನ ೫೦ ಸಾವಿರ‌ ಮತಗಳ ಅಂತರದಿಂದ ಗೆಲ್ಲಿಸಿ. ಯಾರೂ ಏನೇ ಹೇಳಿದ್ರು ತಲೆ ಕೆಡಿಸಿಕೊಳ್ಳಬೇಡಿ. ನಂಜೇಗೌಡರನ್ನು ಬೆಂಬಲಿಸಿʼʼ ಎಂದು ಮಾಲೂರಿನಲ್ಲಿ ಅವರು ಮನವಿ ಮಾಡಿದರು.

ರಾಜಕೀಯವಾಗಿ ಕೊಂದು ಹಾಕಿದ್ದಾರೆ ಎಂದ ಸುಧಾಕರ್‌
ಈ ನಡುವೆ ಕೆ.ಎಚ್‌. ಮುನಿಯಪ್ಪ ಅವರ ಪರಿಸ್ಥಿತಿಯ ಬಗ್ಗೆ ಬೇಸರದ ಪ್ರತಿಕ್ರಿಯೆ ನೀಡಿರುವ ಸಚಿವ ಕೆ. ಸುಧಾಕರ್‌, ʻʻಕಾಂಗ್ರೆಸ್‌ನವರು ಕೆ.ಎಚ್ ಮುನಿಯಪ್ಪ ಅವರನ್ನು ರಾಜಕೀಯವಾಗಿ ಎಂದೋ ಕೊಂದುಹಾಕಿದ್ದಾರೆ. ಅವರು ರಾಜಕೀಯವಾಗಿ ಯಾವ ರೀತಿ ಬಳಲಿದ್ದಾರೆ ಎಂದು ನನಗೆ ಗೊತ್ತು. ಅವರಾಗಿರೋದಕ್ಕೆ ಆ ಪಕ್ಷದಲ್ಲಿ ಇದ್ದಾರೆ. ಸ್ವಾಭಿಮಾನ ಬಿಟ್ಡು ಆ ಪಕ್ಷದಲ್ಲಿ ಇದ್ದಾರೆ. ನಮ್ಮಂಥವರಾಗಿದ್ದರೆ ಒಂದೇ ಒಂದು ದಿವಸ ಆ ಪಕ್ಷದಲ್ಲಿ ಇರುತ್ತಾ ಇರಲಿಲ್ಲʼʼ ಎಂದಿದ್ದಾರೆ.

ಬಸ್‌ ಒಂದೇ ಸ್ಟೇರಿಂಗ್‌ ಎರಡು: ಪ್ರಜಾಧ್ವನಿ ಯಾತ್ರೆಗೆ ವ್ಯಂಗ್ಯ
ಇದರ ಜತೆಗೆ ಪ್ರಜಾಧ್ವನಿ ಯಾತ್ರೆಯನ್ನು ವ್ಯಂಗ್ಯವಾಡಿರುವ ಸುಧಾಕರ್‌, ಪ್ರತ್ಯೇಕ ಬಸ್‌ಗಳಲ್ಲಿ ಪ್ರಜಾಧ್ವನಿ ಯಾತ್ರೆ ನಡೆಯುತ್ತಿದೆ. ಉತ್ತರಿಂದ ಒಬ್ಬರು ದಕ್ಷಿಣದಿಂದ ಒಬ್ಬರು. ಮುಳಬಾಗಿಲಿನಿಂದ ಒಬ್ಬರು ಬಸವಕಲ್ಯಾಣದಿಂದ ಒಬ್ಬರು ಹೊರಟಿದ್ದಾರೆ. ನಾನು ಮೊದಲೇ ಹೇಳಿದ್ದೆ ಬಸ್ ಒಂದೇ ಸ್ಟೇರಿಂಗ್‌ ಮಾತ್ರ ಎರಡು ಅಂತ. ಪ್ರಜಾಧ್ವನಿ ಯಾತ್ರೆಯ ಬಸ್‌ಗೆ ಎರಡು ಡೋರ್‌ಗಳು ಇವೆʼʼ ಎಂದರು.

Exit mobile version