ಧಾರವಾಡ: ಕೆಐಎಡಿಬಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ತನಿಖೆ ಕೊನೆಗೂ ಶುರುವಾಗಿದೆ. ರೈತರಿಂದ ಸ್ವಾಧೀನಪಡಿಸಿಕೊಂಡ ಭೂಮಿಗೆ ಒಮ್ಮೆ ಪರಿಹಾರ ನೀಡಿ, ನಂತರ ಅದೇ ರೈತರ ಹೆಸರಿನಲ್ಲಿ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ ಎರಡನೇ ಬಾರಿ ಪರಿಹಾರ ಪಡೆದು ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಅಕ್ರಮದ (KIADB Scam) ಬಗ್ಗೆ ಹಿರಿಯ ಅಧಿಕಾರಿಗಳ ತಂಡದಿಂದ ತನಿಖೆ ಪ್ರಾರಂಭ ಮಾಡಲಾಗಿದೆ. ಈಗಿನ ಆರೋಪದ ಪ್ರಕಾರ ಸುಮಾರು ೨೧ ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಮಾಡಿದ್ದಾರೆ ಎಂದು ಹೇಳಲಾಗಿದೆ.
ಧಾರವಾಡದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಕಚೇರಿ ಈ ಅಕ್ರಮದ ಪ್ರಮುಖ ಕೇಂದ್ರವಾಗಿದೆ. ಇತ್ತೀಚಿಗಷ್ಟೇ 2010ರಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಯ ಪರಿಹಾರ ಮೊತ್ತದಲ್ಲಿ ಈಗಾಗಲೇ ರೈತರಿಗೆ ಪಾವತಿಸಿರುವ ಮೊತ್ತವನ್ನು ಮತ್ತೆ 2022ರಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಮತ್ತೆ ಲೂಟಿ ಮಾಡಿದ್ದರ ಬಗ್ಗೆ ಆರೋಪ ಕೇಳಿ ಬಂದಿತ್ತು.
21,14,78,468 ರೂ.ಗಳನ್ನು ಮೊತ್ತವನ್ನು ಹಲವಾರು ರೈತರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆಗೆದು ಆರ್‌ಟಿಜಿಎಸ್ ಮೂಲಕ ಎರಡನೇ ಬಾರಿಗೆ ಜಮಾ ಮಾಡಿಸಿಕೊಳ್ಳಲಾಗಿದೆ ಎಂದು ಜನ ಜಾಗೃತಿ ಸಂಘದ ಬಸವರಾಜ ಕೊರವರ್ ಆರೋಪಿಸಿದ್ದರು. ಆಗಿನ ಧಾರವಾಡದ ವಿಶೇಷ ಭೂಸ್ವಾಧೀನಾಧಿಕಾರಿ ವಿ.ಡಿ. ಸಜ್ಜನ್ ಅವರ ಅವಧಿಯಲ್ಲಿ 2021ರ ಏಪ್ರಿಲ್‌ನಿಂದ 2022ರ ಏಪ್ರಿಲ್‌ವರೆಗೆ ಅಂದಾಜು 140 ಕೋಟಿ ರೂಪಾಯಿ ಅನುದಾನ ಬಿಡುಗಡೆ ಆಗಿದೆ. ಹೀಗಾಗಿ ಇದರಲ್ಲಿ ಐಎಎಸ್ ಅಧಿಕಾರಿ ಹಾಗೂ ಕೆಐಎಡಿಬಿಯ ಸಿಇಒ ಎನ್. ಶಿವಶಂಕರ್, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರ ಆಪ್ತ ಕಾರ್ಯದರ್ಶಿ ದಯಾನಂದ ಭಂಡಾರಿ ಸೇರಿ ಅನೇಕರು ಶಾಮೀಲಾಗಿದ್ದಾರೆ ಎಂದು ಜನಜಾಗೃತಿ ಸಂಘ ಆರೋಪಿಸಿತ್ತು. ಇದೀಗ ಈ ಹಗರಣಕ್ಕೆ ಸಂಬಂಧಿಸಿದಂತೆ ಕೆಐಎಡಿಬಿ ಹಿರಿಯ ಅಧಿಕಾರಿಗಳಿಂದ ತನಿಖೆ ಶುರುವಾಗಿದೆ.
ಇದನ್ನೂ ಓದಿ |Border Dispute | ರಾಜ್ಯದ ನೀತಿ-ನಿಲುವನ್ನು ಸ್ಪಷ್ಟಪಡಿಸಲಾಗಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಈ ಬಗ್ಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪ್ರತಿಕ್ರಿಯಿಸಿ, ಹಿರಿಯ ಅಧಿಕಾರಿಗಳು ಸೇರಿ ಒಟ್ಟು 9 ಮಂದಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಬಳಿಕ ವರದಿಯನ್ನು ಬೆಂಗಳೂರಿಗೆ ಕಳುಹಿಸಲಾಗುವುದು. ತನಿಖೆಯಲ್ಲಿ ಅಕ್ರಮ ಕಂಡು ಬಂದರೆ ತಪ್ಪು ಮಾಡಿದವರಿಗೆ ಖಂಡಿತ ಶಿಕ್ಷೆ ಆಗಲಿದೆ ಎಂದು ತಿಳಿಸಿದ್ದಾರೆ.
ಇನ್ನು ಈ ಅಕ್ರಮಕ್ಕೆ ಬ್ಯಾಂಕ್ ಅಧಿಕಾರಿಗಳು ಕೂಡ ಸಾಥ್ ನೀಡಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿತ್ತು. ಏಕೆಂದರೆ ಇಷ್ಟೊಂದು ದೊಡ್ಡ ಮೊತ್ತದ ಹಣ ವರ್ಗಾವಣೆ ಆಗಲು ಹೇಗೆ ಸಾಧ್ಯ ಎಂಬುವುದೇ ಇದಕ್ಕೆ ಕಾರಣವಾಗಿತ್ತು. ಇದೀಗ ಆ ನಿಟ್ಟಿನಲ್ಲಿಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ಇದರ ತನಿಖೆಯನ್ನು ಕೆಐಎಡಿಬಿ ಅಧಿಕಾರಿಗಳೇ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಏಕೆಂದರೆ, ಅದೇ ಮಂಡಳಿಯ ಅಧಿಕಾರಿಗಳು ಯಾವತ್ತೂ ಅಕ್ರಮವನ್ನು ಸರಿಯಾಗಿ ಪತ್ತೆ ಹಚ್ಚಲಾರರು. ಎಲ್ಲವನ್ನೂ ಮುಚ್ಚಿಡುತ್ತಾರೆ ಎಂಬ ಆರೋಪವೂ ಕೇಳಿಬಂದಿದೆ. ಇದೇ ಕಾರಣಕ್ಕೆ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಜನಜಾಗೃತಿ ಸಂಘ ಒತ್ತಾಯಿಸಿದೆ.
ಇದನ್ನೂ ಓದಿ | PSI Scam | ಪಿಎಸ್‌ಐ ಹಗರಣದ ಪ್ರಧಾನ ಆರೋಪಿ ದಿವ್ಯಾ ಹಾಗರಗಿ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್