Site icon Vistara News

Kiccha Sudeep | ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿಯಾದ ಕಿಚ್ಚ ಸುದೀಪ್‌; ಜಿಲ್ಲೆಗೆ ಒಂದರಂತೆ 31 ಗೋವುಗಳ ದತ್ತು

kicha sudeep punyakoti project

ಬೆಂಗಳೂರು: ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿಯನ್ನಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ (Kiccha Sudeep) ಅವರನ್ನು ಸರ್ಕಾರ ನೇಮಕ ಮಾಡಿದೆ. ಈ ಸಂಬಂಧ ಗುರುವಾರ ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಅವರೊಂದಿಗೆ ನಟ ಸುದೀಪ್‌ ಗೋಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ನಟ ಸುದೀಪ್‌, ರಾಜ್ಯ ಸರ್ಕಾರ ಗೋಸಂಕುಲ ಸಂರಕ್ಷಣೆಯಲ್ಲಿ ಮಹತ್ವದ ಕೆಲಸ ಮಾಡುತ್ತಿದೆ. ನನ್ನನ್ನು ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿಯನ್ನಾಗಿ ನೇಮಕ ಮಾಡಿ ಸರ್ಕಾರ ಇನ್ನಷ್ಟು ಜವಾಬ್ದಾರಿ ಹೆಚ್ಚಿಸಿದೆ. ರಾಯಭಾರಿಯಾಗಿ ನೇಮಕ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಪ್ರಭು ಚವ್ಹಾಣ್ ಅವರಿಗೆ ಕೃತಜ್ಞತೆ ತಿಳಿಸುತ್ತೇನೆ ಎಂದರು.

Kiccha Sudeep

ಮುಂದುವರಿದು, ಸಾರ್ವಜನಿಕರು, ಚಿತ್ರರಂಗದ ಕಲಾವಿದರು, ಸಾರ್ವಜನಿಕ ಸಂಘ -ಸಂಸ್ಥೆಗಳು ಗೋವುಗಳನ್ನು ದತ್ತು ಪಡೆಯಬೇಕು ಎಂದು ಸುದೀಪ್ ಮನವಿ ಮಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಹುಟ್ಟುಹಬ್ಬದಂದು 11 ಗೋವು ದತ್ತು ಪಡೆದು, ತಮ್ಮ ಕನಸಿನ ಕೂಸಾದ ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ತಂದರು. ಜಿಲ್ಲೆಗೆ ಒಂದರಂತೆ 31 ಗೋವುಗಳನ್ನು ದತ್ತು ಪಡೆದಿರುವ ಸಚಿವ ಪ್ರಭು ಚವ್ಹಾಣ್ ಅವರಂತೆ ನಾನು ದತ್ತು ಪಡೆಯುತ್ತಿದ್ದೇನೆ ಎಂದು ಸಚಿವರಿಗೆ ಸುದೀಪ್ ತಿಳಿಸಿದರು.

100 ಸರ್ಕಾರಿ ಗೋಶಾಲೆ ಸ್ಥಾಪನೆ
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದ ನಂತರ 100 ಸರ್ಕಾರಿ ಗೋಶಾಲೆ ಸ್ಥಾಪಿಸಲಾಗುತ್ತಿದೆ.‌ ರಾಷ್ಟ್ರದಲ್ಲಿಯೇ ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕವಾಗಿದೆ. ಪ್ರಾಣಿ ಕಲ್ಯಾಣ ಮಂಡಳಿ, ಪ್ರಾಣಿ ಸಹಾಯವಾಣಿ ಕೇಂದ್ರ, ಪಶು ಸಂಜೀವಿನಿ ಆಂಬ್ಯುಲೆನ್ಸ್, ಗೋಮಾತಾ ಸಹಕಾರ ಸಂಘ, ಆತ್ಮ ನಿರ್ಭರ ಗೋಶಾಲೆ ಸ್ಥಾಪನೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಸಚಿವ ಪ್ರಭು ಚವ್ಹಾಣ್‌ ತಿಳಿಸಿದರು.

Kiccha Sudeep

ಜಾನುವಾರುಗಳ ದತ್ತು ಯೋಜನೆಯಡಿ ಪುಣ್ಯಕೋಟಿ ದತ್ತು ಪೋರ್ಟಲ್‌ನಲ್ಲಿರುವ ಯಾವುದೇ ಗೋಶಾಲೆಗಳ ಪ್ರತಿ ಜಾನುವಾರಿಗೆ ವಾರ್ಷಿಕ ರೂ.11,000/- (ರೂಪಾಯಿ ಹನ್ನೊಂದು ಸಾವಿರ ಮಾತ್ರ)ಗಳು, ಜಾನುವಾರುಗಳಿಗಾಗಿ ಆಹಾರ ಪೂರೈಕೆಗೆ ಯೋಜನೆಯಡಿ ಸಾರ್ವಜನಿಕರು ತಮ್ಮ ಜೀವನದ ವಿಶೇಷ ಸಂದರ್ಭಗಳಲ್ಲಿ (ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಇತ್ಯಾದಿ) ರಾಸುಗಳಿಗೆ ಒಂದು ದಿನಕ್ಕೆ 70 ರೂ.ಗಳು, ಗೋಶಾಲೆಗಳಿಗೆ ದೇಣಿಗೆ ಮತ್ತು ಗೋಶಾಲೆ ನಿರ್ವಹಣೆ ಯೋಜನೆಯಡಿ ಸಾರ್ವಜನಿಕರು ಪುಣ್ಯಕೋಟಿ ದತ್ತು ಪೋರ್ಟಲ್‌ನಲ್ಲಿರುವ ಯಾವುದೇ ಗೋಶಾಲೆಗಳಿಗೆ ಕನಿಷ್ಠ 10 ರೂಪಾಯಿಯಿಂದ ತಮ್ಮ ಶಕ್ತ್ಯಾನುಸಾರ ಎಷ್ಟು ಬೇಕಾದರೂ ಮೂಲಭೂತ ಸೌಕರ್ಯ ಹಾಗೂ ಇತರೆ ವೆಚ್ಚಗಳಿಗಾಗಿ ದೇಣಿಗೆ ನೀಡಬಹುದು. ಈ ಯೋಜನೆಗೆ 80 ಜಿ ಆದಾಯ ತೆರಿಗೆ ವಿನಾಯಿತಿ ನೀಡಲಾಗಿದೆ ಎಂದು ಸಚಿವರು ಪುಣ್ಯಕೋಟಿ ಯೋಜನೆ ಕುರಿತು ಮಾಹಿತಿ ನೀಡಿದರು.

ಗೋಶಾಲೆಗಳನ್ನು ಆರ್ಥಿಕವಾಗಿ ಸದೃಢಗೊಳಿಸಿ, ಸಾರ್ವಜನಿಕರ ಸಹಕಾರದಿಂದ ಯಾವುದೇ ಅಡಚಣೆಯಿಲ್ಲದೇ ನಡೆಸುವುದು ಈ ಯೋಜನೆ ಉದ್ದೇಶ. ಗೋವು ದತ್ತು, ಗೋಶಾಲೆಗೆ ದೇಣಿಗೆ ಮತ್ತು ಜಾನುವಾರುಗಳಿಗೆ ಆಹಾರ ಯೋಜನೆಯಡಿ ಸಾರ್ವಜನಿಕರು ಪಾಲ್ಗೊಳ್ಳುವಂತೆ ಗೋವುಗಳ ಪಾಲನೆಗೆ ಅವಕಾಶ ಕಲ್ಪಿಸಲಾಗಿದೆ. ಸರ್ಕಾರದೊಂದಿಗೆ ಕೈಜೋಡಿಸಿ ಗೋಸಂಕುಲ ಸಂರಕ್ಷಣೆಯಲ್ಲಿ ಭಾಗವಹಿಸಬೇಕು ಎಂದು ಪ್ರಭು ಚವ್ಹಾಣ್ ಅವರು ಚಿತ್ರನಟ ಸುದೀಪ್ ಅವರಿಗೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಚಿತ್ರನಟ ಸುದೀಪ್ ಅವರಿಗೆ ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿ ನೇಮಕಾತಿ ಪತ್ರ ವಿತರಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಇಲಾಖೆ ಕಾರ್ಯದರ್ಶಿ ಡಾ.ಸಲ್ಮಾ ಕೆ.ಫಾಹೀಮ್, ಆಯುಕ್ತೆ ಎಸ್.ಅಶ್ವಥಿ, ಅಪರ ನಿರ್ದೇಶಕ ಡಾ.ಶ್ರೀನಿವಾಸ್ ಸೇರಿದಂತೆ ಹಲವರಿದ್ದರು.

ಇದನ್ನೂ ಓದಿ | Border dispute | ಅತ್ತ ಸುಪ್ರೀಂ ಕೋರ್ಟ್‌ನಲ್ಲಿ ದಾವೆ, ಇತ್ತ ಮಾತುಕತೆಯ ವರಸೆ; ಮುಗಿಯದ ʼಮಹಾʼ ಗೋಳು

Exit mobile version