ದಾವಣಗೆರೆ: ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಫೆ 8, 9ರಂದು ವಾಲ್ಮೀಕಿ ಜಾತ್ರೆ ನಡೆಯಲಿದೆ. ಆದರೆ, ಈ ಬಾರಿ ನಟ ಕಿಚ್ಚ ಸುದೀಪ್ (Kichcha Sudeep) ಅವರಿಗೆ ಅಹ್ವಾನ ನೀಡಿಲ್ಲ. ಇದರಿಂದ ಅಭಿಮಾನಿಗಳಿಗೆ ಭಾರಿ ನಿರಾಸೆ ಉಂಟಾಗಿದೆ. ಸುದೀಪ್ ಅವರು ಬಂದಾಗ ಜಾತ್ರೆಯಲ್ಲಿ ಆಗುತ್ತಿರುವ ಗೊಂದಲಗಳ ಕಾರಣದಿಂದ ಅವರಿಗೆ ಜಾತ್ರಾ ಸಮಿತಿ ಆಹ್ವಾನ ನೀಡಿಲ್ಲ ಎನ್ನಲಾಗಿದೆ.
ಈ ವರ್ಷ ಯಾವುದೇ ಚಲನ ಚಿತ್ರ ನಟರನ್ನು ಜಾತ್ರೆಗೆ ಕರೆಸಿಲ್ಲ ಎಂದು ವಾಲ್ಮೀಕಿ ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ. ವಾಲ್ಮೀಕಿ ಸಮುದಾಯದ ನಾಯಕ ನಟ ಸುದೀಪ್ ಅವರು, ಕಳೆದ ಬಾರಿ ಜಾತ್ರೆಗೆ ಬರುತ್ತಾರೆ ಎಂದು ಹೇಳಲಾಗಿತ್ತು. ಅದರೆ, ಕೊನೆಗೆ ಸುದೀಪ್ ಬರಲ್ಲ ಎಂದು ಹೇಳುತಿದ್ದಂತೆ ಅಭಿಮಾನಿಗಳು ಚೇರ್‌ಗಳು ಮುರಿದು ಆಕ್ರೋಶ ಹೊರ ಹಾಕಿದ್ದರು. ಈ ರೀತಿಯ ಘಟನೆಗಳು ನಡೆಯದಂತೆ ಈ ಬಾರಿ ಜಾತ್ರಾ ಸಮಿತಿ ನಿರ್ಧರಿಸಿದೆ.
ಈ ಹಿಂದೊಮ್ಮೆ ಸುದೀಪ್ ಅವರು ಜಾತ್ರೆಗೆ ತೆರಳಿದ್ದಾಗ ಅಭಿಮಾನಿಗಳು ವೇದಿಕೆಗೆ ನುಗ್ಗಿ ಬಂದಿದ್ದರು. ಆಗ ಇದ್ದ ಹಿರಿಯರು, ಮಕ್ಕಳಿಗೆ ಗಾಯಗಳು ಆಗಿದ್ದವು. ಈ ಎಲ್ಲ ಗೊಂದಲಗಳಿಂದ ನಟ ಸುದೀಪ್ ಅವರನ್ನು ಕರೆಸದಿರಲು ವಾಲ್ಮೀಕಿ ಜಾತ್ರಾ ಸಮಿತಿ ನಿರ್ಧಾರ ಮಾಡಿದೆ.
ಇದನ್ನೂ ಓದಿ | Nirup Bhandari: ನಿರೂಪ್ ಅಭಿನಯದ ʼಸತ್ಯ ಸನ್ ಆಫ್ ಹರಿಶ್ಚಂದ್ರʼ ಚಿತ್ರದ ಫಸ್ಟ್ ಲುಕ್ ರಿಲೀಸ್
ಅಭಿಮಾನಿಗಳ ದಾಂಧಲೆ; ನಿಯಂತ್ರಿಸಲು ನಡೆದಿತ್ತು ಲಾಠಿಚಾರ್ಜ್
ಹರಿಹರದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ 2023ರ ಫೆ.9ರಂದು ವಾಲ್ಮೀಕಿ ಜಾತ್ರೆಯ ಸಭಾ ಕಾರ್ಯಕ್ರಮಕ್ಕೆ ನಟ ಕಿಚ್ಚ ಸುದೀಪ್ (Kiccha Sudeep) ಬಾರದಿದ್ದರಿಂದ ಹತಾಶರಾದ ಅಭಿಮಾನಿಗಳು ದಾಂಧಲೆ ನಡೆಸಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು.
ಸಂಜೆ 4.30ಕ್ಕೆ ಸುದೀಪ್ ಕಾರ್ಯಕ್ರಮಕ್ಕೆ ಬರಬೇಕಿತ್ತು. ಆದರೆ, ಸಂಜೆ 5 ಗಂಟೆಯಾದರೂ ಬಂದಿರಲಿಲ್ಲ. ಈ ಹಂತದಲ್ಲಿ ಮಠದ ಶ್ರೀಗಳಾದ ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರು ಅನಿವಾರ್ಯ ಕಾರಣಗಳಿಂದ ನಟ ಸುದೀಪ್ ಅವರು ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಘೋಷಿಸಿದರು. ಆಗ ಅಭಿಮಾನಿಗಳ ಆಕ್ರೋಶದ ಕಟ್ಟೆ ಒಡೆದು ದಾಂಧಲೆಗೆ ಇಳಿದರು. ಅವರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು.
ಇದನ್ನೂ ಓದಿ | Actor Rajinikanth: ರಾಜಕೀಯಕ್ಕೆ ಧುಮುಕಿದ ನಟ ದಳಪತಿ ವಿಜಯ್; ರಜನಿಕಾಂತ್ ರಿಯಾಕ್ಷನ್ ಏನು?
ಸಿದ್ದರಾಮಯ್ಯ ಮಾತನಾಡುತ್ತಿದ್ದ ಮಧ್ಯೆ ನಟ ಸುದೀಪ್ ಬಂದಿದ್ದಾರೆ ಎಂದು ಜನ ಕೂಗಾಡಿದ್ದರು. ಭಾಷಣಕ್ಕೆ ಅಡ್ಡಿಯಾಗುತ್ತಿದ್ದಂತೆಯೇ ಸಿದ್ದರಾಮಯ್ಯ ಮಾತು ನಿಲ್ಲಿಸಿ, ʻʻಸುದೀಪ್ ಬಂದಿಲ್ಲ ಎಲ್ಲರೂ ಸುಮ್ಮನೆ ಕುಳಿತುಕೊಳ್ಳಿʼʼ ಎಂದು ಹೇಳಿದರು. ಪದೇಪದೆ ಸುದೀಪ್ ಬಂದಿದ್ದಾರೆ ಎಂದು ಅಭಿಮಾನಿಗಳು ಕೂಗಾಡಿದ್ದರು. ನಂತರ ʻʻವಾಲ್ಮೀಕಿ ಜಾತ್ರೆಗೆ ಕಿಚ್ಚ ಸುದೀಪ್ ಬರೋದಿಲ್ಲʼʼ ಎಂದು ವಾಲ್ಮೀಕಿ ಶ್ರೀಗಳು ಘೋಷಣೆ ಮಾಡಿದ್ದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಕಾರ್ಯಕ್ರಮದಲ್ಲಿದ್ದ ಚೇರುಗಳನ್ನು ಪುಡಿ ಪುಡಿ ಮಾಡಿದ್ದರು. ಸಿಟ್ಟಿಗೆದ್ದ ಕೆಲವರು ವಾಲ್ಮೀಕಿ ಜಾತ್ರೆಯ ವೇದಿಕೆಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಅವರನ್ನು ಲಾಠಿ ರುಚಿ ತೋರಿಸಿ ಚದುರಿಸಿದ್ದರು.