ಬೆಂಗಳೂರು: ಸ್ಯಾಂಡಲ್‌ವುಡ್ ಬಾದ್‌ಷಾ ಕಿಚ್ಚ ಸುದೀಪ್ (Kichcha Sudeep) ಸಖತ್ ಖುಷಿಯಲ್ಲಿದ್ದಾರೆ. ಅವರ ಈ ಖುಷಿಗೆ ಕಾರಣ ಅವರಿಗೆ ಬಿಗ್ ಬ್ರೇಕ್ ಕೊಟ್ಟ ೨ ಸಿನಿಮಾಗಳು. ಒಂದು ವೃತ್ತಿ ಬದುಕಿನ ಆರಂಭಿಕ ಬಿಗ್ ಬ್ರೇಕ್ ಆಗಿದ್ದರೆ, ಇನ್ನೊಂದು ಬಹುಭಾಷಾ ಸ್ಟಾರ್‌ಗಿರಿಯನ್ನು ತಂದುಕೊಟ್ಟಿದ್ದಾಗಿದೆ. ಈ ಖುಷಿಯನ್ನು ತುಂಬಾ ಖುಷಿ ಖುಷಿಯಿಂದಲೇ ಟ್ವೀಟ್ ಮೂಲಕ ಅಭಿಮಾನಿಗಳೊಂದಿಗೆ ಸುದೀಪ್ ಹಂಚಿಕೊಂಡಿದ್ದಾರೆ. ತಮ್ಮ ಹಳೆಯ ಹಿಟ್ ಸಿನಿಮಾ ಬಗ್ಗೆ ವಿಶೇಷ ನೆನಪೊಂದನ್ನು ಹಂಚಿಕೊಂಡಿದ್ದಾರೆ.
ಕಿಚ್ಚನ ಹುಚ್ಚ (Huchcha) ಸಿನಿಮಾಗೆ 21 ವರ್ಷಗಳು ಸಂದಿವೆ. ಹಾಗೇ ಈಗ (Eega) ಸಿನಿಮಾಗೆ 10 ವರ್ಷಗಳ ಸಂಭ್ರಮ. ಈ ನೆನೆಪುಗಳ ಮೆಲಕು ಹಾಕಿರುವ ಕಿಚ್ಚ, ತಮ್ಮ ಟ್ವೀಟ್ ಮೂಲಕ ಬುಧವಾರ (ಜು.೬) ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಕಿಚ್ಚನ ಈ ಎರಡೂ ಸಿನಿಮಾಗಳೂ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದ್ದವು.
ಇದನ್ನೂ ಓದಿ | ಸುದೀಪ್‌ಗೆ Sunday surprise! ಕಪಿಲ್ ದೇವ್ ಕಳುಹಿಸಿಕೊಟ್ಟ ಆ ಉಡುಗೊರೆ ನೋಡಿ ಕುಣಿದಾಡಿದ ಕಿಚ್ಚ! ಏನದು ಗಿಫ್ಟ್?
2001ರ ಜು.೬ರಲ್ಲಿ ಬಿಡುಗಡೆಗೊಂಡ ʻಹುಚ್ಚʼ ಸಿನಿಮಾ ಮೂಲಕ ಸುದೀಪ್ ಅವರಿಗೆ ʻಕಿಚ್ಚʼ ಎಂಬ ಬಿರುದು ಲಭಿಸಿತ್ತು. ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಸಿನಿಮಾಗೆ ರೇಖಾ ನಾಯಕಿಯಾಗಿದ್ದರು. ತಮಿಳಿನ ಚಿತ್ರ ಸೇತುವನ್ನು ಕನ್ನಡದಲ್ಲಿ ರಿಮೇಕ್ ಮಾಡಿರುವ ಈ ಚಿತ್ರಕ್ಕೆ ಮೊದಲು ನಟ ಉಪೇಂದ್ರ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರಿಗೆ ಅವಕಾಶ ಬಂದಿತ್ತು. ಆದರೆ, ಬಳಿಕ ಸುದೀಪ್ ಈ ಚಿತ್ರಕ್ಕೆ ನಾಯಕರಾದರು. ತಮ್ಮ ನಟನಾ ಸಾಮರ್ಥ್ಯದಿಂದ ಪ್ರೇಕ್ಷಕರ ಮನಗೆದ್ದರು. ಫಿಲ್ಮ್‌ಫೇರ್‌ನಲ್ಲಿ ಅತ್ಯತ್ತಮ ನಟ ಎನ್ನುವ ಪ್ರಶಸ್ತಿಗೆ ಈ ಚಿತ್ರದ ಮೂಲಕ ಭಾಜನರಾದರು.
ಕಿಚ್ಚನ ಮೊದಲ ಸಿನಿಮಾ ಸ್ಪರ್ಶ. ಸುದರ್ಶನ್ ದೇಸಾಯಿ ನಿರ್ದೇಶನದ ಈ ಚಿತ್ರ ಸುದೀಪ್‌ಗೆ ಖ್ಯಾತಿ ತಂದುಕೊಟ್ಟಿತ್ತು. ನಂತರ ಬಂದ “ಹುಚ್ಚʼ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿತ್ತು. ಆ ಬಳಿಕ ಸುದೀಪ್ ಸಿನಿಮಾಗಳು ಸಾಲು ಸಾಲು ಹಿಟ್‌ಗಳನ್ನು ನೀಡಲಾರಂಭಿಸಿದವು.
ರಿಸ್ಕ್ ತೆಗೆದುಕೊಂಡರು, ಯಶ ಕಂಡರು
ಇದರ ಜತೆ 2012ರಲ್ಲಿ ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ʻಈಗʼ (Eega) ತೆಲುಗು ಸಿನಿಮಾದಲ್ಲಿ ವಿಲನ್ ಆಗಿ ಸುದೀಪ್ ಕಾಣಿಸಿಕೊಂಡಿದ್ದರು. ಒಂದು ಭಾಷೆಯಲ್ಲಿ ಹೀರೋ ಆಗಿ ಉತ್ತುಂಗದ ಸ್ಥಾನದಲ್ಲಿ ಇರಬೇಕಾದಲ್ಲಿ ಇನ್ನೊಂದು ಭಾಷೆಯಲ್ಲಿ ವಿಲನ್ ಆಗಿ ಅಭಿನಯಿಸಬೇಕೆಂದರೆ ಆ ನಟ ಬಹಳಷ್ಟು ರಿಸ್ಕ್ ತಗೆದುಕೊಳ್ಳುತ್ತಿದ್ದಾನೆ ಎಂದೇ ಅರ್ಥ. ಆದರೂ ಕಿಚ್ಚನ ಈ ಪ್ರಯತ್ನ ಯಶ ಕಂಡಿತು. ʻʻಈಗʼ ಸಿನಿಮಾ ದೇಶ-ವಿದೇಶಗಳಲ್ಲೂ ಮೋಡಿ ಮಾಡಿತ್ತು. ಇದೇ ಸಿನಿಮಾ ಮೂಲಕ ಸುದೀಪ್ ಬಹುಭಾಷಾ ನಟರಾಗಿ ಮಿಂಚತೊಡಗಿದರು. ಕಾರಣ, ಅವರು ೨೦೧೦ರಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಜತೆ ರಣ್ ಸಿನಿಮಾದಲ್ಲಿ ಸುದೀಪ್ ನಟಿಸಿ ಹಿಂದಿ ಸಿನಿಮಾ ರಂಗದಲ್ಲಿ ಉತ್ತಮ ಹೆಸರನ್ನು ಪಡೆದುಕೊಂಡಿದ್ದರು. ಆದರೆ, ಅವರಿಗೆ ಅಷ್ಟು ಖ್ಯಾತಿಯನ್ನು ತಂದುಕೊಟ್ಟಿರಲಿಲ್ಲ.
ಈ ಎರಡು ಬ್ಲಾಕ್ ಬಸ್ಟರ್ ಸಿನಿಮಾ ಕುರಿತು, ಕಿಚ್ಚ ಸುದೀಪ್ ʻ ಈ ದಿನ ನನ್ನ ಬದುಕಿನ ಸುಂದರ ದಿನ. ಈ ಸಿನಿಮಾಗಳು ಗೆಲ್ಲಲು ಕಾರಣಕರ್ತರಾದ ಪ್ರತಿಯೊಬ್ಬರಿಗೂ ಧನ್ಯವಾದʼ ಎಂದು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಇನ್ನು ನಟ ಸುದೀಪ್ ಅವರ ವಿಕ್ರಾಂತ್ ರೋಣ 14 ಭಾಷೆಗಳಲ್ಲಿ 3ಡಿ ರೂಪದಲ್ಲಿ ಬಿಡುಗಡೆಯಾಗಲಿದೆ. ಜುಲೈ 28ರಂದು ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಕಿಚ್ಚ ಸುದೀಪ್ ನಟಿಸಿರುವ ಪ್ಯಾನ್ ವರ್ಲ್ಡ್ ಸಿನಿಮಾವನ್ನು ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದು, ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಇಂಗ್ಲಿಷ್ ಭಾಷೆಗೆ ಕಿಚ್ಚ ಸುದೀಪ್ ಅವರೇ ವಾಯ್ಸ್ ಡಬ್ ಮಾಡಿರುವುದು ಇನ್ನೂ ವಿಶೇಷ.
ಇದನ್ನೂ ಓದಿ | Vikrant Rona | ವಿಕ್ರಾಂತ್ ರೋಣ ಎರಡನೇ ಹಾಡು ರಿಲೀಸ್: ರಾಜಕುಮಾರಿ ಲೋಕಕ್ಕೆ ಕೊಂಡೊಯ್ದ ಕಿಚ್ಚ