ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಗೆ (Killer BMTC) ಮತ್ತೊಬ್ಬರು ಬಲಿಯಾಗಿದ್ದಾರೆ. ನಗರದ ಸುಬ್ಬಯ್ಯ ಸರ್ಕಲ್ ಬಳಿ ಅಪಘಾತ (Road Accident) ಸಂಭವಿಸಿದೆ. ಪುಷ್ಪ (51) ಎಂಬಾಕೆ ಬಿಎಂಟಿಸಿಗೆ ಬಲಿಯಾದವರು.
ನಗರದ ಕಬ್ಬನ್ ಪೇಟೆ ನಿವಾಸಿಯಾಗಿರುವ ಪುಷ್ಪ ಮನೆಯಿಂದ ಬೇಕರಿಗೆ ತೆರಳುತ್ತಿದ್ದರು. ರಸ್ತೆ ದಾಟುವಾಗ ವೇಗವಾಗಿ ಬಂದ ಬಸ್ ಪುಷ್ಪರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಪುಷ್ಪರ ತಲೆಗೆ ಗಂಭೀರ ಪೆಟ್ಟಾಗಿತ್ತು. ರಸ್ತೆಯಲ್ಲಿ ಒದ್ದಾಡುತ್ತಿದ್ದವರನ್ನು ಸ್ಥಳೀಯರು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ ತೀವ್ರ ರಕ್ತಸ್ರಾವ ಉಂಟಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಪುಷ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬಸ್ ಚಾಲಕ ನಾಗರಾಜ್ ಎಂಬುವವರನ್ನು ಹಲಸೂರು ಗೇಟ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತ್ತರ ಮಾಡಲಾಗಿದೆ. ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Dog Bite : ಬಾಲಕಿ ಮೇಲೆ ಎರಗಿ ಕಿತ್ತು ತಿಂದ ಹುಚ್ಚು ನಾಯಿಗಳು
ಬಸ್ ಅಪಘಾತ ಪರಿಹಾರ ರೂ. 3 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಳ
ಅಪಘಾತ ಪರಿಹಾರ ಮೊತ್ತವನ್ನು ರೂ. 3 ಲಕ್ಷ ರೂ.ಯಿಂದ 10 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ಅಪಘಾತಕ್ಕೀಡಾದಾಗ, ಪ್ರಯಾಣಿಕರು ದುರದೃಷ್ಟವಶಾತ್ ಮೃತಪಟ್ಟಲ್ಲಿ, ಮೃತ ಕುಟುಂಬಸ್ಥರಿಗೆ ಹೆಚ್ಚಿನ ಆರ್ಥಿಕ ನೆರವು ನೀಡಲಾಗುತ್ತಿದೆ. ಪ್ರಯಾಣಿಕರ ಅಪಘಾತ ಪರಿಹಾರ ನಿಧಿ ಟ್ರಸ್ಟ್ ವತಿಯಿಂದ ಪ್ರಸ್ತುತ ನೀಡಲಾಗುತ್ತಿರುವ ಆರ್ಥಿಕ ಪರಿಹಾರ ಮೊತ್ತವನ್ನು ರೂ.3 ಲಕ್ಷದಿಂದ 10 ಲಕ್ಷ ರೂ. ಗಳಿಗೆ ಹೆಚ್ಚಿಸಲಾಗಿದೆ. ಈ ಆದೇಶವು 2024ರ ಜನವರಿ 1 ರಿಂದ ಜಾರಿಗೆ ಬರಲಿದೆ.
ಮುಂದುವರೆದು, ಮೃತರ ಅವಲಂಬಿತರಿಗೆ ಹೆಚ್ಚುವರಿ ಪರಿಹಾರ ಮೊತ್ತವನ್ನು ನೀಡುವ ಸಲುವಾಗಿ ರೂ.50 ರಿಂದ ರೂ.99 ರವರೆಗಿನ ಮುಖ ಬೆಲೆಯ ಟಿಕೇಟ್ ಪಡೆದು ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರತಿ ಪ್ರಯಾಣಿಕರಿಂದ ತಲಾ ರೂ.1 ಮತ್ತು ರೂ.100 ಹಾಗೂ ಹೆಚ್ಚಿನ ಬೆಲೆಯ ಟಿಕೇಟ್ ಪಡೆದು ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರತಿ ಪ್ರಯಾಣಿಕರಿಂದ ತಲಾ ರೂ.2 ಅಪಘಾತ ಪರಿಹಾರ ನಿಧಿ ವಂತಿಕೆ ಸಂಗ್ರಹಣೆಯನ್ನೂ ಜನವರಿ ಒಂದರಿಂದಲೇ ಮಾಡಲಾಗುತ್ತಿದೆ.
ಈ ಹಿಂದೆ ರೂ.100 ಮುಖ ಬೆಲೆಯ ಟಿಕೇಟ್ ಪಡೆದು ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಂದ ರೂ.1 ಅಪಘಾತ ಪರಿಹಾರ ನಿಧಿ ವಂತಿಕೆ ಸಂಗ್ರಹಣೆ ಮಾಡಲಾಗುತ್ತಿತ್ತು. ರೂ.1 ರಿಂದ ರೂ.49 ರವರೆಗಿನ ಮುಖ ಬೆಲೆಯ ಟಿಕೇಟ್ ಪಡೆದು ಪ್ರಯಾಣಿಸುವ ಪ್ರಯಾಣಿಕರಿಗೆ ಯಾವುದೇ ಅಪಘಾತ ಪರಿಹಾರ ನಿಧಿ ವಂತಿಕೆ ಇರುವುದಿಲ್ಲ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ