ಬೆಂಗಳೂರು: ಕರ್ನಾಟಕ-ಮಹಾರಾಷ್ಟ್ರ ಗಡಿ ಹೋರಾಟಗಾರರನ್ನು ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ‘ಈ ಗಡಿ ವಿವಾದಕ್ಕೆ ಸಂಬಂಧಪಟ್ಟ ಹೋರಾಟದಲ್ಲಿ ಮೃತಪಟ್ಟವರ ಕುಟುಂಬ ಅಥವಾ ಹತ್ತಿರದ ಸಂಬಂಧಿಗೆ ಪಿಂಚಣಿ ನೀಡಲಾಗುವುದು. ಹಾಗೇ, ಸಿಎಂ ಪರಿಹಾರ ನಿಧಿಯ ಸೌಲಭ್ಯವನ್ನು ಗಡಿಭಾಗದ ಜನರಿಗೂ ವಿಸ್ತರಿಸಲು ನಿರ್ಧಾರ ಮಾಡಿದ್ದೇವೆ. ಅಷ್ಟೇ ಅಲ್ಲ, ಮಹಾತ್ಮಾ ಜ್ಯೋತಿಬಾ ಫುಲೆ ಜನ ಆರೋಗ್ಯ ವಿಮಾ ಯೋಜನೆಯ ಸೌಕರ್ಯಗಳನ್ನೂ ಅವರಿಗೆ ನೀಡುತ್ತೇವೆ’ ಎಂದು ಸೋಮವಾರ ಹೇಳಿದ್ದಾರೆ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಪಟ್ಟು ಮಹಾರಾಷ್ಟ್ರ ಸರ್ಕಾರ ಕರೆದಿದ್ದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರಗಳನ್ನು ಕೈಗೊಂಡಿದ್ದಾಗಿಯೂ ಹೇಳಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆಯವರ ಈ ಭರವಸೆಗಳ ವಿರುದ್ಧ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಗಡಿ ಹೋರಾಟದಲ್ಲಿ ಮೃತಪಟ್ಟ ಮರಾಠಿಗರನ್ನು ಮಹಾ ಸಿಎಂ ಶಿಂಧೆ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿ, ಅವರ ಕುಟುಂಬ/ಹತ್ತಿರದ ಸಂಬಂಧಿಗೆ ಪಿಂಚಣಿ ನೀಡುವುದಾಗಿ ಹೇಳಿದ್ದಾರೆ. ಇದೊಂದು ಪ್ರಚೋದನಾತ್ಮಕ ಹೇಳಿಕೆ. ಅವರು ಗೂಂಡಾಗಳ ಕುಟುಂಬಕ್ಕೆ ಪಿಂಚಣಿ ನೀಡಲು ಹೊರಟಿದ್ದಾರೆ’ ಎಂದು ಚಂದರಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಏನು ನಡೆಯಿತು ಎಂಬುದು ಇಡೀ ವಿಶ್ವಕ್ಕೇ ಗೊತ್ತಿದೆ. 1956 ರಿಂದ 1986ರವರೆಗೆ ಕನ್ನಡಿಗರ ಮೇಲೆ ಹಿಂಸಾಚಾರ ಮಾಡಲಾಯಿತು. ಆಗ ಗೋಲಿಬಾರ್ನಲ್ಲಿ ಅನೇಕರು ಮೃತಪಟ್ಟಿದ್ದಾರೆ. ಈಗ ಏಕನಾಥ ಶಿಂಧೆಯವರು ಚಳವಳಿಕಾರರನ್ನು ಪ್ರಚೋದಿಸಿ, ಕರ್ನಾಟಕದ ವಿರುದ್ಧ ಹೋರಾಟ ಮಾಡಲು ಪ್ರೇರೇಪಿಸುವ ಕೆಲಸ ಮಾಡುತ್ತಿದ್ದಾರೆ. ಶಿಂಧೆ ಮಾತುಗಳನ್ನು, ಭರವಸೆಗಳನ್ನು ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕೇಂದ್ರ ಸರ್ಕಾರದ ಗಮನಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಒತ್ತಾಯಿಸಿದ್ದಾರೆ.
‘1986ರಲ್ಲಿ ಎನ್ಸಿಪಿ ನಾಯಕ ಶರದ್ ಪವಾರ್ ಗಡಿ ಚಳವಳಿ ಮಾಡಿದಾಗ ಅದೇ ಪಕ್ಷದ ನಾಯಕ ಛಗನ್ ಭುಜಬಲ್ ಕೂಡ ಆಗಮಿಸಿದ್ದರು. ಆಗ ಮಹಾರಾಷ್ಟ್ರದಿಂದ ಬೆಳಗಾವಿಗೆ ಬಂದಿದ್ದ ಶಿವಸೇನೆಯವರು, ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ)ನೊಂದಿಗೆ ಸೇರಿ ದೊಡ್ಡ ಗಲಭೆ ಸೃಷ್ಟಿಸಿದ್ದರು. ಕನ್ನಡದ ಪತ್ರಿಕಾಲಯಗಳಿಗೆ ಬೆಂಕಿ ಹಚ್ಚಿದರು, ಬೆಳಗಾವಿ ನಗರಕ್ಕೆ ನೀರು ಪೂರೈಸುವ ಘಟಕಕ್ಕೆ ವಿಷ ಹಾಕುವ ಯತ್ನ ಮಾಡಿದರು. ಹಿಂಡಲಗಾ ಬಳಿಯ ಪಂಪಿಂಗ್ ಸ್ಟೇಷನ್ ಸುಡಲೂ ಮುಂದಾದರು. ಆಗ ಬೆಳಗಾವಿ ಅಂದಿನ ಎಸ್‌ಪಿ ಕೆ.ನಾರಾಯಣ ಗೋಲಿಬಾರ್‌ಗೆ ಆದೇಶಿಸಿದರು. ಅದರಲ್ಲಿ 9 ಜನ ಮೃತಪಟ್ಟಿದ್ದಾರೆ. ಇಂಥ ಹಿಂಸಾಚಾರಕ್ಕೆ ಬಲಿಯಾದವರ ಕುಟುಂಬಗಳು ಬೆಳಗಾವಿಯಲ್ಲಿವೆ. ಆದರೆ ಅವರೇನೂ ಸ್ವಾತಂತ್ರ್ಯ ಹೋರಾಟ ಮಾಡಿದವರಲ್ಲ, ಅವರಿಗೆಲ್ಲ ಈಗ ಪೆನ್ಷನ್ ಕೊಡುವ ಅಗತ್ಯವಾದರೂ ಏನಿದೆ’ ಎಂದು ಅಶೋಕ್ ಚಂದರಗಿ ಪ್ರಶ್ನಿಸಿದ್ದಾರೆ.
ಇದನ್ನು ಓದಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ | ಸುಪ್ರೀಂನಲ್ಲಿ ವಾದ ಮಂಡನೆಗೆ ವಕೀಲರ ತಂಡ ರಚಿಸಿದ ಬೊಮ್ಮಾಯಿ