Site icon Vistara News

Kite Festival | ಮಕ್ಕಳಲ್ಲಿ ಮೊಬೈಲ್ ಗೀಳು ಮರೆಸಲು ಗಾಳಿಪಟ ಹಬ್ಬ; ಬಾನೆತ್ತರಕ್ಕೆ ಪಟ ಹಾರಿಸಿ ಸಂಭ್ರಮಿಸಿದ ಚಿಣ್ಣರು

ಶಿವಮೊಗ್ಗ: ನಾನಾ ವಿನ್ಯಾಸ, ವಿಶೇಷ ಆಕೃತಿ, ವಿವಿಧ ಬಣ್ಣಗಳ ನೂರಾರು ಗಾಳಿಪಟಗಳು ಆಗಸ ತುಂಬಿಕೊಂಡು ಹಾರಾಡುತ್ತಿದ್ದರೆ, ಅವುಗಳನ್ನು ವೀಕ್ಷಿಸಲು ನೂರಾರು ಪೋಷಕರು ಮೈದಾನದಲ್ಲಿ ಜಮಾಯಿಸಿದ್ದರು. ಗಾಳಿಪಟ ಹಾರಿಸುವ ವಿದ್ಯಾರ್ಥಿಗಳ (Kite Festival) ಸಂಭ್ರಮಕ್ಕೆ ಮಲೆನಾಡಿಗರು ಸಾಕ್ಷಿಯಾದರು.

Kite Festival

ಬಣ್ಣ ಬಣ್ಣದ ಗಾಳಿಪಟಗಳು ಬಾನೆತ್ತರಕ್ಕೆ ಹಾರಿದ್ದನ್ನು ಕಣ್ತುಂಬಿಕೊಂಡ ಮಕ್ಕಳು ಕುಣಿದು ಕುಪ್ಪಳಿಸಿದರು. ಈ ಹಬ್ಬದಲ್ಲಿ ಭಾಗಿಯಾದ ವಿದ್ಯಾರ್ಥಿಗಳಿಗೆ ಸ್ವಯಂ ಗಾಳಿಪಟ ಹಾರಿಸಲು ಶಿಕ್ಷಕರು ತರಬೇತಿ ನೀಡಿದರು. ಮೊದಲು ಸಂಕ್ರಾಂತಿ ಹಬ್ಬ ಬಂತೆಂದರೆ, ಈ ಗಾಳಿಪಟವನ್ನು ಮನೆಯಲ್ಲೇ ತಯಾರಿಸಿ ಹಾರಿಸುತ್ತಿದ್ದರು. ಮುಗಿಲ ಕಡೆಗೆ ಮುಖ ಮಾಡಿ ಮಕ್ಕಳೆಲ್ಲ ನಿಲ್ಲುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಗಾಳಿಪಟ ಹಾರಿಸುವುದಿರಲಿ, ಈ ಸೂತ್ರ ಎಂಬುದೇ ಗೊತ್ತಿಲ್ಲ. ಮಕ್ಕಳಲ್ಲಿ ಹೆಚ್ಚಾಗಿರುವ ಟಿವಿ, ಮೊಬೈಲ್ ಗೀಳು ಮರೆಸಲೆಂದೇ ಶಿವಮೊಗ್ಗದಲ್ಲಿ ಗಾಳಿಪಟ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.

Kite Festival

ತ್ರಿವರ್ಣದ, ಪಾಂಡಾ, ಚಿಟ್ಟೆ ಗಾಳಿಪಟ ಮತ್ತು ಡ್ರ್ಯಾಗನ್ ಗಾಳಿಪಟಗಳು ಎಲ್ಲರ ಗಮನ ಸೆಳೆದವು. ಕೆಲವು ಗಾಳಿಪಟಗಳು ಮುಗಿಲೆತ್ತರಕ್ಕೆ ಹಾರಿದರೆ, ಮತ್ತೊಂದಿಷ್ಟು ಗಾಳಿಪಟಗಳು ನೆಲದ ಮೇಲೆಯೇ ಗಿರಕಿ ಹೊಡೆದವು. ಕೆಲವೊಂದು ಗಾಳಿಪಟಗಳು ಸೂತ್ರ ಹರಿದು ಗಾಳಿಯಲ್ಲಿ ತೇಲಿ ಹೋದವು.

Kite Festival

ಗಾಳಿಪಟ ಉತ್ಸವ ಆಯೋಜಕರು ಕೇವಲ ಉತ್ಸವಕ್ಕಷ್ಟೇ ಸೀಮಿತವಾಗದೇ, ಗಾಳಿಪಟ ಹಾರಿಸುವ ಪ್ರವೀಣರನ್ನು ಕರೆಸಿ, ಶಿವಮೊಗ್ಗದ ಜನರಿಗೆ ಗಾಳಿಪಟ ಹಾರಿಸುವ ಕಲೆಯನ್ನು ಕೂಡ ಪರಿಚಯಿಸಿದರು. ಹೀಗೆ ಇಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರೂ ಗಾಳಿಪಟ ಹಾರಿಸಿ ಸಂತಸ ಪಟ್ಟರು.

Kite Festival

ಗ್ರಾಮೀಣ ಕಲೆ, ಕ್ರೀಡೆಗಳು ನಶಿಸುವ ಹೊತ್ತಲ್ಲಿ ಇಂತಹ ಉತ್ಸವ ಆಯೋಜಿಸಿದ್ದಕ್ಕೆ ಮಕ್ಕಳು ಮತ್ತು ಪೋಷಕರು ಖುಷಿಯಾದರು. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಗಾಳಿಪಟ ಉತ್ಸವ ಮನಸ್ಸಿಗೆ ಮುದ ನೀಡಿತು.

ಇದನ್ನೂ ಓದಿ | Shigandur jatre | ಸಿಗಂದೂರು ಚೌಡಮ್ಮದೇವಿ ಜಾತ್ರೆಗೆ ಹರಿದು ಬಂದ ಭಕ್ತಸಾಗರ; ಜನಮನ ಗೆದ್ದ ಜಾನಪದ ಕಲಾತಂಡಗಳು

Exit mobile version