ಬೆಂಗಳೂರು: ನಂದಿನಿ ಹಾಲಿನ ದರ ಹೆಚ್ಚಳವಾಗುತ್ತದೆಯಾ? ಇರುವಷ್ಟೇ ಇರಲಿದೆಯಾ ಎಂಬುದು ಇಂದು ಮಧ್ಯಾಹ್ನ ನಿರ್ಧರಿತವಾಗಲಿದೆ. ನವೆಂಬರ್ 14ರಂದು ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಲೀಟರ್ಗೆ ಮೂರು ರೂಪಾಯಿ ಹೆಚ್ಚಿಸಲಾಗಿತ್ತು. ನ.14ರ ಮಧ್ಯರಾತ್ರಿಯಿಂದಲೇ ಈ ದರ ಅನ್ವಯ ಆಗುತ್ತದೆ ಎಂದು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ (ಕೆಎಂಎಫ್) ಪ್ರಕಟಣೆ ಹೊರಡಿಸಿತ್ತು. ಆದರೆ ಅಂದು ಸಿಎಂ ಬಸವರಾಜ ಬೊಮ್ಮಾಯಿ ದರ ಏರಿಕೆಗೆ ಬ್ರೇಕ್ ಹಾಕಿದ್ದರು.
ನ.14ರಂದು ಕಲಬುರಗಿಯಲ್ಲಿ ಮಾತನಾಡಿದ್ದ ಸಿಎಂ ಬೊಮ್ಮಾಯಿ, ‘ಸದ್ಯಕ್ಕೆ ನಂದಿನಿ ಹಾಲಿನ ದರ ಏರಿಕೆಯಿಲ್ಲ. ನವೆಂಬರ್ 20ರ ನಂತರ ಹಾಲು ಒಕ್ಕೂಟದ ಅಧ್ಯಕ್ಷರ ಜತೆ ಸಭೆ ನಡೆಸಿ, ಬಳಿಕವಷ್ಟೇ ಈ ಬಗ್ಗೆ ತೀರ್ಮಾನವಾಗಲಿದೆ. ಜನರಿಗೆ ಹೊರೆ ಮಾಡುವುದಿಲ್ಲ ಎಂದು ಹೇಳಿದ್ದರು. ಅದರಂತೆ ನವೆಂಬರ್ 21ರಂದು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಪಶುಸಂಗೋಪನೆ ಇಲಾಖೆ ಸಿಬ್ಬಂದಿ ಮತ್ತು ಕೆಎಂಎಫ್ ಅಧಿಕಾರಿಗಳ ಸಭೆ ನಡೆದಿತ್ತು. ಇದರಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಪಶುಸಂಗೋಪನೆ ಇಲಾಖೆ ಸಚಿವ ಪ್ರಭು ಚೌಹಾಣ್ ಕೂಡ ಉಪಸ್ಥಿತರಿದ್ದರು. ಈ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ‘ಹಾಲಿನ ದರ ಏರಿಕೆ ಮಾಡುವ ವಿಚಾರವನ್ನು ಇನ್ನೆರಡು ದಿನಗಳಲ್ಲಿ ನಿರ್ಣಯಿಸಿ, ಸೂಕ್ತ ನಿರ್ಣಯ ಕೈಗೊಳ್ಳುವಂತೆ’ ಸೂಚಿಸಿದ್ದರು.
ಅದರಂತೆ ಇಂದು ಮಧ್ಯಾಹ್ನ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ, ನಿರ್ದೇಶಕ ಮಂಡಳಿ ಸಭೆ ನಡೆಯಲಿದೆ. ಸಂಜೆ 5.30ಕ್ಕೆ ಸುದ್ದಿಗೋಷ್ಠಿ ಆಯೋಜನೆಯಾಗಿದ್ದು, ಅದರಲ್ಲಿ ಹಾಲು-ಮೊಸರಿನ ದರದ ಬಗ್ಗೆ ಬಾಲಚಂದ್ರ ಜಾರಕಿಹೊಳಿ ಅವರು ಸ್ಪಷ್ಟ ಮಾಹಿತಿ ನೀಡಲಿದ್ದಾರೆ.
ಯಾವ ಹಾಲಿನ ದರ ಎಷ್ಟು ಏರಿಕೆಗೆ ನಿರ್ಧರಿಸಲಾಗಿತ್ತು?
ಟೋನ್ಡ್ ಹಾಲು 37ರೂ. ರಿಂದ 40 ರೂ.
ಹೊಮೋಜಿನೈಸ್ಡ್ಹಾಲು 38ರೂ. ರಿಂದ 41ರೂ.
ಹೊಮೊಜಿನೈಸ್ಡ್ ಹಸುವಿನ ಹಾಲು 42ರೂ. ರಿಂದ 45ರೂ.
ಸ್ಪೆಷಲ್ ಹಾಲು 43ರೂ. ರಿಂದ 46ರೂ.
ಶುಭಂ ಹಾಲು 43ರೂ. ರಿಂದ 46ರೂ.
ಹೊಮೊಜಿನೈಸ್ಡ್ ಸ್ಟ್ಯಾಂಡಡೈಸ್ಡರ್ ಹಾಲು 44ರೂ. ರಿಂದ 47ರೂ.
ಸಮೃದ್ಧಿ ಹಾಲು 48ರೂ. ರಿಂದ 51ರೂ.
ಸಂತೃಪ್ತಿ ಹಾಲು 50ರೂ. ರಿಂದ 53ರೂ.
ಡಬಲ್ ಟೋನ್ಡ್ ಹಾಲು 36ರೂ. ರಿಂದ 39ರೂ.
ಮೊಸರು ಪ್ರತಿ ಕೆಜಿಗೆ 45ರೂ. ರಿಂದ 48ರೂ.
ಇದನ್ನೂ ಓದಿ: Nandini milk price | ನಂದಿನಿ ಹಾಲಿನ ದರ ಇಂದು ಪರಿಷ್ಕರಣೆ ಸಂಭವ, 2-3 ರೂ. ಏರಿಕೆ?