Site icon Vistara News

ಕುಸಿಯುವ ಹಂತದಲ್ಲಿ ಕೊಡಗು ಜಿಲ್ಲಾಡಳಿತ ಕಚೇರಿಯ ತಡೆಗೋಡೆ; ರಾಷ್ಟ್ರೀಯ ಹೆದ್ದಾರಿ 275 ಬಂದ್

ತಡೆಗೋಡೆ

| ಲೋಹಿತ್.ಎಂ.ಆರ್, ಕೊಡಗು
ಮುಂಗಾರು ಆರಂಭದ ದಿನಗಳಲ್ಲೇ ಭಾರಿ ಮಳೆಯಿಂದ ಕೊಡಗು ತತ್ತರಿಸಿ ಹೋಗಿದೆ. ಒಂದೆಡೆ ಪ್ರಾಕೃತಿಕ ವಿಕೋಪ ಸಂಭವಿಸುತ್ತಿದ್ದರೆ, ಮತ್ತೊಂದೆಡೆ ಮಾನವ ನಿರ್ಮಿತ ವಿಕೋಪಗಳು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಇದೀಗ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದ ಕಾಮಗಾರಿಯಿಂದ ಜಿಲ್ಲಾಡಳಿತ ಭವನ‌ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಕಂಟಕ ಬಂದೊದಗಿದೆ.

ಮಡಿಕೇರಿ ಹೃದಯಭಾಗದ ಜಿಲ್ಲಾಡಳಿತ ಭವನದ ಕೆಳಭಾಗ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಬಳಿ‌ ಬರೋಬ್ಬರಿ 7 ಕೋಟಿ‌ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಇನ್ನೊಂದು ಸೋಜಿಗದ ಸಂಗತಿಯೆಂದರೆ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಖರ್ಚಾಗಿದ್ದು 4 ಕೋಟಿ ರೂಪಾಯಿ. ಆದರೆ, ಅದಕ್ಕೆ ನಿರ್ಮಾಣ ಮಾಡಲಾಗಿರುವ ತಡೆಗೋಡೆಗೆ 7 ಕೋಟಿ ರೂಪಾಯಿಯನ್ನು ಖರ್ಚು ಮಾಡಲಾಗಿದೆ. ಅದನ್ನೂ ಅವೈಜ್ಞಾನಿಕವಾಗಿ ಮತ್ತು ಕಳಪೆಯಾಗಿ ಮಾಡಲಾಗಿದ್ದು, ತಡೆಗೋಡೆಯ ಬ್ಲಾಕ್‌ಗಳು ಉಬ್ಬಿಕೊಂಡಿವೆ. ಕ್ಷಣ ಕ್ಷಣಕ್ಕೂ ಕುಸಿಯುವ ಆತಂಕ ಹೆಚ್ಚಾಗುತ್ತಿದೆ.

ಜರ್ಮನ್, ಇಸ್ರೇಲ್ ಟೆಕ್ನಾಲಜಿ ಬಳಸಿ ಮಾಡಿದ್ದ ತಡೆಗೋಡೆಯೊಳಗೆ ನೀರು ಸೇರಿಕೊಳ್ಳುತ್ತಿದೆ. ಹೀಗಾಗಿ ಸೇತುವೆ ಬೀಳುವ ಹಂತಕ್ಕೆ ಬಂದು ನಿಂತಿದೆ. ಆದರೆ, ಈ ಬಗ್ಗೆ ಕೆಲವು ದಿನಗಳ ಹಿಂದೆ ಹೇಳಿಕೆ ಕೊಟ್ಟಿದ್ದ ಅಧಿಕಾರಿಗಳು, “ಎಲ್ಲ ಸುರಕ್ಷತಾ ಕ್ರಮ ತೆಗೆದುಕೊಂಡು ತಡೆಗೋಡೆಯನ್ನು ಕಟ್ಟಲಾಗಿದೆ. ಹಾಗಾಗಿ ಈ ತಡೆ ಗೋಡೆಗೆ ಏನೂ ಆಗುವುದಿಲ್ಲ ಎಂದು ಸಮಜಾಯಿಷಿ ನೀಡಿದ್ದರು. ಆದರೆ, ಇದೀಗ ಈ ತಡೆಗೋಡೆ ಕುಸಿಯುವ ಹಂತಕ್ಕೆ ಬಂದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ | ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಭಾರಿ ಮಳೆ, ಕಾವೇರಿ ನದಿ ನೀರಿನ ಮಟ್ಟ ಏರಿಕೆ

ಇನ್ನು ತಡೆಗೋಡೆಯಲ್ಲಿ ಉಬ್ಬುಗಳು ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ತಜ್ಞರು ತಡೆಗೋಡೆಯ ಬ್ಲಾಕ್ ಕೊರೆದು ನೀರು ತೆಗೆಯಲು ಪೈಪ್‌ಗಳನ್ನು ಜೋಡಿಸಿದ್ದಾರೆ. ಇದು ಮತ್ತೊಂಡು ಎಡವಟ್ಟಿಗೆ ಕಾರಣವಾಗಿದ್ದಲ್ಲದೆ, ಅಷ್ಟು ದೊಡ್ಡ ತಡೆಗೋಡೆಗೆ ಮರದ ತುಂಡನ್ನು ಸಹ ಇಡಲಾಗಿದೆ. ಇದು ಸಾರ್ವಜನಿಕವಾಗಿ ವ್ಯಾಪಕ ಟೀಕೆಗೆ, ನಗೆಪಾಟಿಲಿಗೆ ಗುರಿಯಾಗಿದೆ. ಸದ್ಯದಲ್ಲೇ ತಡೆಗೋಡೆ ಬೀಳುವ ಸಂಭವ ಇರುವುದರಿಂದ ಮಡಿಕೇರಿಯ ಟೋಲ್‌ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 275ನ್ನು ಬಂದ್ ಮಾಡಲಾಗಿದ್ದು, ವಾಹನ ಸಂಚಾರಕ್ಕೆ ಮಡಿಕೇರಿಯಿಂದ ಮಂಗಳೂರಿಗೆ ತೆರಳಲು ಮೇಕೇರಿ‌-ತಾಳತ್ಮನೆ ರಸ್ತೆ ಮೂಲಕ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.

ಮೊದಲೇ ಹೇಳಿದರೂ ಕೇಳಲಿಲ್ಲ

7 ಕೋಟಿ ರೂಪಾಯಿ ವೆಚ್ಚದ ಜಿಲ್ಲಾಧಿಕಾರಿ ಕಚೇರಿಯ ತಡೆಗೋಡೆ ಮಳೆಯಿಂದ ಕುಸಿಯುವ ಸ್ಥಿತಿಯಲ್ಲಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿ 275 ಬಂದ್ ಮಾಡಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಜಿಲ್ಲೆಯಲ್ಲಿ ಬಹುತೇಕ ಕಡೆ ಕಳಪೆ ಕಾಮಗಾರಿಗಳು ನಡೆಯುತ್ತಿವೆ. ಜಿಲ್ಲಾಡಳಿತ ಕಚೇರಿ ಬಳಿಯ ಕಾಮಗಾರಿಯೇ ಕಳಪೆಯಾದರೆ ಇತರ ಕಾಮಗಾರಿಗಳ ಪರಿಸ್ಥಿತಿ ಏನು ಎಂಬುದು ತಿಳಿಯುತ್ತದೆ. ತಡೆಗೋಡೆ ಕಾಮಗಾರಿಗೆ ಮೊದಲೇ ವಿರೋಧಿಸಿದ್ದೆವು, ಆದರೆ ಅಧಿಕಾರಿಗಳು ಮಾತು ಕೇಳಿರಲಿಲ್ಲ. ಇದೀಗ ಸಮಸ್ಯೆ ಉದ್ಭವಿಸಿದೆ ಎಂದು
ಸಮಾಜ ಸೇವಕ ಪವನ್ ಪೆಮ್ಮಯ್ಯ ಆರೋಪಿಸಿದ್ದಾರೆ.

ಒಟ್ಟಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದ ಜಿಲ್ಲಾಡಳಿತ ಭವನಕ್ಕೆ ಕಂಟಕ ಎದುರಾಗಿದೆ. ಮತ್ತೊಂದೆಡೆ ತಡೆಗೋಡೆ ಕುಸಿದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಲಿದೆ. ಅಲ್ಲದೆ ಕೆಳಭಾಗದ ಮನೆಗಳಿಗೆ ಅಪಾಯ ಇದೆ.

ಇದನ್ನೂ ಓದಿ | Rain News | ರಾಜ್ಯದಲ್ಲಿ ಮುಂದುವರಿದ ಧಾರಾಕಾರ ಮಳೆ; ಹಲವೆಡೆ ಪ್ರವಾಹ

Exit mobile version