Site icon Vistara News

Elephant attack : ಪೆಟ್ರೋಲ್‌ ಬಂಕ್‌ಗೆ ಮರಿ ಕಾಡಾನೆ ಎಂಟ್ರಿ; ಕೆಫೆಯಲ್ಲಿ ಹೆಣ್ಣಾನೆಯ ಬಿಂದಾಸ್‌ ಓಡಾಟ

Elephant attacks in Kodagu Hassan

ಕೊಡಗು/ಹಾಸನ: ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಗಜರಾಜನ ಓಡಾಟಕ್ಕೆ ಜನರು ಶಾಕ್‌ (Elephant attack) ಆಗಿದ್ದಾರೆ. ಇತ್ತೀಚೆಗಂತೂ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಕಾಡು ಬಿಟ್ಟು ನಾಡಿಗೆ ಬರುತ್ತಿರುವ ಕಾಡುಪ್ರಾಣಿಗಳು ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ಜನರು ನಿರ್ಭೀತಿಯಾಗಿ ಓಡಾಡುವುದೇ ಕಷ್ಟವಾಗಿದೆ.

ಕೊಡಗು ಜಿಲ್ಲೆಯ ಪೊನ್ನಂಪೇಟೆ ಪಟ್ಟಣಕ್ಕೆ ಶನಿವಾರ ಬೆಳ್ಳಂಬೆಳಗ್ಗೆ ಮರಿ ಕಾಡಾನೆಯೊಂದು ಎಂಟ್ರಿ ಕೊಟ್ಟಿದೆ. ಕಾಡಾನೆಯ ಮಾರ್ನಿಂಗ್‌ ವಾಕಿಂಗ್‌ಗೆ ಪಟ್ಟಣದ ನಿವಾಸಿಗಳು ಬೆಚ್ಚಿಬಿದ್ದರು. ನ್ಯಾಯಾಲಯ ಆವರಣ, ತಾಲೂಕು ಕಚೇರಿ ಜತೆಗೆ ಅರಣ್ಯ ಕಾಲೇಜು ಕಡೆ ಎಲ್ಲ ಓಡಾಡಿದ ಕಾಡಾನೆಯು ಪೆಟ್ರೋಲ್ ಬಂಕ್ ಬಳಿ ಹೋಗಿದೆ. ಇತ್ತ ನಗರದಲ್ಲಿ ಆನೆ ಓಡಾಟ ಕಂಡ ಜನರು ಅಚ್ಚರಿಯಿಂದ ವಿಡಿಯೋ ಸೆರೆ ಹಿಡಿಯುತ್ತಿರುವ ದೃಶ್ಯ ಕಂಡು ಬಂತು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆನೆಯನ್ನು ಪುನಃ ವಾಪಸ್‌ ಕಳಿಸಿಲು ಹರಸಾಹಸ ಪಟ್ಟರು. ಜನರು ಹೊರಗೆ ಓಡಾಡುವಾಗ ಎಚ್ಚರವಾಗಿ ಇರುವಂತೆ ಅರಣ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಕಾಫಿ ತೋಟದಿಂದ ಕೆಫೆಗೆ ನುಗ್ಗಿದ ಕಾಡಾನೆ

ಕಾಫಿ ತೋಟದಿಂದ ಕೆಫೆಗೆ ನುಗ್ಗಿದ ಹೆಣ್ಣಾನೆಯೊಂದು ಸಿಕ್ಕಸಿಕ್ಕವರನ್ನೆಲ್ಲಾ ಅಟ್ಟಾಡಿಸಿದೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಚೀಕನಹಳ್ಳಿ-ಕೈಮರ ರಸ್ತೆಯಲ್ಲಿರುವ ಗ್ರೋವರ್ಸ್ ಕೆಫೆಗೆ ಕಾಡಾನೆ ಕಾಣಿಕೊಂಡಿತ್ತು. ಕಾಫಿ, ತಿಂಡಿ ಎಂದು ಕೆಫೆಗೆ ಬಂದವರೆಲ್ಲರೂ ಅಟ್ಟಾಡಿಸಿಕೊಂಡು ಬಂದ ಕಾಡಾನೆಯಿಂದ ಪ್ರಾಣ ಉಳಿಸಿಕೊಳ್ಳಲು ಎದ್ದು, ಬಿದ್ದು ಓಡಿದ್ದರು.

ಕಾಡಾನೆ ಕಂಡು ದಿಕ್ಕಾಪಾಲಾಗಿ ಓಡಿದ ಜನರು ಜೀವ ಉಳಿಸಿಕೊಳ್ಳಲು ಕೆಫೆ ಒಳಗೆ ಕೆಲವರು ಓಡಿದರೆ, ಹಲವರು ಕಾರಿನೊಳಗೆ ಹೋಗಿ ಕುಳಿತಿದ್ದರು. ಇತ್ತ ರಸ್ತೆಗೆ ಆನೆ ಬಂದಿದ್ದರಿಂದ ಸವಾರರು ವಾಹನವನ್ನು ಯೂಟರ್ನ್‌ ಮಾಡಿಕೊಂಡರು. ಇದೆಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಜನರನ್ನೆಲ್ಲ ಅಟ್ಟಾಡಿಸಿದ ಕಾಡಾನೆ ನಂತರ ಕಾಫಿ ತೋಟದೊಳಗೆ ನುಗ್ಗಿದೆ. ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದರು.

ಕೆಫೆ ಪಕ್ಕದಲ್ಲಿದರುವ ಕಾಫಿ ತೋಟದಲ್ಲಿ ಕಾಡಾನೆ ಬೀಡುಬಿಟ್ಟಿದ್ದು, ಜನರು ಆತಂಕದಲ್ಲೇ ದಿನದೂಡುವಂತೆ ಮಾಡಿದೆ. ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದೆ. ಸಿಕ್ಕಸಿಕ್ಕವರ ಮೇಲೆ ಎರಗುತ್ತಿರುವ ಕಾಡಾನೆಗಳನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯದ ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version