ಕೊಡಗು: ವಿದ್ಯುತ್ ಸ್ಪರ್ಶಿಸಿ ಕಾಡಾನೆಗಳೆರಡು [Elephanth Death] ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿ ಸಮೀಪದ ಪುಷ್ಪಗಿರಿ ಖಾಸಗಿ ತೋಟದಲ್ಲಿ ನಡೆದಿದೆ.
ನೆಲ್ಯಹುದಿಕೇರಿಯ ಕಾಫಿ ಬೆಳೆಗಾರರಾದ ಕೊಣೇರೀರ ಪ್ರಕಾಶ್ ಹಾಗೂ ಮಂಡ್ಯಪಂಡ ಸುಮನ್ ಚಂಗಪ್ಪ ಎಂಬುವವರಿಗೆ ಸೇರಿದ ತೋಟದಲ್ಲಿ ಮರದ ಕೊಂಬೆ ಬಿದ್ದು 11 ಕೆ ವಿ ಸಾಮರ್ಥ್ಯದ ವಿದ್ಯುತ್ ತಂತಿ ತೂಗಾಡುತಿತ್ತು. ಸೋಮವಾರ ಬೆಳಗ್ಗೆ ಆಹಾರ ಅರಸಿ ತೋಟಕ್ಕೆ ಬಂದಿದ್ದ ಕಾಡಾನೆಗಳು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿವೆ. ಮೃತ ಆನೆಗಳನ್ನು ಸುಮಾರು 19 ವರ್ಷದ ಗಂಡಾನೆ ಹಾಗೂ 15 ವರ್ಷದ ಹೆಣ್ಣಾನೆ ಎಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ರೈತ ಸಂಘದ ಮುಖಂಡರುಗಳು ಹಾಗೂ ಸದಸ್ಯರು ಆಗಮಿಸಿ ಅರಣ್ಯ ಇಲಾಖೆ ಹಾಗೂ ವಿದ್ಯುತ್ ಇಲಾಖೆಯ ಬೇಜವಾಬ್ದಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ ಮಾತನಾಡಿದ ರೈತ ಸಂಘದ ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡ್ಯಪಂಡ ಪ್ರವೀಣ್ ಬೋಪಣ್ಣ, ಕಾಡಾನೆಗಳ ಹಾವಳಿ ತಡೆಯಲು ಅರಣ್ಯ ಇಲಾಖೆ ವಿಫಲವಾಗಿದ್ದು, ಪದೇಪದೆ ಆನೆಗಳು ತೋಟಕ್ಕೆ ಬರುತ್ತಿವೆ. ಆಹಾರ ಅರಸಿ ತೋಟಕ್ಕೆ ಬಂದಿದ್ದ ಕಾಡಾನೆಗಳೆರಡು ವಿದ್ಯುತ್ ಸ್ಪರ್ಶಿಸಿದಿಂದ ಸಾವನ್ನಪ್ಪಿದೆ. ವಿದ್ಯುತ್ ಇಲಾಖೆಯ ನಿರ್ಲಕ್ಷ್ಯದಿಂದ ಈ ಆನಾಹುತ ಸಂಭವಿಸಿದೆ ವಿದ್ಯುತ್ ತಂತಿ ಕೆಲ ದಿನಗಳ ಹಿಂದೆಯೇ ತುಂಡಾಗಿ ಬಿದಿದ್ದು, ತುಗಾಡುತ್ತಿರುವ ಬಗ್ಗೆ ವಿದ್ಯುತ್ ಇಲಾಖೆಗೆ ಮಾಹಿತಿ ನೀಡಿದ್ದರೂ ಸಿಬ್ಬಂದಿಗಳು ಬೇಜವಾಬ್ದಾರಿ ತೋರಿದ್ದು, ಪರಿಣಾಮ ಆನೆಗಳೆರಡು ಸಾವಿಗೀಡಾಗಿವೆ ಎಂದು ಇಲಾಖೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೃತ ಕಾಡಾನೆಗಳನ್ನು ತೋಟದ ಒಳಗೆ ಹೂಳಲು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮೃತ ಆನೆಗಳನ್ನು ಅರಣ್ಯ ಕ್ರೇನ್ ಸಹಾಯದಿಂದ ತೋಟದಿಂದ ಹೊರತಂದು ನಂಜರಾಯಪಟ್ಟಣ ಸಮೀಪದ ಮೀನುಕೊಲ್ಲಿಯ ಅರಣ್ಯ ಪ್ರದೇಶಕ್ಕೆ ಸಾಗಿಸಲಾಯಿತು.
ಡಿಸಿಎಫ್ ಪೂವಯ್ಯ, ಎಸಿಎಫ್ ಎ.ಎ.ಗೋಪಾಲ್, ಆರ್‌ಎಫ್‌ಒ ಶಿವರಾಂ, ವೈದ್ಯಾಧಿಕಾರಿ ಚೆಟ್ಟಿಯಪ್ಪ, ಸಿದ್ದಾಪುರ ಠಾಣಾಧಿಕರಿ ಮೋಹನ್ ರಾಜ್ ಸೇರಿದಂತೆ ಹಲವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.