Site icon Vistara News

Rain news : ಕೊಡಗಿನಲ್ಲಿ ಮುಂದುವರಿದ ಮಳೆ, ಹಾರಂಗಿ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಳ

rain

ಮಡಿಕೇರಿ: ಕೊಡಗಿನಲ್ಲಿ ಮುಂದುವರಿದ ಗಾಳಿ, ಮಳೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ನದಿ, ಹಳ್ಳಕೊಳ್ಳಗಳು ತುಂಬಿ ತುಳುಕುತ್ತಿವೆ. ಜಿಲ್ಲೆಯಲ್ಲಿ ಭಾರಿ ಮಳೆ ಮತ್ತು ಗಾಳಿಯ ರಭಸಕ್ಕೆ ಮರಗಳು ಹಾಗೂ ಲೈಟ್ ಕಂಬಗಳು ಧರೆಗೆ ಉರುಳಿವೆ. ಸುಂಟ್ಟಿಕೊಪ್ಪದ ಪನ್ಯ ಬಳಿ ರಸ್ತೆಗೆ ಅಡ್ಡಲಾಗಿ ಮರ (Rain news ) ಹಾಗೂ ಲೈಟ್ ಕಂಬಗಳು ಬಿದ್ದಿವೆ. ಮಲೆನಾಡಿನಲ್ಲೂ ಮಳೆಯಾಗುತ್ತಿದೆ.

ಸುಂಟಿಕೊಪ್ಪ ಮಾದಾಪುರ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಮಳೆಯ ಪರಿಣಾಮ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಕೆಲವೆಡೆ ವಿದ್ಯುತ್ ಕಂಬಗಳ ಮೇಲೂ ಮರಗಳು ಮುರಿದು ಬಿದ್ದಿರುವುದನ್ನು ಈಗ ಕಾಣಬಹುದು.

ಕೊಡಗಿನ ಹಲವೆಡೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಕೊಡಗಿನ ಕೆಲ ಕುಗ್ರಾಮಗಳು ಕಗ್ಗತ್ತಲಿನಲ್ಲಿ ಮುಳುಗಿವೆ. ಕಾವೇರಿ ಜಲಾನಯನ ಪ್ರದೇಶದಲ್ಲೂ ಶನಿವಾರದಿಂದ ಭಾರಿ ಮಳೆಯಾಗುತ್ತಿದೆ. ಮುಂದಿನ ಕೆಲ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚುವ ನಿರೀಕ್ಷೆ ಇದೆ.

ಇದನ್ನೂ ಓದಿ: Weather report : ಭಾನುವಾರ ಈ ಜಿಲ್ಲೆಗಳಲ್ಲಿ ಸಿಕ್ಕಾಪಟ್ಟೆ ಮಳೆ

ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ. 10000 ಕ್ಯೂಸೆಕ್ಸ್ ನೀರು ನದಿಗೆ ಬಿಡುಗಡೆ ಮಾಡಲಾಗಿದೆ. ಮಂಡ್ಯದ ಕೆಆರ್‌ಎಸ್‌ ಅಣೆಕಟ್ಟೆಯಿಂದಲೂ ನೀರು ಬಿಡುಗಡೆ ಮಾಡಲಾಗಿದೆ.

ಹಾರಂಗಿ ಜಲಾಶಯದ ಗರಿಷ್ಠ ಸ್ಟೋರೇಜ್‌ ಸಾಮರ್ಥ್ಯ 2,859 ಅಡಿಗಳಾಗಿದೆ. ಈಗಾಗಲೇ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 2853 ಅಡಿಗೆ ಏರಿಕೆಯಾಗಿದೆ. ಬ್ರಹ್ಮಗಿರಿ ತಪ್ಪಲು ಪ್ರದೇಶದಲ್ಲೂ ಶನಿವಾರದಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಭಾರಿ ಮಳೆ ಹಿನ್ನಲೆಯಲ್ಲಿ ಕಾವೇರಿ ನದಿ ತುಂಬಿ‌ ಹರಿಯುತ್ತಿದೆ. ಕಾವೇರಿ ತ್ರಿವೇಣಿ ಸಂಗಮದ ಸ್ಥಾನ ಘಟಕ 2 ಮುಳುಗಡೆಯಾಗಿದೆ. ಭಾಗಮಂಡಲ-ನಾಪೋಕ್ಲು ರಸ್ತೆ 2 ಬಾರಿಗೆ ಜಲಾವೃತವಾಗಿದೆ. ರಸ್ತೆ ಮೇಲೆ 1 ಅಡಿ ನೀರು ಹರಿಯುತ್ತಿದೆ. ಭಾರಿ ಗಾತ್ರದ ವಾಹನ ಸಂಚಾರಕ್ಕೆ ಮಾತ್ರ ರಸ್ತೆಯಲ್ಲಿ‌ ಅವಕಾಶ ಕಲ್ಪಿಸಲಾಗಿದೆ.

ಮಳೆ ಹೀಗೆ ಮುಂದುವರೆದಲ್ಲಿ ಮಡಿಕೇರಿ ನಾಪೋಕ್ಲು ರಸ್ತೆ ಮೇಲು ನೀರು ತುಂಬುವ ಸಾಧ್ಯತೆ ಇದೆ. ಮುಂಜಾಗರೂಕತಾ ಕ್ರಮವಾಗಿ ಕಳೆದ ಒಂದು ತಿಂಗಳಿಂದ ಭಾಗಮಂಡಲದಲ್ಲಿ ಗೃಹ ರಕ್ಷಕ ದಳ ಸಿಬ್ಬಂದಿ ಬೀಡು ಬಿಟ್ಟಿದ್ದಾರೆ.

ಹೇಮಾವತಿ ಜಲಾಶಯ: ಹೇಮಾವತಿ ಜಲಾಶಯದ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಜಲಾಶಯಕ್ಕೆ 12088 ಕ್ಯೂಸೆಕ್ ನೀರು ಹರಿದು ಬರುತ್ತಿವೆ. ಒಟ್ಟು ಜಲಾಶಯದ ಗರಿಷ್ಠ ಮಟ್ಟ – 2922 ಅಡಿಗಳಾಗಿದೆ. ಡ್ಯಾಂನ ಗರಿಷ್ಠ ಸಂಗ್ರಹ ಸಾಮರ್ಥ್ಯ – 37.103 ಟಿಎಂಸಿ 200 ಕ್ಯೂಸೆಕ್ ನಷ್ಟು ನೀರನ್ನು ನದಿಯಿಂದ ಹೊರಬಿಡಲಾಗುತ್ತಿದೆ.

Exit mobile version