Site icon Vistara News

Honeybee Attack : ಹುಲಿ ‌ಸೆರೆ ಕಾರ್ಯಾಚರಣೆ ವೇಳೆ ಹೆಜ್ಜೇನು ದಾಳಿ; ಬೆದರಿ ಓಡಿ‌ದ ಸಾಕಾನೆ ಭೀಮ

Honeybee attack

ಕೊಡಗು: ಹುಲಿ‌ ಸೆರೆ (Tiger attack) ಕಾರ್ಯಾಚರಣೆ ಮಾಡುತ್ತಿದ್ದ ತಂಡದ‌ ಮೇಲೆ‌ ಹೆಜ್ಜೇನು ದಾಳಿ (Honeybee Attack) ಮಾಡಿದೆ. ಕೊಡಗಿನ ಪೊನ್ನಂಪೇಟೆ ತಾಲೂಕಿನ ಹರಿಹರ ಗ್ರಾಮದಲ್ಲಿ ಘಟನೆ ನಡೆದಿದೆ. ಅರಣ್ಯಾಧಿಕಾರಿ ಕನ್ನಂಡ‌ ರಂಜನ್, ಮಾವುತ ಕುಳ್ಳ ಹಾಗೂ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಭೀಮ ಹೆಸರಿನ ಆನೆ ಮೇಲೆ‌ ಜೇನು ಹುಳುಗಳು ಎರಗಿದೆ.

ಹರಿಹರ ಗ್ರಾಮದಲ್ಲಿ ನಿನ್ನೆ ಬುಧವಾರ ಹುಲಿಯೊಂದು ಕಾಣಿಸಿಕೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದರು. ಹುಲಿ‌ಸೆರೆಗೆ ಗುರುವಾರ ಕಾರ್ಯಾಚರಣೆ ಆರಂಭಿಸಲಾಗಿತ್ತು. ಎರಡು ಸಾಕು ಆನೆ ಜತೆಗೆ 30ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಏಕಾಏಕಿ ಹೆಜ್ಜೇನು ದಾಳಿ ಮಾಡಿದೆ. ಹೆಜ್ಜೇನು ದಾಳಿಗೆ ಬೆದರಿ ಆನೆ ಭೀಮ ಓಡಿ‌ದೆ.

ಸದ್ಯ ಅಸ್ವಸ್ಥ ಅರಣ್ಯಾಧಿಕಾರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸದ್ಯ ಇಂದಿನ ಕಾರ್ಯಾಚರಣೆಗೆ ತಾತ್ಕಾಲಿಕ ಬ್ರೇಕ್‌ ಹಾಕಲಾಗಿದೆ.

ಇದನ್ನೂ ಓದಿ: Searching For Tigers : ಪೊನ್ನಂಪೇಟೆಯಲ್ಲಿ ಗ್ರಾಮದಲ್ಲಿ ಅವಿತಿದೆ ಹುಲಿ, ಗ್ರಾಮಸ್ಥರಿಗೆ ಆತಂಕ; ಇಲ್ಲಿದೆ ವಿಡಿಯೊ

ಚಿಕ್ಕಮಗಳೂರಿನಲ್ಲಿ ಮುಂದುವರೆದ ಕಾಡಾನೆ ದಾಳಿ

ಚಿಕ್ಕಮಗಳೂರಿನಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ. ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಮೆಣಸು, ಕಾಫಿ, ಏಲಕ್ಕಿ, ಬಾಳೆ ಬೆಳೆ ನಷ್ಟವಾಗಿದೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ದೇವನ್ ಗುಲ್ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಮಂಜುನಾಥ್ ಎಂಬುವರ ತೋಟಕ್ಕೆ ಬಂದ ಕಾಡಾನೆ ಬೆಳೆಯನ್ನು ತುಳಿದು ನಷ್ಟ ಮಾಡಿದೆ.

ಇದರಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಷ್ಟವಾಗಿದ್ದರಿಂದ ರೈತ ಕಂಗಾಲಾಗಿದ್ದಾರೆ. ನಿನ್ನೆ ಬುಧವಾರ ರಾತ್ರಿಯಿಡೀ ಗ್ರಾಮದ ಸುತ್ತಮುತ್ತ ಎರಡು ಕಾಡಾನೆಗಳು ದಾಳಿ ನಡೆಸಿವೆ. ಇತ್ತ ಸ್ಥಳಕ್ಕೆ ಬಾರದ ಅರಣ್ಯ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಚಿತ್ರದುರ್ಗದಲ್ಲಿ ಕಾಡುಹಂದಿ ಬೇಟೆಗಾರರು ಅರೆಸ್ಟ್‌

ಚಿತ್ರದುರ್ಗ ಅರಣ್ಯಾಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಕಾಡುಹಂದಿ ಬೇಟೆಗಾರರನ್ನು ಬಂಧಿಸಿದ್ದಾರೆ. ಜೀವಂತ ಕಾಡುಹಂದಿ, ಬಲೆ ಸೇರಿ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಚಿತ್ರದುರ್ಗ ಮೂಲದ ಸಿದ್ದೇಶ್ (32), ಎಣ್ಣೆಗೆರೆ ಮೂಲದ ಬಾಲಚಂದ್ರ (30) ಬಂಧಿತ ಆರೋಪಿಗಳಾಗಿದ್ದಾರೆ.

ಚಿತ್ರದುರ್ಗ ತಾಲೂಕಿನ ಯರೇನಹಳ್ಳಿ ವಲಯ ಅರಣ್ಯ ಪ್ರದೇಶದಲ್ಲಿದ್ದಾಗ, ಖಚಿತ ಮಾಹಿತಿ ಆಧರಿಸಿ ಅರಣ್ಯಾಧಿಕಾರಿ ಉಷಾರಾಣಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಚಿತ್ರದುರ್ಗದ ಅರಣ್ಯಾಧಿಕಾರಿಗಳಿಂದ ಕೇಸ್ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version