ಕೊಡುಗು: ಗೂಬೆಯನ್ನು ಅಪಶಕುನ ಎಂದು ಭಾವಿಸಲಾಗುವ ಕಾರಣ ಅದನ್ನು ಮನೆಯೊಳಗೆ ಬಿಡುವುದಿಲ್ಲ. ಆದಾಗ್ಯೂ ಕೆಲವರು ಬಿಳಿ ಗೂಬೆ ಇಟ್ಟುಕೊಂಡರೆ ಶುಭ ಶಕುನ ಎಂದು ಭಾವಿಸುವುದುಂಟು. ಆದರೆ, ವನ್ಯಜೀವಿಗಳನ್ನು ಮನೆಯಲ್ಲಿಟ್ಟುಕೊಳ್ಳುವುದು ಅಕ್ರಮವಾಗಿರುವುದರಿಂದ ಸಾಕಿದರೆ ಪೊಲೀಸರ ಅತಿಥಿಯಾಗುವುದು ಗ್ಯಾರಂಟಿ. ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ.
ಮಂಜೇಶ್ವರದ ಮಹಮದ್ ನಡುಬೈಲ್, ಅಬ್ದುಲ್ ಸತ್ತಾರ್, ದಕ್ಷಿಣ ಕನ್ನಡದ ಬಿ.ಶೇಕಬ್ಬ ಬಿಳಿ ಗೂಬೆಯನ್ನು ಹಿಡಿದು ಮಾರಾಟ ಮಾಡುತ್ತಿದ್ದರು. ಅದನ್ನು ಮನೆಯಲ್ಲಿಟ್ಟುಕೊಂಡರೆ ಸಂಪತ್ತು ವೃದ್ಧಿಯಾಗುತ್ತದೆ ಎಂದು ಸಾರ್ವಜನಿಕರನ್ನು ನಂಬಿಸುತ್ತಿದ್ದರು. ವಿರಾಜಪೇಟೆಯ ಸಿಐಡಿ ಪೊಲೀಸ್ ಅರಣ್ಯ ಸಂಚಾರಿದಳದ ಅಧಿಕಾರಿಗಳೊಂದಿಗೆ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಗೂಬೆಯ ಸಮೇತ ಆರೋಪಿಗಳನ್ನು ಬಂಧಿಸಲಾಗಿದೆ. ಗೂಬೆ ಸಾಗಾಟಕ್ಕೆ ಬಳಸಿದ್ದ ವ್ಯಾಗನರ್ ಕಾರನ್ನು ವಶವಪಡಿಸಿಕೊಳ್ಳಲಾಗಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ| ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಕೊಡಗಿನ ಜೇನು, ಏಲಕ್ಕಿ, ಕಾಫಿ ಉಡುಗೊರೆ