Site icon Vistara News

Kodagu News: ಕಾವೇರಿ ತವರು ಕೊಡಗಿನಲ್ಲಿ ವರುಣನ ಕೃಪೆಗಾಗಿ ದೇವರ ಮೊರೆ ಹೋದ ಜನತೆ

People pray to God for rain in Kodagu

ಕೊಡಗು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬೇಸಿಗೆಯ ಬಿರು ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ರಾಜ್ಯದ ಜನತೆ ಸುಡು ಬಿಸಿಲಿಗೆ ಹೈರಾಣಾಗಿದ್ದಾರೆ, ಇತ್ತ ಕಾವೇರಿ (Kaveri) ತವರು ಕೊಡಗಿನಲ್ಲಿಯೂ (Kodagu News) ಸಹ ಸುಡು ಬಿಸಿಲಿನ ಜತೆಗೆ ಮಳೆಯ (Rain) ತೀವ್ರ ಕೊರತೆಯಿಂದಾಗಿ ವರುಣನ ಕೃಪೆಗಾಗಿ ಜನತೆ ದೇವರ ಮೊರೆ ಹೋಗಿದ್ದಾರೆ.

ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪ ಸಮೀಪದ ಇತಿಹಾಸ ಪ್ರಸಿದ್ದ ಶ್ರೀ ಉಮಾಮಹೇಶ್ವರಿ ದೇವಾಲಯಲ್ಲಿ ಗುರುವಾರ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಲಾಯಿತು.

ಕೊಡಗಿನ ಅಮ್ಮಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್‌ನಿಂದ ಮಳೆಗಾಗಿ ಪ್ರಾರ್ಥಿಸಿ, ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಜಿಲ್ಲೆಯ ವಿವಿಧ ಕಡೆ ಪೂಜೆ, ಪ್ರಾರ್ಥನೆಗಳು ನಡೆಯುತ್ತಲಿವೆ.

ಇದನ್ನೂ ಓದಿ: WhatsApp Update: ವಾಟ್ಸ್ ಆಪ್ ನಲ್ಲಿ ಮತ್ತೊಂದು ಹೊಸ ಫೀಚರ್! ಫೋಟೊ, ವಿಡಿಯೊ ಶೇರಿಂಗ್ ಇನ್ನೂ ಸುಲಭ

ಬೇಸಿಗೆ ಕಾಲದಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಹೆಚ್ಚು ಬಿಸಿಲಿನ ವಾತಾವರಣ ಇದ್ದರೂ ಕೂಡ ಕೊಡಗು ಮಾತ್ರ ಸದಾ ತಂಪಿನ ವಾತಾವರಣದಿಂದ ಕೂಡಿರುತಿತ್ತು. ಆದರೆ ಇದೀಗ ಕೊಡಗಿನಲ್ಲೂ ತಾಪಮಾನ 32 ಡಿಗ್ರಿ ಸೆಲ್ಷಿಯಸ್‌ಗೂ ಹೆಚ್ಚಾಗಿದ್ದು, ಸುಡು ಬಿಸಿಲಿಗೆ ಕೊಡಗಿನ ಜನತೆ ಹೈರಾಣಾಗಿದ್ದು, ಮಳೆಗಾಗಿ ಆಗಸದತ್ತ ಮುಖ ಮಾಡುತ್ತಿದ್ದಾರೆ.

ಈ ವರ್ಷ ನಿಗಧಿಯಂತೆ ವಾಡಿಕೆಯ ಮಳೆಯಾಗದೆ ಕೊಡಗು ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ್ದು, ನದಿ, ಹಳ್ಳ-ಕೊಳ್ಳಗಳು ಸಂಪೂರ್ಣವಾಗಿ ಬರಿದಾಗುತ್ತಿವೆ. ಇನ್ನು ಮುಂದಿನ ದಿನಗಳಲ್ಲಿ ವರುಣ ಕೃಪೆ ತೋರದೇ ಹೋದಲ್ಲಿ ಕಾವೇರಿಯ ತವರು ಕೊಡಗು ಜಿಲ್ಲೆಯಲ್ಲಿ ಹನಿ ನೀರಿಗೂ ಪರಿತಪಿಸಬೇಕಾದ ಪರಿಸ್ಥಿತಿ ಎದುರಾಗಲಿದೆ.

ಸಾಮಾನ್ಯವಾಗಿ ಈ ಸಮಯಕ್ಕೆ ಜಿಲ್ಲೆಯಲ್ಲಿ ಎರಡು ಮೂರು ಬಾರಿಯಾದರೂ ಮಳೆ ಸುರಿಯುತ್ತಿತ್ತು ಆದರೆ ಈ ಬಾರಿ ಜಿಲ್ಲೆಯ ನಾಪೋಕ್ಲು ಭಾಗದಲ್ಲಿ ಹೊರತುಪಡಿಸಿ ಉಳಿದೆಡೆ ಎಲ್ಲೂ ಕೂಡ ಮಳೆ ಸುರಿದಿಲ್ಲ. ಹೀಗಾಗಿ ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಕರಿಮೆಣಸು ಬಳ್ಳಿಗಳೂ ಕೂಡ ಬಿಸಿಲಿನ ತಾಪಕ್ಕೆ ಬಾಡಿ ಹೋಗಿವೆ.

ಇದನ್ನೂ ಓದಿ: FD interest rate: ಬಜಾಜ್ ಫೈನಾನ್ಸ್ ಹೆಚ್ಚಿನ ಅವಧಿಯ ಸ್ಥಿರ ಠೇವಣಿ ಬಡ್ಡಿ ದರಗಳಲ್ಲಿ ಏರಿಕೆ

ಮಳೆಗಾಗಿ ಜಿಲ್ಲೆಯ ನಾನಾ ಕಡೆ ಪೂಜೆ, ಪ್ರಾರ್ಥನೆಗಳು ನಡೆಯುತ್ತಲಿದ್ದು, ಇನ್ನಾದರೂ ಉತ್ತಮ ಮಳೆಯಾಗಲಿ ಎಂದು ಕೊಡಗಿನ ಜನತೆ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

Exit mobile version