ಕೊಡಗು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಅಕ್ರಮ ನಗದು, ಸಾಮಗ್ರಿ ತಡೆಗಾಗಿ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಚೆಕ್‍ಪೋಸ್ಟ್‌ಗಳನ್ನು ತೆರೆದು ಪ್ರತೀ ದಿನ ನಿರಂತರವಾಗಿ ವಾಹನಗಳ ತಪಾಸಣೆ ಕಾರ್ಯ ನಡೆಸಲಾಗುತ್ತಿದೆ.
ಶುಕ್ರವಾರ ಕೊಡಗು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಅವರು, ಕುಶಾಲನಗರ ಹಾಗೂ ಕೊಪ್ಪ ಚೆಕ್‍ಪೋಸ್ಟ್‌ಗೆ ಅನಿರೀಕ್ಷಿತವಾಗಿ ಭೇಟಿ ನೀಡಿದರು. ಚೆಕ್‍ಪೋಸ್ಟ್‌ನಲ್ಲಿ ನಡೆಸಲಾಗುವ ತಪಾಸಣೆ ಕುರಿತು ಪರಿಶೀಲಿಸಿ ಚೆಕ್‍ಪೋಸ್ಟ್ ಸಿಬ್ಬಂದಿಯಿಂದ ಮಾಹಿತಿ ಪಡೆದರು.
ದಾಖಲೆಗಳಿಲ್ಲದೆ ನಗದು, ಸಾಮಗ್ರಿ, ಚಿನ್ನಾಭರಣ, ಮದ್ಯ ಹಾಗೂ ವಾಣಿಜ್ಯ ಸರಕುಗಳನ್ನು ವಾಹನಗಳಲ್ಲಿ ಸಾಗಾಟ ಮಾಡುವುದನ್ನು ಸರಿಯಾಗಿ ಪರಿಶೀಲನೆ ನಡೆಸಬೇಕು. ದಾಖಲೆ ರಹಿತ ಸಾಮಾಗ್ರಿಗಳು ಮತ್ತು ನಗದು ದೊರೆತರೆ ನಿಯಮಾನುಸಾರ ಪ್ರಕರಣ ದಾಖಲಿಸುವಂತೆ ಚೆಕ್‍ಪೋಸ್ಟ್‌ನಲ್ಲಿ ಕಾರ್ಯನಿರತ ಅಧಿಕಾರಿ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಖುದ್ದು ತಾವೇ ಫೀಲ್ಡ್ ಗಿಳಿದಿದ್ದು ಬಿರು ಬಿಸಿಲಿನಲ್ಲೂ ಕೂಡ ಪ್ರತಿಯೊಂದು ವಾಹನಗಳನ್ನು ತಾವೇ ತಪಾಸಣೆ ನಡೆಸಿದರು. ಚೆಕ್‍ಪೋಸ್ಟ್ ಮಾರ್ಗವಾಗಿ ಸಂಚರಿಸುವ ವಾಹನಗಳನ್ನು ಕೆಲಹೊತ್ತು ತಾವೇ ಖುದ್ದಾಗಿ ತಪಾಸಣೆ ನಡೆಸುವ ಮೂಲಕ ಚೆಕ್‍ಪೋಸ್ಟ್ ಕರ್ತವ್ಯ ನಿರತ ಅಧಿಕಾರಿ ಸಿಬ್ಬಂದಿಗೆ ಮಾದರಿಯಾದರು.
ಚುನಾವಣೆ ಅಂತ್ಯದವರೆಗೆ ಚೆಕ್‍ಪೋಸ್ಟ್‌ಗಳಲ್ಲಿ ತಪಾಸಣೆ ಕಾರ್ಯ ನಿರಂತರವಾಗಿ ನಡೆಯಬೇಕು. ಅನಧೀಕೃತ ದಾಖಲೆ ರಹಿತ ನಗದು ಕಂಡು ಬಂದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಕುಶಾಲನಗರ ಹಾಗೂ ಕೊಪ್ಪ ಚೆಕ್‍ಪೋಸ್ಟ್‍ನಲ್ಲಿ ಕರ್ತವ್ಯ ನಿರತ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ