ಕೊಡಗು: ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 2024ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ (NSS Camp) ಸಮಾರೋಪ ಸಮಾರಂಭ ಮಡಿಕೇರಿ ಹೊರವಲಯದ ಗಾಳಿಬೀಡು ಜವಾಹರ್ ನವೋದಯ ಶಾಲೆಯಲ್ಲಿ ಅರ್ಥಪೂರ್ಣವಾಗಿ ನಡೆಯಿತು.
ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ಏಳು ದಿನಗಳು ರಾಷ್ಟ್ರೀಯ ಸೇವಾಯ ಯೋಜನೆಯ ಕಾರ್ಯಕ್ರಮಗಳು ನಡೆದಿದ್ದು, 2024ನೇ ಸಾಲಿನ ಶಿಬಿರಕ್ಕೆ ತೆರೆಬಿದ್ದಿದೆ. ರಾಷ್ಟ್ರೀಯ ಸೇವಾ ಯೋಜನೆಯ ಎಲ್ಲಾ ಸ್ವಯಂ ಸೇವಕ ವಿದ್ಯಾರ್ಥಿಗಳು ಶ್ರದ್ಧೆಯಿಂದ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲು ಇದೊಂದು ಉತ್ತಮ ವೇದಿಕೆಯಾಗಿತ್ತು.
ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲ ಓ.ಎಂ. ಪಂಕಜಾಕ್ಷನ್, ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮಾತ್ರವಲ್ಲದೆ, ಜೀವನದ ಸಾರವನ್ನು ತಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಲ್ಲಿ ಎಲ್ಲರೂ ಒಂದೇ, ನಾನು ನೀನು ಎನ್ನುವ ಭೇದ-ಭಾವಕ್ಕೆ ಅವಕಾಶವಿಲ್ಲ. ಪರಸ್ಪರ ಸಹಕಾರಿ ಮನೋಭಾವ ರೂಪಿಸಿಕೊಳ್ಳಲು ಬಹಳ ಮುಖ್ಯವಾದ ಶಿಬಿರ ಎಂದು ಸ್ವಯಂಸೇವಕರಿಗೆ ತಿಳಿ ಹೇಳಿದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಮೇ. ಪ್ರೊ. ಬಿ.ರಾಘವ ಮಾತಾನಾಡಿ, ನಮ್ಮ ಕಾಲೇಜಿನಿಂದ ಪ್ರತಿ ವರ್ಷವೂ ವಿಶೇಷ ವಾರ್ಷಿಕ ಶಿಬಿರ ನಡೆಯುತ್ತದೆ. ಎನ್ಎಸ್ಎಸ್ ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನ, ಹೊಂದಾಣಿಕೆಯ ಜೀವನ ಹಾಗು ಸರಳ ಜೀವನದ ಮಹತ್ವವನ್ನು ತಿಳಿಸುತ್ತದೆ. ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಕಳೆಯುವ ದಿನಗಳು ಬಹಳ ಮುಖ್ಯವಾದದ್ದು. ನನಗಲ್ಲ ನಿನಗೆ ಎನ್ನುವ ಧ್ಯೇಯದೊಡನೆ ಸರ್ವರನ್ನೂ ಸಮಾನವಾಗಿ ಕಾಣುವ ಮನೋಭಾವವನ್ನು ಹುಟ್ಟು ಹಾಕುವ ಇಂತಹ ಶಿಬಿರಗಳು ನಡೆಯುತ್ತಲೇ ಇರಬೇಕು. ವಿದ್ಯಾರ್ಥಿಗಳು ಶೈಕ್ಷಣಿಕ ವಿಚಾರಗಳ ಜತೆಗೆ ಇಂತಹ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಲು ಮನಸ್ಸು ಮಾಡಬೇಕು ಎಂದು ನುಡಿದರು.
ಇದನ್ನೂ ಓದಿ: Karnataka Weather : ಉತ್ತರ ಒಳನಾಡು, ಕರಾವಳಿಯಲ್ಲಿ ವ್ಯಾಪಕ ಮಳೆ; ಶಾಲೆಗೆ ನುಗ್ಗಿದ ನೀರು, ಮಕ್ಕಳಿಗೆ ರಜೆ
ಧನಾತ್ಮಕ ಮಾನಸಿಕ ದೃಢತೆಗೆ ಸರಿಸಾಟಿ ಬೇರೆಯಿಲ್ಲ
ಗಾಳಿಬೀಡು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಶಿಕಿರಣ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ನಮ್ಮ ಗ್ರಾಮದಲ್ಲಿ ಹೀಗೊಂದು ಶಿಬಿರ ನಡೆಯುತ್ತಿರುವುದು ನಮಗೆ ಹೆಮ್ಮೆಯ ವಿಚಾರ. ರಾಷ್ಟ್ರೀಯ ಸೇವಾ ಯೋಜನೆಯ ವಿಚಾರಧಾರೆಗಳು ಪ್ರತಿಯೊಬ್ಬ ಮನುಷ್ಯನಿಗೂ ಬಹಳ ಅಗತ್ಯ. ವಿದ್ಯಾರ್ಥಿ ದೆಸೆಯಲ್ಲೇ ಎನ್.ಎಸ್.ಎಸ್ ವಿಚಾರಗಳು ಮನದಲ್ಲಿ ಬೇರೂರಿದರೆ, ಆ ಧನಾತ್ಮಕ ಮಾನಸಿಕ ದೃಢತೆಗೆ ಸರಿಸಾಟಿ ಬೇರೆಯಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಜವಾಹರ್ ನವೋದಯ ವಿದ್ಯಾಲಯದ ಉಪ ಪ್ರಾಂಶುಪಾಲೆ ಶೋಭಾಮಣಿ, ಯೋಜನಾಧಿಕಾರಿಗಳಾದ ಡಾ. ಗಾಯತ್ರಿ, ಡಾ. ಮಹದೇವಯ್ಯ ಸೇರಿ ಶಿಬಿರಾಧಿಕಾರಿಗಳಾದ ಅಲೋಕ್ ಬಿಜೈ, ಖುರ್ಷಿದಾ ಭಾನು ಭಾಗಿಯಾಗಿದ್ದರು. ಜತೆಗೆ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಹಿಂದಿ ಉಪನ್ಯಾಸಕ ತಳವಾರ್, ಸ್ಥಳೀಯರಾದ ಕೋಚನ ಡಿಶಾಂತ್, ರಾಷ್ಟ್ರೀಯ ಸೇವಾ ಯೋಜನೆಯ ನಾಯಕರು ಹಾಗೂ ಸ್ವಯಂ ಸೇವಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ