Site icon Vistara News

Rain Effect : ಭಾರಿ ಮಳೆ ಎಫೆಕ್ಟ್‌; ಈ ಹೆದ್ದಾರಿ ಮಾರ್ಗದಲ್ಲಿ ನಾಳೆಯಿಂದ 1 ತಿಂಗಳು ವಾಹನ ಸಂಚಾರಕ್ಕೆ ನಿರ್ಬಂಧ!

Rain Effect

ಕೊಡಗು: ಕೊಡಗಿನಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಮಳೆಯ ಎಫೆಕ್ಟ್‌ನಿಂದಾಗಿ (Rain Effect), ಜಿಲ್ಲೆಯಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ ಹಾಕಲಾಗಿದೆ. ಕೊಡಗು ಡಿಸಿ ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾದ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ.

ಜುಲೈ 1 ರಿಂದ ಜುಲೈ 30ರವರೆಗೆ ಭಾರಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಅಗತ್ಯ ವಸ್ತುಗಳ ಪೂರೈಕೆ ಹಾಗೂ ಸಾರ್ವಜನಿಕ ಪ್ರಯಾಣಿಕರ ವಾಹನಗಳಿಲ್ಲ ಯಾವುದೇ ನಿರ್ಬಂಧ ಇಲ್ಲ. ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಭಾರಿ ಗಾತ್ರದ ವಾಹನಗಳು ಹೆಚ್ಚು ಸಂಚರಿಸುತ್ತಿದ್ದವು. ಆದರೆ ಗುಡ್ಡದ ಬದಿಯಿಂದ ಮಣ್ಣು ಕುಸಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ ಹಾಕಲಾಗಿದೆ.

ಯಾವೆಲ್ಲ ವಾಹನಗಳಿಗೆ ನಿರ್ಬಂಧ?

ವಾಹನದ ನೋಂದಣಿ ತೂಕ 18,500 ಕೆ.ಜಿ.ಗಿಂತ ಹೆಚ್ಚಿನ ತೂಕದ ಸರಕು ಸಾಗಾಣಿಕೆ ವಾಹನ, ಮಲ್ಟಿ ಆಕ್ಸಿಲ್ ಟ್ರಕ್‍ಗಳ ಸಂಚಾರ ಮತ್ತು ಭಾರೀ ವಾಹನಗಳಾದ ಬುಲೆಟ್ ಟ್ಯಾಂಕರ್ಸ್, ಶಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚಾಸಿಸ್(ಮಲ್ಟಿ ಆಕ್ಸಿಲ್), ಆರ್ಟಿಕ್ಯೂಲೇಟೆಡ್ ವಾಹನಗಳು ಮತ್ತು ಮರಳು ಸಾಗಾಣಿಕೆ, ಮರದ ದಿಮ್ಮಿಗಳನ್ನು ಸಾಗಿಸುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಮುಗಿಯುವವರೆಗೆ ನಿರ್ಬಂಧಿಸಲಾಗಿದೆ.

ಈ ವಾಹನಗಳಿಗೆ ವಿನಾಯಿತಿ

ಅಡುಗೆ ಅನಿಲ ಮತ್ತು ಇಂಧನ ಪೂರೈಕೆ ವಾಹನಗಳು, ಹಾಲು ಪೂರೈಕೆ ವಾಹನಗಳು, ಸರ್ಕಾರಿ ಕೆಲಸದ ನಿಮಿತ್ತ ಉಪಯೋಗಿಸಲ್ಪಡುವ ವಾಹನಗಳು, ಶಾಲಾ ಕಾಲೇಜು ಮತ್ತು ಸಾರ್ವಜನಿಕ ಪ್ರಯಾಣಿಕರ ವಾಹನಗಳಿಗೆ (ಮಲ್ಟಿ ಆಕ್ಸಿಲ್ ಬಸ್‍ಗಳು ಸೇರಿದಂತೆ) ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ.

ಆದೇಶ ಮೀರಿದರೆ ದಂಡ ಪ್ರಯೋಗ

ಈ ಕುರಿತು ಸೂಚನಾ ಫಲಕಗಳನ್ನು ಅಳವಡಿಸಲು ಸೂಚಿಸಲಾಗಿದೆ. ಜತೆಗೆ ಕೊಡಗು ಜಿಲ್ಲೆಯ ಮುಖಾಂತರ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 275 ರ ಜಿಲ್ಲೆಯ ಗಡಿಭಾಗಗಳಾದ ಕುಶಾಲನಗರ ಮತ್ತು ಸಂಪಾಜೆಯಲ್ಲಿ ವ್ಯವಸ್ಥಿತ ಚೆಕ್‍ಪೋಸ್ಟ್ ನಿರ್ಮಿಸುವಂತೆ ತಿಳಿಸಲಾಗಿದೆ. ದಿನದ 24 ಗಂಟೆಯೂ ನಿಗಾ ವಹಿಸಲು ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಮೊಬೈಲ್ ಪ್ಯಾಟ್ರೋಲಿಂಗ್ ನಡೆಸಲು ಹಾಗೂ ಈ ಆದೇಶ ಉಲ್ಲಂಘನೆಯಾಗದಂತೆ ಮತ್ತು ಆದೇಶ ಉಲ್ಲಂಘಿಸಿದವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಪೊಲೀಸ್ ಹಾಗೂ ಸಾರಿಗೆ ಇಲಾಖೆಗೆ ಸೂಚಿಸಲಾಗಿದೆ.

ಇದನ್ನೂ ಓದಿ: Leopard attack : ರಸ್ತೆ ಮೇಲೆ ಸತ್ತಂತೆ ಬಿದ್ದಿದ್ದ ಚಿರತೆ; ಮುಟ್ಟಲು ಹೋದ ಬೈಕ್‌ ಸವಾರ, ಕ್ಯಾಬ್‌ ಚಾಲಕನ ಮೇಲೆ ದಾಳಿ

ಭೋರ್ಗರೆದ ಧನುಷ್ ಕೋಟಿ ಜಲಪಾತ

ಮೈಸೂರಿನ ಕಾವೇರಿ ಕೊಳ್ಳದಲ್ಲಿ ಭರ್ಜರಿ ಮಳೆ ಹಿನ್ನೆಲೆಯಲ್ಲಿ ಧನುಷ್ ಕೋಟಿ ಜಲಪಾತ ಭೋರ್ಗರೆದಿದೆ. ಮೈಸೂರಿನ ಕೆಆರ್ ನಗರದ ಚುಂಚನಕಟ್ಟೆ ಬಳಿ ಇರುವ ಧನುಷ್ಕೋಟಿ ಜಲಪಾತಕ್ಕೆ ಪ್ರವಾಸಿಗರ ಕೈಬೀಸಿ ಕರೆಯುತ್ತಿದೆ.

ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಳ

ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಕೃಷ್ಣಾ ನದಿಯ ಒಳಹರಿವು ಹೆಚ್ಚಳಗೊಂಡಿದೆ. ಚಿಕ್ಕೋಡಿ ತಾಲೂಕಿನ ಮಾಂಜರಿ, ಬಾವನಸೌದತ್ತಿ ಸಂಪರ್ಕಿಸುವ ಹಳೆ ಸೇತುವೆ ಜಲಾವೃತಗೊಂಡಿದೆ.

ಕರಾವಳಿಗೆ ಭಾರಿ ಮಳೆ ಮುನ್ಸೂಚನೆ

ಜುಲೈ 1ರಂದು ಕರಾವಳಿಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಗಾಳಿಯ ವೇಗವು 30-40 ಕಿ.ಮೀ ತಲುಪುವ ಸಾಧ್ಯತೆಯಿದೆ ಹಾಗೂ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಗಾಳಿ ಜತೆಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಮಧ್ಯಮ ಮಳೆಯಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version