Site icon Vistara News

Madikeri News: ರಾಷ್ಟ್ರದ ಮಹನೀಯರ ಆದರ್ಶಗಳನ್ನು ಅಧ್ಯಯನ ಮಾಡಿ: ಡಾ.ಸೀನಪ್ಪ

Kodagu University's Registrar of Examinations Dr Seenappa talks

#image_title

ಮಡಿಕೇರಿ: ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು, ಸ್ವಾಮಿ ವಿವೇಕಾನಂದ, ವಿಶ್ವೇಶ್ವರಯ್ಯ, ಎಪಿಜೆ ಅಬ್ದುಲ್ ಕಲಾಂ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಹೀಗೆ ಹಲವು ಮಹನೀಯರ ತತ್ವ, ಸಿದ್ಧಾಂತ, ಆದರ್ಶಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು ಎಂದು ಕೊಡಗು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಡಾ.ಸೀನಪ್ಪ ತಿಳಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯ, ಕೊಡಗು ವಿಶ್ವವಿದ್ಯಾಲಯ ಸಹಯೋಗದಲ್ಲಿ ನಗರದ (Madikeri News) ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ 74ನೇ ಕಾಲೇಜು ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಭಾರತ ದೇಶದಲ್ಲಿ ಶೇ.60 ಯುವಕರಿದ್ದಾರೆ. ಯುವ ಜನತೆ ದೇಶವನ್ನು ಸದೃಢವಾಗಿ ಕಟ್ಟುವ ಮಹತ್ತರ ಜವಾಬ್ದಾರಿಯನ್ನು ನಿಭಾಯಿಸಬೇಕು. ನವ ರಾಷ್ಟ್ರ ನಿರ್ಮಾಣಕ್ಕೆ ಯುವ ಜನತೆ ಮುನ್ನುಡಿಯಾಗಬೇಕು ಎಂದರು.

ಹಿರಿಯರು ಹೇಳಿದಂತೆ “ಸರ್ವರಿಗೂ ಸಮಪಾಲು ಸಮ ಬಾಳು” ಎಂಬ ನುಡಿಯನ್ನು ಕೊಡಗು ವಿಶ್ವವಿದ್ಯಾನಿಲಯವು ನೆರವೇರಿಸುತ್ತಿದೆ. ಬಡವರಿಗೆ ನ್ಯಾಯ ಕೊಡುವಂತಾಗಲು ವಿವಿ ಶ್ರಮಿಸಲಿದೆ ಎಂದ ಅವರು, ಭೂಮಿ ಮೇಲಿರುವ ಶ್ರೇಷ್ಠ ವ್ಯಕ್ತಿಗಳೆಂದರೆ ತಂದೆ, ತಾಯಿ ಮತ್ತು ಗುರು. ಇವರನ್ನು ಎಂದಿಗೂ ನೋಯಿಸಬಾರದು. ಪೋಷಕರು ಹೆಮ್ಮೆ ಪಡುವಂತೆ ಏನಾದೃೂ ಸಾಧಿಸಿ ತೋರಿಸಬೇಕು ಎಂದು ಕಿವಿ ಮಾತು ಹೇಳಿದರು.

ಮಡಿಕೇರಿಯಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ 74ನೇ ವಾರ್ಷಿಕೋತ್ಸವವನ್ನು ಗಣ್ಯರು ಉದ್ಘಾಟಿಸಿದರು.

ಕರ್ನಾಟಕದ ಕಾಶ್ಮೀರ, ವೀರ ಯೋಧರ ನಾಡು, ಕ್ರೀಡಾಪಟುಗಳ ಬೀಡು, ಕಾವೇರಿ ಮಾತೆಯ ಮಡಿಲಿನಲ್ಲಿ ಅಹ್ಲಾದಕರ ವಾತಾವರಣದಲ್ಲಿ ಸ್ಥಾಪಿತವಾಗಿರುವ ಕೊಡಗಿನ ಈ ಕಾಲೇಜಿನಲ್ಲಿ ಜ್ಞಾನಾರ್ಜನೆ ಮಾಡಲು ನೀವು ಪುಣ್ಯವಂತರು, ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಡಾ.ಸೀನಪ್ಪ ಸಲಹೆ ನೀಡಿದರು.

ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರು ಹಾಗೂ ರೇಡಿಯೋಲಜಿಸ್ಟ್ ಆದ ಡಾ.ಶ್ಯಾಮ್ ಅಪ್ಪಣ್ಣ ಮಾತನಾಡಿ, ಕಠಿಣ ಸಮಯದಲ್ಲಿ ಸಹಕರಿಸಿದವರನ್ನು ಹಾಗೂ ಕಠಿಣ ಸಮಯದಲ್ಲಿ ಕೈ ಬಿಟ್ಟವರನ್ನು ಎಂದಿಗೂ ಮರೆಯಬಾರದು. ತಂದೆ-ತಾಯಿ ಎಂದಿಗೂ ಮಕ್ಕಳಿಗೆ ಒಳಿತನ್ನು ಬಯಸುತ್ತಾರೆ. ಅವರ ಆಸೆ-ಆಕಾಂಕ್ಷೆಯನ್ನು ನೆರವೇರಿಸಿ ಕೊಡಬೇಕಾದದ್ದು ವಿದ್ಯಾರ್ಥಿಗಳ ಕರ್ತವ್ಯ ಎಂದರು.

ಡಾ.ಶ್ಯಾಮ್ ಅಪ್ಪಣ್ಣ

ಮೊಬೈಲ್ ಕಡಿಮೆ ಬಳಕೆ ಮಾಡಿ, ತಂದೆ, ತಾಯಿ ಕುಟುಂಬ, ಸ್ನೇಹಿತರೊಂದಿಗೆ ಮಾತನಾಡುವ ಮೂಲಕ ಅಮೂಲ್ಯ ಸಮಯವನ್ನು ಕುಟುಂಬದೊಂದಿಗೆ ಕಳೆಯಿರಿ ಎಂದ ಅವರು, ‘ಗಡಿಯಾರವನ್ನು ಕೊಳ್ಳಬಹುದು, ಸಮಯವನ್ನು ಕೊಳ್ಳಲು ಸಾಧ್ಯವಿಲ್ಲ. ಕಳೆದುಹೋದ ಸಮಯ ಮರಳಿ ಬರುವುದಿಲ್ಲ. ನಿಮ್ಮ ಅಮೂಲ್ಯ ಸಮಯವನ್ನು ಒಳ್ಳೆಯದಕ್ಕಾಗಿ ಬಳಕೆ ಮಾಡಿ. ಮನೆಯನ್ನು ಕೊಳ್ಳಬಹುದು, ಕುಟುಂಬವನ್ನು ಖರೀದಿಸಲು ಸಾಧ್ಯವಿಲ್ಲ. ಎಲ್ಲರೊಂದಿಗೂ ಪ್ರೀತಿ, ವಿಶ್ವಾಸದಿಂದಿರಿ ಮುಂದೊಂದು ದಿನ, ಅದು ನಿಮ್ಮನ್ನು ಎತ್ತರದ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂದು ಡಾ.ಶ್ಯಾಮ್ ಅಪ್ಪಣ್ಣ ತಿಳಿಸಿದರು.

ಇದೇ ಸಂದರ್ಭದಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎನ್‍ಸಿಸಿ, ಎನ್‍ಎಸ್‍ಎಸ್ ಘಟಕದ ವಿದ್ಯಾರ್ಥಿಗಳಲ್ಲಿ ಅಧಿಕ ಅಂಕ ಪಡೆದ ಹಾಗೂ ಅತ್ಯುತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಡಾ.ಬಿ.ರಾಘವ, ವಿದ್ಯಾರ್ಥಿ ಸಂಘದ ಸಲಹೆಗಾರರಾದ ಬಿ.ಎಚ್.ತಳವಾರ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Exit mobile version