Site icon Vistara News

ಕೇಂದ್ರ ಸಚಿವ ನಿತಿನ್‌ ಗಡ್ಕರಿಗೆ ಕೊಡಗಿನ ಜೇನು, ಏಲಕ್ಕಿ, ಕಾಫಿ ಉಡುಗೊರೆ

ಸಚಿವ ನಿತಿನ್ ಗಡ್ಕರಿ

ಕೊಡಗು: ಕುಟುಂಬದ ಜತೆಗೆ ಖಾಸಗಿ ಭೇಟಿ ನಿಮಿತ್ತ ಕುಟುಂಬ ಸಮೇತರಾಗಿ ಕೊಡಗಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಆಗಮಿಸಿದ್ದರು. ಕೊಡಗಿನ ಸೌಂದರ್ಯಕ್ಕೆ ಮಾರುಹೋದ ಕೇಂದ್ರ ಸಚಿವರಿಗೆ ಕೊಡಗಿನ ವಿಶೇಷ ಉತ್ಪನ್ನಗಳನ್ನು ಉಡುಗೊರೆಯಾಘಿ ನೀಡಲಾಯಿತು.

ಐದು ದಿನದ ಪ್ರವಾಸಕ್ಕೆಂದು ಕುಟುಂಬ ಸಮೇತರಾಗಿ ಆಗಮಿಸಿದ ಸಚಿವರನ್ನು ಡಿಸಿ ಸತೀಶ್, ಎಸ್ಪಿ ಎಂ.ಎ. ಅಯ್ಯಪ್ಪ ಬರಮಾಡಿಕೊಂಡರು. ಕುಶಾಲನಗರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ ಮಾಡಲಾಯಿತು.

ಇದನ್ನೂ ಓದಿ | ಪ್ರತಿ ಕೆಜಿಗೆ 1000 ಕೋಟಿ ರೂ.ಕೊಡುತ್ತೇನೆಂದ ನಿತಿನ್‌ ಗಡ್ಕರಿ; 15ಕೆಜಿ ತೂಕ ಇಳಿಸಿಕೊಂಡ ಬಿಜೆಪಿ ಸಂಸದ

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ. ಬೋಪಯ್ಯ ಅವರು ಸಚಿವರು ತಂಗಿದ್ದ ಮಡಿಕೇರಿಯ ತಾಜ್ ರೆಸಾರ್ಟ್‌ನಲ್ಲಿ ಭೇಟಿ ಮಾಡಿ ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿದರು. ಸಚಿವರು ಕೊಡಗಿನ ಹೆದ್ದಾರಿ ಅಭಿವೃದ್ಧಿ ಮತ್ತು ಪ್ರವಾಸೋದ್ಯಮದ ಬಗ್ಗೆ ಬೋಪಯ್ಯ ಅರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಂಡರು. ಹಾಗೆಯೇ ಕೊಡಗಿನ ಹೆದ್ದಾರಿಗಳ ಅಭಿವೃದ್ಧಿ ಬಗ್ಗೆ ರಾಜ್ಯ ಸರಕಾರದಿಂದ ಸೂಕ್ತ ಪ್ರಸ್ತಾವನೆ ಕೇಂದ್ರಕ್ಕೆ ಕಳುಹಿಸಿದರೆ ತಮ್ಮ ಇಲಾಖೆಯಿಂದ ಆದ್ಯತೆಯಲ್ಲಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.

ಕೊಡಗಿನ ಜೇನು ತುಪ್ಪ, ಏಲಕ್ಕಿ ಮತ್ತು ಕಾಫಿ ಪುಡಿಯನ್ನು ಗಡ್ಕರಿ ಸ್ವೀಕರಿಸಿದರು.

ಕೊಡಗಿನಲ್ಲಿ ಪ್ರವಾಸೋದ್ಯಮಕ್ಕೆ ಅನೇಕ ಅವಕಾಶಗಳಿದ್ದು, ಪ್ರವಾಸೋದ್ಯಮದಿಂದ ಸ್ಥಳೀಯವಾಗಿ ಉದ್ಯೋಗ ಸಮಸ್ಯೆ ಸ್ವಲ್ಪ ಮಟ್ಟಿಗೆ ನಿವಾರಣೆಯಾಗುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯರವರ ಸೇವೆ ಹಾಗೂ ಕೊಡಗಿನವರು ಸೈನ್ಯಕ್ಕೆ ನೀಡುತ್ತಿರುವ ಕೊಡುಗೆಯನ್ನು ಮುಕ್ತ ಕಂಠದಿಂದ ಪ್ರಶಂಶಿಸಿದರು. ಕೆ.ಜಿ.ಬೋಪಯ್ಯ ಅವರು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ ಬಗ್ಗೆ ಮತ್ತು ಆಗಿನ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಗಡ್ಕರಿಯವರು ಮಾತಿನ ನಡುವೆ ಸ್ಮರಿಸಿದರು.

ಇದನ್ನೂ ಓದಿ| ನೀರಿಗಿಳಿಯೋ ಮುನ್ನ ಎಚ್ಚರ! ಕೊಡಗಿನ ಅಬ್ಬಿ ಜಲಪಾತದಲ್ಲಿ ತೆಲಂಗಾಣದ ಮೂವರು ಪ್ರವಾಸಿಗರ ದುರ್ಮರಣ

ಸಚಿವರಿಗೆ ಶಾಲು ಹೊದಿಸಿದ ಭೋಪಯ್ಯ, ವಿನಯ್‌ ಸೀತಾಪತಿ ಅವರು ರಚಿಸಿರುವ ʼJugalbandi: The BJP Before Modiʼ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು. ಕೊಡಗಿನಲ್ಲಿ ವಿಶೇಷವಾಗಿ ಲಭಿಸುವ ಕಾಫಿ, ಏಲಕ್ಕಿ ಹಾಗೂ ಕಾಫಿ ಪುಡಿಯನ್ನು ಉಡುಗೊರೆಯಾಗಿ ನೀಡಿದರು.

ಗಡ್ಕರಿಯವರು ಜೇನುತುಪ್ಪವನ್ನು ಸವಿದು ಅದರ ತಾಜಾತನ ಮತ್ತು ಗುಣಮಟ್ಟವನ್ನು ಕೊಂಡಾಡಿದರು. ಕೊಡಗಿನ ಕಿತ್ತಳೆ ಬಗ್ಗೆ ಶಾಸಕರಿಂದ ಮಾಹಿತಿ ಕೇಳಿದ ಸಚಿವರು ಕೊಡಗಿನಲ್ಲಿ ಕಿತ್ತಳೆ ಇಳುವರಿ ಕ್ಷೀಣಿಸುತ್ತಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು. ಕೊಡಗಿನಲ್ಲಿ ಕಿತ್ತಳೆ ಪುನಶ್ಚೇತನಕ್ಕೆ ನಾಗ್ಪುರ ಮಾದರಿ ಕಿತ್ತಳೆಗೆ ಪೂರಕ ವಾತಾವರಣ ಸೃಷ್ಟಿ ಮತ್ತು ತಳಿ ಸಂವರ್ಧನೆ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಶಾಸಕರಿಗೆ ಸಲಹೆ ನೀಡಿದರು.

5 ದಿನದ ಕೊಡಗು ಪ್ರವಾಸ ಹಮ್ಮಿಕೊಂಡಿದ್ದ ಗಡ್ಕರಿ ಅವರು ಸೋಮವಾರ ಝಿರೋ ಟ್ರಾಫಿಕ್‌ನಲ್ಲಿ ಮಡಿಕೇರಿಯಿಂದ ಬೆಂಗಳೂರಿನತ್ತ ಪ್ರಯಾಣಿಸಿದರು. ಝೆಡ್ ಪ್ಲಸ್ ಭದ್ರತೆಯ ಸಚಿವರು ತೆರಳುವ ಮಾರ್ಗದಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿತ್ತು. ಬೆಂಗಳೂರಿನಿಂದ‌ ವಿಶೇಷ ವಿಮಾನದಲ್ಲಿ ನಾಗ್ಪುರಕ್ಕೆ ನಿತಿನ್ ಗಡ್ಕರಿ ತೆರಳಲಿದ್ದಾರೆ.

ಇದನ್ನೂ ಓದಿ | ಹೈವೇ ನಿರ್ಮಾಣದಲ್ಲಿ ಅದ್ಭುತ ಸಾಧನೆ; ಗಿನ್ನಿಸ್ ದಾಖಲೆ ಬರೆದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

Exit mobile version