Site icon Vistara News

ಮಂಜಿನ ನಗರಿಯ ಸ್ಟೋನ್‌ಹಿಲ್‌ ವ್ಯೂ ಪಾಯಿಂಟ್‌ ಈಗ ಪುಂಡು ಪೋಕರಿಗಳ ಅಡ್ಡಾ

ಪ್ರವಾಸಿ ತಾಣ

ಮಡಿಕೇರಿ: ಸುಂದರ ಪ್ರಕೃತಿಯ ನಡುವೆ ಇರುವ ಬೆಟ್ಟ ಅದು. ಪ್ರವಾಸಿ ತಾಣದ ಮುಕುಟ ಮಣಿಯಂತಿರುವ ವ್ಯೂ ಪಾಯಿಂಟ್. ಒಂದು ಬಾರಿ ಇಲ್ಲಿಗೆ ವಿಸಿಟ್ ಕೊಟ್ಟರೆ ಮನಸ್ಸು ಫ್ರೆಶ್ ಆಗುತ್ತದೆ. ಇಲ್ಲಿ ನಿಂತು ನೋಡಿದರೆ ಇಡೀ ಮಡಿಕೇರಿಯ ದರ್ಶನವಾಗುತ್ತದೆ. ಆದರೆ ಪ್ರಕೃತಿ ಮಾತೆಯ ಶಿರದಂತಿರುವ ಬೆಟ್ಟದ ತುದಿ ಇದೀಗ ಹೇಳುವವರು ಕೇಳುವವರಿಲ್ಲದೆ, ಪುಂಡ ಪೋಕರಿಗಳ ಹಾವಳಿಯಿಂದ ಕಸದ ಕೊಂಪೆಯಾಗಿದೆ.

ಪ್ರವಾಸಿಗರ ಸ್ವರ್ಗ, ಮಂಜಿನ ನಗರಿ ಅಂತೆಲ್ಲ ಕರೆಸಿಕೊಳ್ಳುವ ಕೊಡಗಿನ ಸ್ಟೋನ್ ಹಿಲ್ ಬೆಟ್ಟದಲ್ಲಿ ಇರುವ ಹಿಲ್‌ಪಾಯಿಂಟ್ ಪುಂಡಪೋಕರಿಗಳಿಂದ ಹಾಳಾಗುತ್ತಿದೆ. ಇಲ್ಲಿ ಎಲ್ಲಿ ನೋಡಿದರೂ ಬರೇ ಗಾಜಿನ‌ ಚೂರುಗಳು. ‌ಬೆಟ್ಟದ ಮೇಲೆ‌ ಮೊಸಾಯಿಕ್‌ ಹಾಕಿದಂತೆ ಕಾಣುವ ಮಧ್ಯದ ಬಾಟಲಿಗಳ ಚೂರು. ಇಲ್ಲಿ ಎಂಜಾಯ್ ಮಾಡಲೆಂದು ಬರುವ ಕಿಡಿಗೇಡಿಗಳು ಕುಡಿದ ಬಳಿಕ ಮದ್ಯದ ಬಾಟಲಿಗಳನ್ನು ಅಲ್ಲೇ ಬೀಸಿ ಒಡೆದು ದಾಂಧಲೆ ಮಾಡುತ್ತಾರೆ. ಹಾಗಾಗಿ ಬೆಟ್ಟದ ತುಂಬೆಲ್ಲಾ ಬರೇ ಗಾಜಿನ ಚೂರುಗಳೇ ತುಂಬಿ ಹೋಗಿದೆ.

ಪವನ್ ಪೆಮ್ಮಯ್ಯ

ಪವನ್ ಪೆಮ್ಮಯ್ಯ, ಸ್ಥಳೀಯ ನಿವಾಸಿ ಇವರು ಹೇಳಿದ ಮಾತು- “ಹಾಗೆ ನೋಡಿದರೆ ಇದೊಂದು ಒಳ್ಳೆಯ ಪಿಕ್ನಿಕ್ ಸ್ಪಾಟ್ ಕೂಡ ಹೌದು. ನಗರದ ಸಮೀಪವೆ ಇರೋ ಈ ವ್ಯೂ ಪಾಯಿಂಟ್‌ನಲ್ಲಿ ನಿಂತು ನೋಡಿದರೆ 180 ಡಿಗ್ರಿಯಲ್ಲಿ ಮಡಿಕೇರಿಯ ದರ್ಶನ ವಾಗುತ್ತೆ. ಬೆಟ್ಟದ ಕೆಳಭಾಗಕ್ಕೆ ಇಳಿದರೆ ಕಾಡು ಹಣ್ಣುಗಳ ಸವಿಯಬಹುದು. ಆದರೆ ಸ್ಟೋನ್ ಹಿಲ್ ವ್ಯೂ ಪಾಯಿಂಟ್ ಇದೀಗ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿದೆ. ಬೆಟ್ಟದ ತುಂಬೆಲ್ಲ ಕುಡಿದು ಒಡೆದ ಬಾಟಲ್‌ಗಳ ಚೂರುಗಳು ಹಾಗೂ ಕಸದ ದೃಶ್ಯವೇ ಕಣ್ಣಿಗೆ ಕಾಣುತ್ತೆ. ಪ್ರವಾಸಿಗರ ಪಾಲಿಗಂತೂ ಭ್ರಮನಿರಸನ ಉಂಟುಮಾಡುವಂತಿದೆ.”

ಸುಚಿ

ಸುಚಿ, ಸ್ಥಳೀಯ ನಿವಾಸಿ ಹೇಳುತ್ತಾರೆ- “ಪ್ರಕೃತಿಯ ಮಡಿಲಿನಲ್ಲಿ ಬಂದವರು ಎಷ್ಟು ಬೇಕಾದರೂ ಎಂಜಾಯ್ ಮಾಡಲಿ, ಆದರೆ ಅದೇ ಪ್ರಕೃತಿಯನ್ನು ಹಾಳು ಮಾಡುವುದು ಯಾಕೆ ಅನ್ನುವುದು ಮಾತ್ರ ಗೊತ್ತಾಗುತ್ತಿಲ್ಲ.”

ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ನಿರ್ಜನವಾಗಿರುವ ಈ ತಾಣ, ಸಂಜೆಯಾದಂತೆ ಬಾಟಲಿ ಹಿಡಿದುಕೊಂಡು ಬರುವ ಪುಂಡುಪೋಕರಿಗಳಿಂದ ಗಿಜಿಗುಡುತ್ತದೆ. ಆ ಹೊತ್ತಿಗೆ ಸಭ್ಯರು ಅಲ್ಲಿದ್ದರೆ ಜಾಗ ಖಾಲಿ ಮಾಡಬೇಕಾಗಿ ಬರುತ್ತದೆ. ಅಮಲೇರಿ ಹಾವಳಿ ಎಬ್ಬಿಸುವ ಪುಂಡುಪೋಕರಿಗಳಿಂದಾಗಿ ಸ್ಥಳೀಯ ನಿವಾಸಿಗಳ ನೆಮ್ಮದಿಯೂ ಕೆಟ್ಟಿದೆ. ಮಾತ್ರವಲ್ಲ ಇಲ್ಲಿ ಡ್ರಗ್ಸ್‌ ದಂಧೆಯೂ ನಡೆಯುತ್ತಿರಬಹುದು ಎಂದು ಈ ಪೋಕರಿಗಳ ವರ್ತನೆ ಗಮನಿಸಿದವರು ಅನುಮಾನ ಪಡುತ್ತಾರೆ. ಸ್ಥಳೀಯ ನಗರಸಭೆ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ದುಷ್ಕರ್ಮಿಗಳ ವಿರುದ್ಧ ಕ್ರಮ‌ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ| ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ ₹180 ಕೋಟಿ ಪ್ರಸ್ತಾವನೆ

Exit mobile version