Site icon Vistara News

Wild Animals Attack : ಮನೆಯಂಗಳವನ್ನು ಧ್ವಂಸ ಮಾಡಿದ ಆನೆಗಳು; ಗ್ರಾಮಕ್ಕೆ ಓಡೋಡಿ ಬಂದ ಕರಡಿ

wild animals Attack

ಕೊಡಗು/ಬಳ್ಳಾರಿ: ರಾಜ್ಯದ ಹಲವೆಡೆ ಕಾಡು ಪ್ರಾಣಿಗಳ ಹಾವಳಿ (Wild Animals Attack) ಹೆಚ್ಚಾಗಿದೆ. ಆಹಾರ ಅರಸಿ ಕಾಡಂಚಿನ ಗ್ರಾಮಗಳಿಗೆ ಕಾಡು ಪ್ರಾಣಿಗಳು ಲಗ್ಗೆ ಇಡುತ್ತಿವೆ. ಕೊಡಗಿನಲ್ಲಿ ಮನೆಯಂಗಳಕ್ಕೆ ಆನೆಗಳ ಹಿಂಡು ಲಗ್ಗೆ ಇಟ್ಟು, ದಾಂಧಲೆ ನಡೆಸಿದೆ.

ಕೊಡಗಿನ ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದ ಮೂಕೊಂಡ ಸುಬ್ರಮಣಿ ಎಂಬುವವರ ಮನೆಯೊಳಗೆ ಮರಿಯಾನೆಗಳು ನುಗ್ಗಲು ಯತ್ನಿಸಿದೆ. ಮನೆಯಂಗಳದಲ್ಲಿದ್ದ ಹೂಕುಂಡಗಳನ್ನು ಧ್ವಂಸ ಮಾಡಿ, ಪ್ಲ್ಯಾಸ್ಟಿಕ್ ಚೇರ್‌ಗಳನ್ನು ಹೊಡೆದು ಹಾಕಿವೆ.

ಗುಹ್ಯ ಗ್ರಾಮದಲ್ಲಿ ನಿರಂತರ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಇದನ್ನೂ ತಡೆಗಟ್ಟಲು ಅರಣ್ಯ ಇಲಾಖೆ ವಿಫಲವಾಗಿದೆ. ಅರಣ್ಯ ಇಲಾಖೆ ವಿರುದ್ಧ ಸುಬ್ರಮಣಿ ಆಕ್ರೋಶ ಹೊರಹಾಕಿದ್ದಾರೆ. ಜನರು ಭಯದ ವಾತಾವರಣದಲ್ಲೇ ಓಡಾಡುವಂತಾಗಿದೆ. ತೋಟದಲ್ಲಿ ಕಾಫಿ ಬೆಳೆಗಳ ನಾಶ ಮಾಡುತ್ತಿವೆ, ಇದರಿಂದಾಗಿ ಲಕ್ಷಾಂತರ ರೂ. ನಷ್ಟವಾಗಿದೆ. ಸರ್ಕಾರ ಕೂಡಲೇ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.

wild animals attack

‌ಗ್ರಾಮಕ್ಕೆ ಓಡೋಡಿ ಬಂದ ಕರಡಿ

ಆಹಾರ ಅರಸಿ ಮಂಗಳವಾರ ಬೆಳಗ್ಗೆ ಕರಡಿಯೊಂದು ಗ್ರಾಮಕ್ಕೆ ಓಡೋಡಿ ಬಂದಿದೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ದೇವಸಮುದ್ರ ಗ್ರಾಮಕ್ಕೆ ಕರಡಿಯೊಂದು ನುಗ್ಗಿದ್ದು,ಜನರು ಚೆಲ್ಲಾಪಿಲ್ಲಿಯಾಗಿ ಓಡಿದ್ದರು. ಕೆಲಕಾಲ ಆತಂಕ ಸೃಷ್ಟಿಸಿದ ಕರಡಿಯು ಜನರ ಕೂಗಾಟಕ್ಕೆ ಗ್ರಾಮದಿಂದ ಕಾಡಿನ ಕಡೆಗೆ ಓಡಿ ಹೋಗಿದೆ.

ಇದನ್ನೂ ಓದಿ: Kolar news : ಬ್ಲಾಸ್ಟಿಂಗ್‌ ವೇಳೆ ಉರುಳಿ ಬಿದ್ದ ಬಂಡೆಕಲ್ಲು, ಟ್ರ್ಯಾಕ್ಟರ್‌-ಹಿಟಾಚಿ ಅಪ್ಪಚ್ಚಿ; ಮೂವರು ಕಾರ್ಮಿಕರು ನಾಪತ್ತೆ

ಬಾವಿಗೆ ಬಿದ್ದು ಕಾಡಾನೆ ಸಾವು

ಮನೆ ಮುಂದೆ ಇದ್ದ ಬಾವಿಗೆ ಬಿದ್ದು ಕಾಡಾನೆಯೊಂದು ಮೃತಪಟ್ಟಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ಎಂಬಲ್ಲಿ ಘಟನೆ ನಡೆದಿದೆ.

ಗ್ರಾಮದ ಬಿದ್ದಪ್ಪ ಎಂಬುವರು ಉದ್ಯೋಗ ಖಾತ್ರಿ ಯೋಜನೆಯಡಿ ಕುಡಿಯುವ ನೀರಿಗಾಗಿ ಬಾವಿಯನ್ನು ತೆರೆದಿದ್ದರು. ಆಹಾರ ಅರಸುತ್ತಾ ಬಂದಿದ್ದ ಕಾಡಾನೆಯು ಬಾವಿ ಕಾಣದೆ ತೆರೆದಿದ್ದ ಬಾವಿಗೆ ತಡರಾತ್ರಿ ಬಿದ್ದಿದೆ. ಬಿದ್ದ ರಭಸಕ್ಕೆ ಗಂಭೀರ ಗಾಯಗೊಂಡ ಕಾಡಾನೆ ಮೇಲೆ ಬರಲು ಆಗದೆ ನರಳಾಡಿ ಪ್ರಾಣ ಬಿಟ್ಟಿದೆ.

wild animals attack

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾವಿಯೊಳಗೆ ಬಿದ್ದು ಸಾವನ್ನಪ್ಪಿದ ಕಾಡಾನೆಯನ್ನು ಮೇಲಕ್ಕೆತ್ತಿದ್ದಾರೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version