ಕೊಡಗು: ಹುಲಿ ದಾಳಿಗೆ (Wild Animals Attack) ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ. ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಿಟ್ಟೂರು ಗ್ರಾಮದ ರಾಜಪುರ ರಸ್ತೆ ಸಮೀಪ ಗುರುವಾರ ಸಂಜೆ ಈ ಘಟನೆ ನಡೆದಿದೆ.
ಅಸ್ಸಾಂ ಮೂಲದ ಮೊಹಿಸೂರು ರೆಹಮಾನ್ (51) ಹುಲಿ ದಾಳಿಗೆ ಬಲಿಯಾದ ವ್ಯಕ್ತಿ. ಹಸುವಿನ ಮೇಲೆ ದಾಳಿ ಮಾಡಲು ಬಂದಂತಹ ಹುಲಿ, ಅಲ್ಲೇ ಇದ್ದ ಅಸ್ಸಾಂ ಮೂಲದ ಕಾರ್ಮಿಕ ಮೊಹಿಸೂರು ರೆಹಮಾನ್ ಮೇಲೆ ಎಗರಿ ಬಲಿ ತೆಗೆದುಕೊಂಡಿದೆ.
ಇದನ್ನೂ ಓದಿ: DRDO Test: ದೇಶೀಯ ತಂತ್ರಜ್ಞಾನದ ಕ್ರೂಸ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ
ಘಟನೆಯ ಕುರಿತು ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಹುಲಿಯನ್ನು ಸೆರೆಹಿಡಿಯುವಂತೆ ಒತ್ತಾಯಿಸಿದ್ದಾರೆ. ಈ ಹುಲಿ ದಾಳಿಯಿಂದ ದಕ್ಷಿಣ ಕೊಡಗಿನ ಜನತೆ ಭಯ ಭೀತರಾಗಿದ್ದು, ಒಬ್ಬೋಬ್ಬರೆ ಓಡಾಡಲು ಹಾಗೂ ಕಾಫಿ ತೋಟದಲ್ಲಿ ಕೆಲಸ ಮಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕನಕಗಿರಿಯಲ್ಲಿ ಕರಡಿ ದಾಳಿಗೆ ವೃದ್ಧ ಬಲಿ
ಕರಡಿ ದಾಳಿಯಿಂದ ತೀವ್ರ ಗಾಯಗೊಂಡಿದ್ದ ವೃದ್ಧನೋರ್ವ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ರಾಂಪುರ ಗ್ರಾಮದಲ್ಲಿ ಗುರುವಾರ ನಡೆದಿದೆ.
ಚೆನ್ನಪ್ಪ (74) ಮೃತಪಟ್ಟ ವೃದ್ಧ. ರಾಂಪುರ ಗ್ರಾಮದ ಹೊರವಲಯದ ಕೆರೆ ಬಳಿ ಇರುವ ಆಂಜನೇಯ ದೇವಸ್ಥಾನದ ಬಳಿ ದುರ್ಘಟನೆ ನಡೆದಿದೆ.
ಘಟನೆಯ ಹಿನ್ನೆಲೆ
ದೇವಸ್ಥಾನದಲ್ಲಿದ್ದ ಕರಡಿಯನ್ನು ಗಮನಿಸಿದ್ದ ಗ್ರಾಮಸ್ಥರು ಅದನ್ನು ಕೂಡಿಹಾಕಿದ್ದರು. ಆದರೆ ಅಲ್ಲಿಂದ ತಪ್ಪಿಸಿಕೊಂಡು ಹೊರ ಬಂದ ಕರಡಿಯು ವೃದ್ಧ ಚೆನ್ನಪ್ಪನ ಮೇಲೆ ದಾಳಿ ನಡೆಸಿದ್ದು, ತೀವ್ರ ಗಾಯಗೊಂಡಿದ್ದ ವೃದ್ಧನನ್ನು ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವೃದ್ಧ ಚೆನ್ನಪ್ಪ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: CET 2024 exam: ದಾಖಲೆ ಸಂಖ್ಯೆಯಲ್ಲಿ ಸಿಇಟಿ ಬರೆದ ವಿದ್ಯಾರ್ಥಿಗಳು; ಔಟ್ ಆಫ್ ಸಿಲಬಸ್ ಪ್ರಶ್ನೆಗೆ ಆಕ್ರೋಶ
ಘಟನೆಯ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸ್ಥಳೀಯರು ತೀವ್ರ ತರಾಟೆಗೆ ತೆಗೆದುಕೊಂಡರು. ಕರಡಿಯನ್ನು ಸೆರೆ ಹಿಡಿಯಲು ಬೇಕಾದ ಬೋನು ಮತ್ತು ಇತರೆ ಪರಿಕರಗಳನ್ನು ತರದೇ ಹಾಗೆ ಬರೀಗೈಯ್ಯಲ್ಲಿ ಬಂದಿದ್ದ ಅಧಿಕಾರಿ, ಸಿಬ್ಬಂದಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡು, ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಕರಡಿ ಉಪಟಳವನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.