ಕೋಲಾರ: ಮನೆ ಮುಂದೆ ಬಂದು ನಿಂತಿದ್ದ ಜೆಸಿಬಿ ವಾಹನಗಳನ್ನು ಕಂಡೊಂಡನೆ ನಿವಾಸಿಗಳು ಕೆಂಡಕಾರಿದರು. ಯಾವುದೇ ಕಾರಣಕ್ಕೂ ಮನೆಗಳನ್ನು ತೆರವುಗೊಳಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು. ಖುದ್ದು ಫೀಲ್ಡಿಗಿಳಿದ ಶಾಸಕಿಯನ್ನು ಲೆಕ್ಕಿಸದೇ ಕಲ್ಲೆಸೆಯಲು ಮುಂದಾಗಿದ್ದರು. ಆದರೆ ಪೊಲೀಸರ ಸಮಯ ಪ್ರಜ್ಞೆಯಿಂದ ಕಲ್ಲೇಟು ತಪ್ಪಿತ್ತು. ಈ ಘಟನೆ ಕೋಲಾರ ಜಿಲ್ಲೆಯ (Kolar News) ಕೆಜಿಎಫ್ ತಾಲೂಕಿನ ಬೇತಮಂಗಲದದಲ್ಲಿ ಶನಿವಾರ ನಡೆಯಿತು.
ಅ.14ರಂದು ಬೇತಮಂಗಲದಿಂದ ವಿ. ಕೋಟೆಗೆ ತೆರಳುವ ಹಳೆ ಮದ್ರಾಸ್ ರಸ್ತೆ ತೆರವು ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು. ತೆರವು ಕಾರ್ಯಾಚರಣೆ ವೇಳೆ ಸ್ಥಳೀಯರು ಹೈ ಡ್ರಾಮಾವನ್ನೇ ಮಾಡಿದರು. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ಕಾಮಗಾರಿಗೆ ಖುದ್ದು ಶಾಸಕಿ ರೂಪಕಲಾ ನೇತೃತ್ವದಲ್ಲಿ ಪಿಡಬ್ಲ್ಯೂಡಿ ಅಧಿಕಾರಿಗಳು ಕಾರ್ಯಾಚರಣೆಗಿಳಿದರು.
ಇದನ್ನೂ ಓದಿ: Murder Case : ಕೊಡಲಿಯಿಂದ ಹೊಡೆದು ಪತ್ನಿಯನ್ನೇ ಕೊಂದ ಕುಡುಕ ಪತಿ!
ಆದರೆ ಒತ್ತುವರಿ ತೆರವು ಕಾರ್ಯಾಚರಣೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ನೋಟಿಸ್ ನೀಡದೆ ಏಕಾಏಕಿ ಮನೆ ಕೆಡವಲು ಮುಂದಾದ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಈ ವೇಳೆ ಮನೆ ಒಡೆಯಲು ಬಂದಾಗ ನಿವಾಸಿಯೊಬ್ಬ ಜೆಸಿಬಿ ತಡೆಯಲು ಮುಂದಾದ. ಜತೆಗೆ ಶಾಸಕಿ ರೂಪಕಲಾಗೆ ಹಾಗೂ ಜೆಸಿಬಿಗೆ ಕಲ್ಲು ಹೊಡೆಯಲು ಮುಂದಾದ. ಕೂಡಲೇ ಅಲರ್ಟ್ ಆದ ಪೊಲೀಸರು ಆತನನ್ನು ತಡೆಹಿಡಿದರು.
ಕಲ್ಲು ತೂರಲು ಮುಂದಾದ ವ್ಯಕ್ತಿಯನ್ನು ಬೇತಮಂಗಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಶಾಸಕಿ ಸಮ್ಮುಖದಲ್ಲಿ ತೆರವು ಕಾರ್ಯಾಚರಣೆ ಮುಂದುವರಿದಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಫುಟ್ ಪಾತ್ ಅಂಗಡಿ ಮಾಲೀಕರಿಗೆ ಹರಪನಹಳ್ಳಿ ಪುರಸಭೆ ಶಾಕ್
ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡಚಣೆ ಆಗಿದ್ದ ಫುಟ್ಪಾತ್ ಅಂಗಡಿಗಳನ್ನು ತೆರವು ಮಾಡಲಾಯಿತು. ವಿಜಯನಗರದ ಹರಪನಹಳ್ಳಿ ಪುರಸಭೆ ಸೂಚನೆ ಕೊಟ್ಟಿದ್ದರೂ ವ್ಯಾಪಾರಿಗಳು ನಿರ್ಲಕ್ಷ್ಯ ತೋರಿದ್ದರು. ಪಟ್ಟಣದ ಜೆಸಿಐ ವೃತ್ತ ಹಣ್ಣಿನ ಅಂಗಡಿ ತೆರವಿಗೂ ಸಂಜೆವರೆಗೂ ಡೆಡ್ ಲೈನ್ ಕೊಟ್ಟಿದ್ದಾರೆ.
ಪಾದಚಾರಿ ಮಾರ್ಗ ಒತ್ತುವರಿಯಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗಿತ್ತು. ವಯೋವೃದ್ಧರು, ವಿದ್ಯಾರ್ಥಿಗಳು ಫುಟ್ಪಾತ್ ಬಿಟ್ಟು ರಸ್ತೆ ಬದಿಯಲ್ಲಿ ಓಡಾಡಲು ಶುರು ಮಾಡಿದ್ದರು. ಇದರಿಂದಾಗಿ ಅಪಘಾತಗಳು ಹೆಚ್ಚಾಗುತ್ತಿದ್ದವು. ಜನತಾ ದರ್ಶನ ಸಂದರ್ಭದಲ್ಲೂ ಸಚಿವರಿಗೆ ಸಾರ್ವಜನಿಕರು ದೂರು ನೀಡಿದರು. ಅಧಿಕಾರಿಗಳು ಸೂಚನೆ ಕೊಟ್ಟರು ಸ್ವಯಂಪ್ರೇರಿತವಾಗಿ ತೆರವು ಮಾಡದ ವ್ಯಾಪಾರಸ್ಥರಿಗೆ ಶನಿವಾರ ಪುರಸಭೆ ಅಧಿಕಾರಿಗಳೇ ಶಾಕ್ ಕೊಟ್ಟರು.
ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಪ್ರತಿಕ್ರಿಯಿಸಿ, ಪುರಸಭೆಯಿಂದ ಯಾರಿಗೂ ತೊಂದರೆ ಮಾಡಬೇಕು ಎಂಬ ಉದ್ದೇಶ ಇಲ್ಲ. ಮೊದಲು ಸೂಚನೆ ಕೊಟ್ಟು ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ