Site icon Vistara News

Midday Meal | ಹುಳ ಮಿಶ್ರಿತ ಬಿಸಿಯೂಟ ವಿತರಣೆ; ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡ ಮಕ್ಕಳ ಪೋಷಕರು

Midday Meal

ಕೋಲಾರ: ಕಳಪೆ ಬಿಸಿಯೂಟ ಸೇವನೆಯಿಂದ ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆ ಸೇರುವ ಪ್ರಕರಣಗಳು ರಾಜ್ಯದ ವಿವಿಧೆಡೆ ಕಂಡುಬರುತ್ತಿದೆ. ಈ ನಡುವೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಪೆಗಳಪಲ್ಲಿಯಲ್ಲಿ ಹುಳ ಬಿದ್ದ ಅಕ್ಕಿ ಬಳಸಿ ತಯಾರಿಸಿದ್ದ ಬಿಸಿಯೂಟವನ್ನು(Midday Meal) ಮಕ್ಕಳಿಗೆ ನೀಡಿದ್ದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡರು.

ಮುಖ್ಯ ಶಿಕ್ಷಕಿ ಉಮಾದೇವಿ ಬೇಜವಾಬ್ದಾರಿತನದಿಂದ ಕಳೆದ ಮೂರು ದಿನಗಳಿಂದ ವಿದ್ಯಾರ್ಥಿಗಳಿಗೆ ನಿತ್ಯ ಹುಳ ಮಿಶ್ರಿತ ಆಹಾರ ನೀಡಲಾಗುತ್ತಿದೆ. ಹುಳ ಬಿದ್ದ ಅನ್ನವನ್ನೇ ಮಕ್ಕಳು ಸೇವಿಸುತ್ತಿದ್ದಾರೆ, ಕಳಪೆ ಆಹಾರ ಸೇವಿಸಿ ಮಕ್ಕಳು ಅನಾರೋಗ್ಯಕ್ಕೀಡಾದರೆ ಯಾರು ಹೊಣೆ? ಹೀಗಾಗಿ ಶಿಕ್ಷಣ ಇಲಾಖೆ ಮೇಲಧಿಕಾರಿಗಳು, ಮುಖ್ಯ ಶಿಕ್ಷಕಿ ಹಾಗೂ ಸಿಬ್ಬಂದಿ ಕ್ರಮ ಕೈಗೊಳ್ಳಬೇಕು ಎಂದು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | Yoga Education | ಧ್ಯಾನ ಶಾಲೆ, ಪಿಯುಗಳಿಗೆ ಸೀಮಿತವಲ್ಲ, ಕಾಲೇಜು ಕ್ಯಾಂಪಸ್‌ಗಳಿಗೂ ವಿಸ್ತರಿಸಿ ಯುಜಿಸಿ ಆದೇಶ

ನಾರಾಯಣಸ್ವಾಮಿ ಎಂಬುವವರು ಬಿಸಿಯೂಟಕ್ಕೆ ಅಕ್ಕಿ ಸರಬರಾಜು ಮಾಡುತ್ತಿದ್ದಾರೆ ಎನ್ನಲಾಗಿದೆ. ಅಡುಗೆ ಮನೆ ಪರಿಶೀಲಿಸಿದಾಗ ಅಕ್ಕಿ ಮೂಟೆಗಳಲ್ಲಿ ರಾಶಿ ರಾಶಿ ಹುಳ ಕಂಡುಬಂದಿದ್ದರಿಂದ ಪೋಷಕರು, ಕಳೆದ ಎರಡು ಮೂರು ತಿಂಗಳಿಂದ ಇದೇ ರೀತಿಯಲ್ಲಿ ನಡೆಯುತ್ತಿದೆ. ಮಕ್ಕಳಿಗೆ ನೀಡುವ ಊಟದಲ್ಲಿ ಪರಿಶುದ್ಧತೆ ಪಾಲಿಸುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.

ಬಿಸಿಯೂಟದಲ್ಲಿ ಹುಳಗಳು ಕಂಡುಬಂದಿವೆ ಎಂಬ ಪ್ರಶ್ನೆಗೆ ಮುಖ್ಯಶಿಕ್ಷಕಿ ಉಮಾದೇವಿ ಪ್ರತಿಕ್ರಿಯಿಸಿ, ಅಕ್ಕಿಯಲ್ಲಿ ಹುಳಗಳು ಸಿಕ್ಕಿಲ್ಲ ಎಂದು ನಾವು ಹೇಳುವುದಿಲ್ಲ. ಶಿಕ್ಷಣ ಇಲಾಖೆಯಿಂದ ಪೂರೈಸಿರುವ ಅಕ್ಕಿಯನ್ನು ಬಳಸುತ್ತೇವೆ. ಮುನ್ನೆಚ್ಚರಿಕೆಯಿಂದ ಧಾನ್ಯಗಳನ್ನು ಸ್ವಚ್ಛಗೊಳಿಸಿ, ಬಳಸಲಾಗುತ್ತಿದೆ ಎಂದು ಹೇಳಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಿಸಿಯೂಟಕ್ಕಾಗಿ ಸರ್ಕಾರಿ ಶಾಲೆಗಳಿಗೆ ಹುಳ ಮಿಶ್ರಿತ ಕಳಪೆ ಅಕ್ಕಿ ಪೂರೈಕೆಯಾಗುತ್ತಿದೆ. ಹೀಗಿದ್ದರೂ ಶಿಕ್ಷಣ ಇಲಾಖೆ ಇಲಾಖೆ ಅಧಿಕಾರಿಗಳು ಸಮಸ್ಯೆ ಪರಿಹರಿಸಲು ಗಮನ ಹರಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಮಹತ್ವಾಕಾಂಕ್ಷೆಯ ಅಕ್ಷರ ದಾಸೋಹ ಯೋಜನೆಗೇ ನುಸಿ ಹಿಡಿಯದಂತೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.

ಇದನ್ನೂ ಓದಿ | ಬಸರಾಳು ಸರ್ಕಾರಿ ಶಾಲೆ ಬಿಸಿಯೂಟದಲ್ಲಿ ಹುಳ ಪ್ರಕರಣ; ಮುಖ್ಯ ಶಿಕ್ಷಕ, ನಾಲ್ವರು ಅಡುಗೆ ಸಿಬ್ಬಂದಿ ಅಮಾನತು

Exit mobile version