ಕೋಲಾರ: ಫೋನ್ ಕಾಲ್ ಬಂದಾಗ ಪತಿಯ ಕೈಗೆ ಮೊಬೈಲ್ ಕೊಡಲು ಹೋದ ಮಹಿಳೆಯೊಬ್ಬರು ಟ್ರಾಕ್ಟರ್‌ನ ರೋಟರ್‌ಗೆ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾರೆ. 33 ವರ್ಷದ ಸೌಮ್ಯ ಜೀವ ತೆತ್ತ ಮಹಿಳೆ. ಕೋಲಾರದ ಕಲ್ವಮಂಜಲಿ ಗ್ರಾಮದಲ್ಲಿರುವ ಅವರ ಹೊಲದಲ್ಲಿ ಪತಿ ರಾಜೇಶ್ ಉಳುಮೆ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಟ್ರಾಕ್ಟರ್‌ನ ರೋಟರ್ ಗೆ ಸಿಲುಕಿದ ಸೌಮ್ಯ ಅವರ ದೇಹ ಚೂರುಚೂರಾಗಿದೆ. ದೇಹದ ಭಾಗಗಳನ್ನು ಪ್ರಯಾಸದಿಂದ ಹೊರ ತೆಗೆಯಲಾಗಿದೆ.
ಆಗಿದ್ದೇನು?
ರಾಜೇಶ್ ಟ್ರಾಕ್ಟರ್‌ನ್ನು ಬಾಡಿಗೆ ಪಡೆದುಕೊಂಡಿದ್ದ. ತಮ್ಮ ಹೊಲದಲ್ಲಿ ಟ್ರಾಕ್ಟರ್‌ನ್ನು ಸ್ವತಃ ಚಾಲನೆ ಮಾಡುತ್ತಿದ್ದ.
ಈ ಸಂದರ್ಭದಲ್ಲಿ ಮೊಬೈಲ್ ಕರೆ ಬಂತೆಂದು ಪತಿಗೆ ಮೊಬೈಲ್ ಕೊಡಲು ಸೌಮ್ಯ ಟ್ರ್ಯಾಕ್ಟರ್ ಹತ್ತಿರ ಬಂದರು. ಆಗ ಅವರ ಸೀರೆಯ ಸೆರಗು ಟ್ರಾಕ್ಟರ್ ರೋಟರ್ ಗೆ ಸಿಲುಕಿಕೊಂಡಿತು. ಕ್ಷಣ ಮಾತ್ರದಲ್ಲಿ ಅವರ ಇಡೀ ದೇಹ ರೋಟರ್ ಯಂತ್ರಕ್ಕೆ ಸಿಲುಕಿ ಛಿದ್ರ ಛಿದ್ರವಾಯಿತು.
ವೈದ್ಯರು ಛಿದ್ರಗೊಂಡಿರುವ ದೇಹದ ಭಾಗಗಳನ್ನು ಸ್ಥಳದಲ್ಲೇ ಪರೀಕ್ಷೆ ಮಾಡಿದರು. ಕೋಲಾರ ಗ್ರಾಮಾಂತರ ಪೋಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ ಅಪಘಾತದಲ್ಲಿ ಏಳು ಕನ್ನಡಿಗರ ಸಾವು: ಯೋಗಿ ಆದಿತ್ಯನಾಥ ಜತೆ CM ಬೊಮ್ಮಾಯಿ ಮಾತು