ಗಂಗಾವತಿ: ಅಯೋಧ್ಯೆಯಲ್ಲಿ ಇದೇ ಜ.22ರಂದು ಶ್ರೀರಾಮಮಂದಿರ (Ayodhya Ram Mandir) ಲೋಕಾರ್ಪಣೆಯಾಗುತ್ತಿರುವ ಹಿನ್ನಲೆಯಲ್ಲಿ ಯುವಕನೊಬ್ಬ ಅಂಜನಾದ್ರಿಯಿಂದ (Anjanadri) ಅಯೋಧ್ಯೆವರೆಗೂ ಗೋಡೆಗಳಲ್ಲಿ ಶ್ರೀರಾಮನ ಭಾವಚಿತ್ರ ಬಿಡಿಸುವ ಸಂಕಲ್ಪ ಮಾಡಿದ್ದಾನೆ.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ತಾಳೇವಾಡ ಗ್ರಾಮದ ಬಿ. ಸುರೇಶ ಕೋಟಗೊಂಡ ಎಂಬ ಯುವಕ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಂಜನಾದ್ರಿಯಿಂದ ಅಯೋಧ್ಯೆವರೆಗೂ ಗೋಡೆಗಳಲ್ಲಿ ರಾಮನ ಭಾವಚಿತ್ರ ಬಿಡಿಸುವ ಸಂಕಲ್ಪ ಮಾಡಿದ್ದಾನೆ.
ಇದಕ್ಕಾಗಿ ಶ್ರೀರಾಮನ ಪರಮ ಭಕ್ತ ಹನುಮನ ಜನ್ಮಸ್ಥಳ ಅಂಜನಾದ್ರಿಯಿಂದಲೇ ಆರಂಭಿಸುವ ಉದ್ದೇಶ ಹೊಂದಿದ್ದ ಯುವಕ, ಮಂಗಳವಾರ ಅಂಜನಾದ್ರಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗೋಡೆಗಳಲ್ಲಿ ರಾಮನ ಭಾವಚಿತ್ರ ಬಿಡಿಸುವ ಅಭಿಯಾನ ಶುರು ಮಾಡಿದ್ದಾನೆ.
ಇದನ್ನೂ ಓದಿ: Koppala News: ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಹನುಮಾನ್ ತಾಂಡವ್ ಮಂತ್ರ ಪಠಣ
ಯುವಕನ ಈ ಸಾಹಸ ಮೆಚ್ಚಿ `ಮೋದಿ ಬ್ರಿಗೇಡ್’ನ ಕೊಪ್ಪಳ ಜಿಲ್ಲಾ ಘಟಕದಿಂದ ಯುವಕನಿಗೆ ನೆರವಾಗಲಿ ಎಂಬ ಕಾರಣಕ್ಕೆ ಉಚಿತವಾಗಿ ಸೈಕಲ್ ಕೊಡುಗೆಯಾಗಿ ನೀಡಲಾಗಿದೆ.
ಈ ಬಗ್ಗೆ ಮಾತನಾಡಿದ ಯುವಕ ಸುರೇಶ, ದೇಶದ ಇತಿಹಾಸದಲ್ಲಿ ರಾಮಮಂದಿರ ಲೊಕಾರ್ಪಣೆ ಸುವರ್ಣಾಕ್ಷರಗಳಿಂದ ಬರೆದಿಡಲಾಗುತ್ತಿದೆ. ಇಂತಹ ಐತಿಹಾಸಿಕ ಘಟನೆಗೆ ನನ್ನದೂ ಒಂದು ಅಳಿಲು ಸೇವೆ ಇರಲಿ ಎಂಬ ಕಾರಣಕ್ಕೆ ನಾಡಿನಾದ್ಯಂತ ಪ್ರಭು ಶ್ರೀರಾಮಚಂದ್ರನ ಚಿತ್ರ ಬಿಡಿಸುವ ಗುರಿ ಇರಿಸಿಕೊಂಡಿದ್ದೇನೆ.
ಮುಖ್ಯವಾಗಿ ಶ್ರೀರಾಮನ ಪರಮ ಭಕ್ತ ಹನುಮನ ಜನ್ಮಸ್ಥಳದಿಂದಲೇ ಈ ಕಾರ್ಯ ಮಾಡಬೇಕು ಎಂಬ ಉದ್ದೇಶದಿಂದ ಇಲ್ಲಿಗೆ ಬಂದು ಪೂಜೆ ಸಲ್ಲಿಸಿ, ಚಿತ್ರ ಬಿಡಿಸುವ ಕಾರ್ಯ ಹಮ್ಮಿಕೊಂಡಿದ್ದೇನೆ. ಕಿಷ್ಕಿಂಧೆಯಿಂದ ಅಯೋಧ್ಯೆವರೆಗೂ ಎದುರಾಗುವ ಗೋಡೆಗಳಿಗೆ ಶ್ರೀರಾಮಚಂದ್ರನ ಚಿತ್ರ ಬರೆಯುತ್ತೇನೆ.
ಇದನ್ನೂ ಓದಿ: BMTC Bus: ಮದುವೆ, ಟೂರ್‌ಗೆ ಸಿಗಲಿದೆ ಬಿಎಂಟಿಸಿ ಬಸ್; ಯಾವ ಬಸ್‌ಗೆ ಎಷ್ಟು ಬಾಡಿಗೆ?
ದಿನಕ್ಕೆ 50 ರಿಂದ 70 ಕಿಲೋ ಮೀಟರ್ ಸಂಚರಿಸುವ ಗುರಿ ಇರಿಸಿಕೊಂಡಿದ್ದೇನೆ. ಪ್ರತಿ ಗ್ರಾಮದಲ್ಲಿ ಕನಿಷ್ಟ ಎರಡರಿಂದ ನಾಲ್ಕು ಕಡೆಯಾದರೂ ಗೋಡೆಗಳಲ್ಲಿ ಶ್ರೀರಾಮನ ಭಾವಚಿತ್ರ ಮೂಡಿಸುವ ಉದ್ದೇಶವಿದೆ. ಊಟ, ವಸತಿ, ಬಣ್ಣಕ್ಕೆ ದಾನಿಗಳು ನೆರವು ನೀಡುವರು ಎಂದು ತಿಳಿಸಿದ್ದಾರೆ.