ಗಂಗಾವತಿ: ಗ್ಯಾರಂಟಿ ಕೊಡ್ತೀವಿ ಅಂದವರು ನಾವು, ಜನರಿಗೆ ಹೇಳಿದವರು ನಾವು. ಕೊಡ್ತೀವಿ ಎನ್ನುವ ವಿಶ್ವಾಸದ ಮೇಲೆ ಜನ ನಮಗೆ ಮತ ಹಾಕಿ ಗೆಲ್ಲಿಸಿದ್ದಾರೆ. ನಾವು ಕೊಡುವ ಗ್ಯಾರಂಟಿಗಳ (Guarantee scheme) ಬಗ್ಗೆ ಬಿಜೆಪಿಯವರಿಗೆ (BJP) ಆತಂಕವಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ಸಚಿವರಾದ ಬಳಿಕ ಪ್ರಥಮ ಬಾರಿಗೆ ಗಂಗಾವತಿ ನಗರಕ್ಕೆ ಆಗಮಿಸಿ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ನಿವಾಸದಲ್ಲಿ ಸನ್ಮಾನಿತಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಗ್ಯಾರಂಟಿ ಯೋಜನೆ ಬಗ್ಗೆ ಬಿಜೆಪಿಗೆ ಆತಂಕ ಶುರುವಾಗಿದೆ. ಜೆಡಿಎಸ್ ವಿಳಾಸ ಇಲ್ಲದಂತಾಗಿದೆ. ಈ ಐದು ಯೋಜನೆ ಜಾರಿಯಾದರೆ ಲೋಕಸಭೆ ಚುನಾವಣೆಯಲ್ಲಿ ಗಾಳಿಗೆ ಹಾರಿ ಹೋಗುತ್ತೇವೆ ಎಂಬ ಆತಂಕ ಬಿಜೆಪಿಗರಿಗೆ ಈಗಿನಿಂದಲೇ ಶುರುವಾಗಿದೆ ಎಂದರು.
ಇದನ್ನೂ ಓದಿ: Gold price today : ಚಿನ್ನದ ದರದಲ್ಲಿ ಅಲ್ಪ ಇಳಿಕೆ, ಬೆಳ್ಳಿ 400 ರೂ. ಹೆಚ್ಚಳ
ಈ ಹಿಂದೆ ಲೋಕಸಭೆಯಲ್ಲಿ ಮೋದಿ ಭಾಷಣ ಮಾಡಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುತ್ತೇನೆ ಎಂದಿದ್ದರು. ಇದುವರೆಗೂ ಈಡೇರಿಸಿಲ್ಲ. ಈ ಬಗ್ಗೆ ಬಿಜೆಪಿಯ ಯಾವೊಬ್ಬ ನಾಯಕರು ಮಾತನಾಡುತ್ತಿಲ್ಲ ಎಂದರು.
ಮಗು ಹುಟ್ಟಿದ ಮೇಲೆ ತಕ್ಷಣಕ್ಕೆ ಓಡಾಡಲು ಆಗದು. ಅದೇ ರೀತಿ ಸರ್ಕಾರ ಅಸ್ತಿತ್ವಕ್ಕೆ ಬಂದು ಕೇವಲ 17 ದಿನವಾಗಿದೆ. ಯೋಜನೆ ಜಾರಿಗೆ ಸ್ವಲ್ಪ ವಿಳಂಬವಾಗುತ್ತದೆ. ಜೂನ್ ತಿಂಗಳಲ್ಲಿ ಅನುಷ್ಠಾನಕ್ಕೆ ತರುತ್ತೇವೆ ಎಂದಿದ್ದೇವೆ. ಖಚಿತವಾಗಿ ತರುತ್ತೇವೆ ಎಂದರು.
ನಮ್ಮ ಪಕ್ಷ ನೀಡಿದ ಭರವಸೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿಯ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರದು. ಸ್ವತಃ ಸಿಎಂ ಹಣಕಾಸು ಖಾತೆ ತಮ್ಮ ಬಳಿ ಇರಿಸಿಕೊಂಡಿದ್ದರಿಂದ ಸಮರ್ಪಕವಾಗಿ ನಿಭಾಯಿಸಿ ಆರ್ಥಿಕ ಸಂಪನ್ಮೂಲ ಸರಿದೂಗಿಸುವ ಮತ್ತು ಕ್ರೂಢೀಕರಣ ಮಾಡುತ್ತಾರೆ ಎಂದು ತಂಗಡಗಿ ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೆ ಖಾತೆಗಳ ಹಂಚಿಕೆ ಯಾವುದೇ ವಿವಾದ ಇಲ್ಲದೇ ಮುಗಿದು ಹೋಗಿದೆ. ಖಾತೆ ಹಂಚಿಕೆಗೂ ಮುನ್ನ ಸಿಎಂ, ಕೆಪಿಸಿಸಿ ಅಧ್ಯಕ್ಷ, ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅವರು ಪರಸ್ಪರ ಕುಳಿತು ಚರ್ಚಿಸಿ ಖಾತೆ ಹಂಚಿಕೆ ಮಾಡಿದ್ದಾರೆ. ಹೀಗಾಗಿ ಖಾತೆಯ ಬಗ್ಗೆ ಯಾರಿಗೂ ಯಾವುದೇ ಖ್ಯಾತೆ ಇಲ್ಲ ಎಂದರು.
ಇನ್ನು ಜಿಲ್ಲಾ ಉಸ್ತುವಾರಿಯ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳುವುದಿಲ್ಲ. ಯಾವುದೇ ಜಿಲ್ಲೆ ನೀಡಿದರೂ ಉತ್ತಮ ಕೆಲಸ ಮಾಡುತ್ತೇವೆ. ನನಗೆ ನೀಡಿದ ಖಾತೆಯ ಬಗ್ಗೆ ತೃಪ್ತಿ ಇದೆ. ಯಾವುದೇ ಖಾತೆ ನೀಡಿದರೂ ನಿಭಾಯಿಸುತ್ತೇನೆ. ಪಕ್ಷದ ಶಿಸ್ತಿನ ಸಿಫಾಯಿ ಆಗಿ ಪಕ್ಷ ನೀಡುವ ಯಾವುದೇ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: Rain News: ರಾಜ್ಯದ ಹಲವೆಡೆ ಬಿರುಗಾಳಿ ಸಹಿತ ಭಾರಿ ಮಳೆ; ಜನರು ತತ್ತರ, ಸಿಡಿಲಿಗೆ ಆರು ಕುರಿ ಬಲಿ
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.