ಗಂಗಾವತಿ: ಗ್ರಾಮೀಣ ಭಾಗದಲ್ಲಿ ನದಿಗಳ (Rivers) ಶ್ರೇಷ್ಠತೆ ಮತ್ತು ಮೌಲ್ಯವನ್ನು ಎತ್ತಿ ಹಿಡಿಯುವ ಕಾರ್ಯಕ್ಕೆ ಚಿಕ್ಕಡಂಕನಕಲ್ ಗ್ರಾಮ ಪಂಚಾಯಿತಿ (Chikkadankanakal grama panchayat) ಮುಂದಾಗಿದ್ದು, ಗ್ರಾಮದಲ್ಲಿ ನವೀಕೃತಗೊಂಡ ರಸ್ತೆಗಳಿಗೆ (Roads) ನದಿಗಳ ಹೆಸರಿಡುವ ಮೂಲಕ ಇತರೆ ಗ್ರಾ.ಪಂ.ಗಳಿಗೆ ಮಾದರಿಯಾಗಿದೆ.
ಹೌದು, ಸಾಮಾನ್ಯವಾಗಿ ಯಾವುದಾದರೂ ಅಭಿವೃದ್ಧಿ ಕಾರ್ಯಗಳಿಗೆ, ನಗರ, ಗ್ರಾಮ, ಪಟ್ಟಣಗಳ ರಸ್ತೆ, ವೃತ್ತಗಳಿಗೆ ಸ್ವಾತಂತ್ರ್ಯ ಹೋರಾಟಗಾರರು, ರಾಜಕೀಯ ನಾಯಕರು, ಸಿನಿಮಾ ನಟರ ಹೆಸರು ಇಡುವುದು ಸಾಮಾನ್ಯ, ಆದರೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಚಿಕ್ಕಡಂಕನಕಲ್ ಗ್ರಾಮದಲ್ಲಿನ ರಸ್ತೆಗಳಿಗೆ ನದಿಗಳ ಹೆಸರಿಡುವ ಮೂಲಕ ಜಿಲ್ಲೆಯ ಗಮನ ಸೆಳೆದಿದೆ.
ಗ್ರಾಮದಲ್ಲಿ ನವೀಕೃತಗೊಂಡ ರಸ್ತೆಗಳಿಗೆ ದೇಶದ ಹಾಗೂ ನಾಡಿನ ಸರ್ವ ಶ್ರೇಷ್ಠ ನದಿಗಳ ಹೆಸರು ಇಡಲಾಗಿದ್ದು, ಈ ಮೂಲಕ ಗ್ರಾಮೀಣ ಭಾಗದ ಜನರಲ್ಲಿ ನದಿಗಳ ಶ್ರೇಷ್ಠತೆ ಮತ್ತು ಮೌಲ್ಯವನ್ನು ಎತ್ತಿ ಹಿಡಿಯುವ ಕಾರ್ಯವನ್ನು ಚಿಕ್ಕಡಂಕನಕಲ್ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ ಮಾಡಿದೆ.
ಇದನ್ನೂ ಓದಿ: UPI Payment: ಇಂದಿನಿಂದ UPIಗೆ ಹೊಸ ನಿಯಮ; ಏನೇನು ಬದಲಾವಣೆ ನೋಡಿ
ಪಂಚಾಯಿತಿಯ ಸ್ವಂತ ಅನುದಾನದಲ್ಲಿ ಗ್ರಾಮದ ಪ್ರಮುಖ 10 ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗಿದ್ದು, ಈ ರಸ್ತೆಗಳಿಗೆ ಹೇಮಾವತಿ, ತುಂಗಾಭದ್ರ, ಕೃಷ್ಣಾ, ವೇದಾವತಿ, ಗೋದಾವರಿ, ನೇತ್ರಾವತಿ, ಪಂಚಗಂಗಾ, ಶರಾವತಿ, ಕಪಿಲ, ಕಾವೇರಿ ನದಿಗಳ ಹೆಸರುಗಳನ್ನು ಇಡಲಾಗಿದೆ.
ಈ ಮೂಲಕ ಗ್ರಾಮದ ಜನರಿಗೆ ಮುಖ್ಯವಾಗಿ ನದಿಗಳ ಹೆಸರುಗಳನ್ನು ಪರಿಚಯಿಸುವುದಷ್ಟೇ ಅಲ್ಲದೇ, ನದಿಗಳ ಪ್ರಾಮುಖ್ಯತೆಯನ್ನು ತಿಳಿಸಲಾಗಿದೆ.
ಸಚಿವ ಶಿವರಾಜ ತಂಗಡಗಿ ಪ್ರೇರಣೆ
ಗ್ರಾಮದ ರಸ್ತೆಗಳಿಗೆ ನದಿಗಳ ಹೆಸರಿಡಲು ಪ್ರೇರಣೆ ಎಂದರೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ. ಗಂಗಾವತಿಯ ಮಂಥನ ಸಭಾಂಗಣದಲ್ಲಿ ಈಚೆಗೆ ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕಿನ ಪಂಚಾಯಿತಿಗಳ ಪಿಡಿಒಗಳ ಸಭೆ ನಡೆಸಿದ್ದರು.
ಇದನ್ನೂ ಓದಿ: Jaipur Foot Camp: ಬೆಂಗಳೂರಲ್ಲಿ ಜ.3ರಿಂದ 9ರವರೆಗೆ ಉಚಿತ ಕೃತಕ ಕಾಲು ಹಾಗೂ ಮುಂಗೈ ಜೋಡಣಾ ಶಿಬಿರ
ಜನರ ಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಗದು. ಸಿಕ್ಕ ಸಂದರ್ಭವನ್ನು ಸದುಪಯೋಗ ಮಾಡಿಕೊಂಡು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸುವ ಕೆಲಸ ಮಾಡಬೇಕು. ಇದಕ್ಕಾಗಿ ಎಲ್ಲಾ ಪಿಡಿಒಗಳು ಸ್ವಲ್ಪ ವಿಭಿನ್ನವಾಗಿ ಆಲೋಚನೆ ಮಾಡುವ ಮತ್ತು ಜನ ಸೇವೆ ಮಾಡುವ ಕೆಲಸ ಮಾಡಬೇಕು ಎಂದು ಸಚಿವರು ಸಲಹೆ ನೀಡಿದ್ದರು.
ಕ್ಷೇತ್ರದಲ್ಲಿ ಮಾದರಿ ಗ್ರಾಮಗಳನ್ನಾಗಿ ಮಾಡುವ ನಿಟ್ಟಿನಲ್ಲಿ ರಸ್ತೆ, ವೃತ್ತಗಳಿಗೆ ಕವಿಗಳ, ದಾರ್ಶನಿಕರ ಹಾಗೂ ನದಿಗಳ ಹೆಸರು ಇಟ್ಟು ಆ ಮೂಲಕ ಗೌರವ ಸಲ್ಲಿಸಲು ಮುಂದಾಗಬೇಕು ಎಂದು ಸಚಿವರು ಕರೆ ನೀಡಿದ್ದರು. ಚಿಕ್ಕಡಂಕನಕಲ್ ಗ್ರಾಮ ಪಂಚಾಯಿತಿ ಪಿಡಿಒ, ಸಚಿವರ ಆಶಯವನ್ನು ಕಾರ್ಯರೂಪಕ್ಕೆ ತರುವ ಮೂಲಕ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: IPL 2024 : ಲಕ್ನೊ ತಂಡದೊಳಗೆ ಭರ್ಜರಿ ಸರ್ಜರಿ, ತಂಡದಿಂದ ಮತ್ತೊಬ್ಬರ ನಿರ್ಗಮನ
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಸಲಹೆ ಮೆರೆಗೆ ಗ್ರಾಮದ ಪ್ರಮುಖ 10 ರಸ್ತೆಗಳಿಗೆ ನದಿಗಳ ಹೆಸರುಗಳುಳ್ಳ ನಾಮಫಲಕವನ್ನು ಅಳವಡಿಸಿದ್ದೇವೆ. ಇದರಿಂದ ಗ್ರಾಮಸ್ಥರು ಕೂಡ ಖುಷಿಯಾಗಿದ್ದಾರೆ.
-ಹನುಮಂತಪ್ಪ, ಚಿಕ್ಕಡಂಕನಕಲ್ ಪಿಡಿಒ.