ಕೊಪ್ಪಳ: ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು (Continuous rain), ಮಳೆ ಅನಾಹುತಗಳು ಸಂಭವಿಸುವ ಮುನ್ನವೇ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ (Precautionary measures) ವಹಿಸಬೇಕು. ಒಂದು ವಾರ ಯಾವುದೇ ಅಧಿಕಾರಿಗಳಿಗೆ ಜಿಲ್ಲೆಯಲ್ಲಿ ರಜೆ ನೀಡದಂತೆ ಜಿಲ್ಲಾಧಿಕಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಸೂಚನೆ ನೀಡಿದ್ದಾರೆ.
ಜಿಲ್ಲೆಯ ವಿವಿಧೆಡೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಸಚಿವರು ಸೂಚನೆ ನೀಡಿದರು.
ಇನ್ನೂ ಮೂರ್ನಾಲ್ಕು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಅಧಿಕಾರಿಗಳು ಜಾಗ್ರತೆಯಿಂದ ಕೆಲಸ ನಿರ್ವಹಿಸಬೇಕು. ಈ ಹಿನ್ನೆಲೆಯಲ್ಲಿ ತಹಸೀಲ್ದಾರ್, ಪಟ್ಟಣ ಪಂಚಾಯಿತಿ, ನಗರಸಭೆ ಅಧಿಕಾರಿಗಳು ರಜೆ ತೆಗೆದುಕೊಳ್ಳಬಾರದು. ತೀರಾ ತುರ್ತು ಇದ್ದಂತಹ ಅಧಿಕಾರಿಗಳಿಗೆ ರಜೆ ನೀಡುವಂತೆ ನಿರ್ದೇಶನ ನೀಡಿದರು.
ಇದನ್ನೂ ಓದಿ: IND vs WI 1st ODI: ಭಾರತಕ್ಕೆ ಸಡ್ಡು ಹೊಡೆದೀತೆ ವಿಂಡೀಸ್?
ಮಳೆ ಸಂಬಂಧ ಯಾವುದೇ ಅನಾಹುತ ಸಂಭವಿಸಿದೆ ಎಂದು ತಿಳಿದ ಕೂಡಲೇ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ತಿಳಿಸಿದರು.
ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ, ಶಾಸಕರ ಅಧ್ಯಕ್ಷತೆಯ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಚರ್ಚಿಸಿ ನಿಯಮಾನುಸಾರ ಕ್ರಮ ವಹಿಸುವಂತೆ ಹೇಳಿದರು.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಹೀಗಾಗಿ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಿಯಮಾನುಸಾರ ಪರಿಹಾರ ಕೊಡುವ ಕಾರ್ಯ ಆಗಬೇಕು. ಯಾವುದೇ ಅನಾಹುತ ಸಂಭವಿಸಿದರೂ ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು ಎಂದು ನಿರ್ದೇಶನ ನೀಡಿದರು.
ಇದನ್ನೂ ಓದಿ: ತೀರ್ಥಹಳ್ಳಿಯಲ್ಲಿ ಜಿಂಕೆ ಶಿಕಾರಿ ಮಾಡಿದ ಇಬ್ಬರ ಬಂಧನ, ಮತ್ತೊಬ್ಬ ಪರಾರಿ
ಸಮನ್ವಯತೆ ಇರಲಿ
ತಹಸೀಲ್ದಾರರು, ತಾಪಂ ಇಒಗಳು, ನಗರಸಭೆ, ಪುರಸಭೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ವಿವಿಧೆಡೆಗಳಲ್ಲಿ ನಿರಂತರ ಸಂಚಾರ ಕೈಗೊಂಡು ಹಾನಿಯ ಬಗ್ಗೆ ಪರಿಶೀಲಿಸಬೇಕು. ಈಗಾಗಲೇ ತಾಲೂಕುವಾರು ನೇಮಿಸಿರುವ ನೋಡಲ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕು ಎಂದರು.
ನಿರಂತರ ಮಳೆಯಿಂದಾಗಿ ಶಾಲಾ ಕೊಠಡಿಗಳು ಸೋರುತ್ತಿದ್ದಲ್ಲಿ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಅಂತಹ ಕಟ್ಟಡಗಳನ್ನು ಗುರುತಿಸಿ ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಎದುರಾದ ಕಡೆಗಳಲ್ಲಿ ಹೊಸ ಬೋರವೆಲ್ ಕೊರೆಯಿಸಿ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಲು ಸೂಚಿಸಿದರು.
ಸಂತ್ರಸ್ತರಿಗೆ ಪರಿಹಾರ
ಜಿಲ್ಲೆಯಲ್ಲಿ ಪೂರ್ವ ಮುಂಗಾರು ಸೇರಿದಂತೆ ಇದುವರೆಗೆ ಏಳು ಜನ ಸಾವು ಸಂಭವಿಸಿದ್ದು, ಈ ಪ್ರಕರಣಗಳಲ್ಲಿ 35 ಲಕ್ಷ ರೂ.ಪರಿಹಾರ ನೀಡಲಾಗಿದೆ. ಜಾನುವಾರು ಜೀವಹಾನಿಯ 41 ಪ್ರಕರಣಗಳಿಗೆ ಸಹ ಪರಿಹಾರ ನೀಡಲಾಗಿದೆ. ಅದೇ ರೀತಿ 80 ಮನೆ ಹಾನಿ ಪ್ರಕರಣಗಳಿಗೆ ಸಹ ಪರಿಹಾರ ನೀಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ, ಸಚಿವರಿಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಜೂನ್ ನಿಂದ ಇಲ್ಲಿಯವರೆಗೆ ವಾಡಿಕೆಗಿಂತ ಶೇ.03ರಷ್ಟು ಕಡಿಮೆ ಮಳೆಯಾಗಿದೆ. ಒಟ್ಟು 3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬಿತ್ತನೆ ಗುರಿಯ ಪೈಕಿ ಇದುವರೆಗೆ ಶೇ.64ರಷ್ಟು ಬಿತ್ತನೆ ಆಗಿದೆ. ಶೇ.20ರಷ್ಟು ಭತ್ತ ಬಿತ್ತನೆ, ಶೇ.10ರಷ್ಟು ಮೆಕ್ಕೆಜೋಳ ಮತ್ತು ಶೇ.6ರಷ್ಟು ಇನ್ನಿತರ ಬೆಳೆಗಳ ಬಿತ್ತನೆಯಾಗಬೇಕಿದೆ. ಜಿಲ್ಲೆಯಲ್ಲಿ ಇಲ್ಲಿವರೆಗೆ 9,707 .61 ಬಿತ್ತನೆ ಬೀಜ ದಾಸ್ತಾನು ಸ್ವೀಕೃತಿ ಪೈಕಿ 7,449.89 ಕ್ವಿಂಟಲ್ ಬೀಜ ಮಾರಾಟವಾಗಿದೆ. 2257.72 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಇದ್ದು ಬಿತ್ತನೆ ಬೀಜಕ್ಕೆ ಕೊರತೆಯಿಲ್ಲ.
ಇದನ್ನೂ ಓದಿ: Shahrukh Khan: ಭಾರಿ ವೆಚ್ಚದಲ್ಲಿ ನಿರ್ಮಾಣವಾಗಿದೆಯಂತೆ ʻಜವಾನ್ʼ ಹಾಡು; ರಿಲೀಸ್ ಯಾವಾಗ?
ಏಪ್ರಿಲ್‌ನಿಂದ ಸೆಪ್ಟೆಂಬರ್ ವರೆಗೆ ಕೊಪ್ಪಳ ಜಿಲ್ಲೆಗೆ ಯೂರಿಯಾ, ಡಿಎಪಿ, ಎಂಓಪಿ, ಎನ್ ಕೆ ಪಿಎಸ್, ಎಸ್ ಎಸ್ ಪಿ ಸೇರಿ ಒಟ್ಟು 92,666 ಮೆ.ಟನ್ ರಸಗೊಬ್ಬರ ಹಂಚಿಕೆಯಾಗಿದೆ. ಈ ಪೈಕಿ ಜುಲೈ 25ರವರೆಗೆ 70.917 ಮೆ.ಟನ್ ದಾಸ್ತಾನು ಇದೆ. ಸೆಪ್ಟೆಂಬರ್‌ವರೆಗೆ ರಸಗೊಬ್ಬರಕ್ಕೆ ಕೊರತೆಯಾಗುವುದಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಶಾಸಕರಾದ ರಾಘವೇಂದ್ರ ಹಿಟ್ನಾಳ್, ದೊಡ್ಡನಗೌಡ ಪಾಟೀಲ್, ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ರತ್ನಂ ಪಾಂಡೆಯ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.