ಗಂಗಾವತಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರಕ್ಕೆ ಬರುತ್ತಿದ್ದಂತೆಯೇ ಹಿಂದುಗಳನ್ನು ಮತ್ತು ಹಿಂದುತ್ವವನ್ನು ಹತ್ತಿಕ್ಕುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ಮಾಜಿ ಸಚಿವ, ಬಿಜೆಪಿಯ ಹಿರಿಯ ಮುಖಂಡ ಸಿ.ಟಿ. ರವಿ ಆರೋಪಿಸಿದರು.
ತಾಲೂಕಿನ ಚಿಕ್ಕರಾಂಪುರದಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ಅವರು ಪತ್ನಿ ಸಮೇತ ಆಗಮಿಸಿ, ಆಂಜನೇಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿ, ಸಿದ್ದರಾಮಯ್ಯ ಹಿಂದುತ್ವ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಹಿಂದುಗಳನ್ನು ಹತ್ತಿಕ್ಕುವ ಕೆಲಸವೇ ಕಾಂಗ್ರೆಸ್ ಪಕ್ಷದ ಮುಖ್ಯ ಅಜೆಂಡವಾಗಿದೆ. ಕರ್ನಾಟಕದಲ್ಲಿ ಮತೀಯ ಸಾಮರಸ್ಯ ಕದಡುವ ಕೆಲಸಕ್ಕೆ ಕಾಂಗ್ರೆಸ್ ಸರ್ಕಾರ ಕೈ ಹಾಕಿದೆ ಎಂದು ಆರೋಪಿಸಿದರು.
ಇದರ ಭಾಗವಾಗಿ ಹುಬ್ಬಳ್ಳಿಯಲ್ಲಿ ಕರಸೇವಕ ಶ್ರೀಕಾಂತ್ ಪೂಜಾರಿ ಅವರನ್ನು ಬಂಧಿಸಲಾಗಿದೆ. ಕೂಡಲೆ ಅವರನ್ನು ಬಂಧನದಿಂದ ಮುಕ್ತಗೊಳಿಸಬೇಕು. ಇಲ್ಲವಾದಲ್ಲಿ ಬಿಜೆಪಿ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: Job Alert: ಆಯಿಲ್ ಇಂಡಿಯಾ ಕಂಪನಿಯಲ್ಲಿ 421 ಹುದ್ದೆ ಭರ್ತಿ, 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ
ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಶೂನ್ಯವಾಗಿದೆ. ಕಾಂಗ್ರೆಸ್‌ನ ಯಾವೊಬ್ಬ ನಾಯಕರಿಗೂ ರಾಮಮಂದಿರ ಬೇಕಿಲ್ಲ. ಮಂದಿರ ಉದ್ಘಾಟನೆಗೆ ಆಹ್ವಾನ ಬಂದಿಲ್ಲ ಎಂದು ಕಾಂಗ್ರೆಸ್ ನಾಯಕರು ರಾಜಕೀಯ ಮಾಡುತ್ತಿದ್ದಾರೆ.
ನನಗೆ ಗೊತ್ತಿರುವ ಮಟ್ಟಿಗೆ ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಎಲ್ಲಾ ರಾಜ್ಯದ ಸಿಎಂಗಳಿಗೆ ಆಹ್ವಾನ ನೀಡಲಾಗಿದೆ. ಆದರೆ ನನಗೆ ಆಹ್ವಾನ ಬಂದಿಲ್ಲ ಎನ್ನುವ ಮೂಲಕ ಸಿದ್ದರಾಮಯ್ಯ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಪಕ್ಷದ ಅಗ್ರ ನಾಯಕಿ ಸೋನಿಯಾ ಗಾಂಧಿ ಅವರಿಗೆ ಆಹ್ವಾನ ಇದ್ದರೆ ಪಕ್ಷದ ಎಲ್ಲರಿಗೂ ಆಹ್ವಾನ ನೀಡಿದಂತಲ್ಲವೆ ಎಂದು ಪ್ರಶ್ನಿಸಿದರು.
ನಾವು ಹಿಂದುಗಳಾಗಿದ್ದು, ಮಂದಿರ ನಿರ್ಮಾಣಕ್ಕೆ ಹತ್ತು ಲಕ್ಷ ದೇಣಿಗೆ ಕೊಟ್ಟಿದ್ದೇನೆ ಎಂಬ ಲಕ್ಷ್ಮಣ ಸವದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, ದಾನ-ಧರ್ಮದ ಕಾರ್ಯಕ್ಕೆ ನೀಡಿದ್ದು ಬಲಗೈಯಿಂದ ಕೊಟ್ಟಿದ್ದು, ಎಡಗೈಗೆ ಗೊತ್ತಾಗಬಾರದು.
ಆದರೆ ಇದನ್ನೂ ಕಾಂಗ್ರೆಸ್ ನಾಯಕರು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಯಾವೊಬ್ಬ ಕಾರ್ಯಕರ್ತನೂ ಕರಸೇವಕರಾಗಿ ಕೆಲಸ ಮಾಡಿಲ್ಲ. ಇವರದ್ದೆಲ್ಲಾ ಡೋಂಗಿ ರಾಜಕೀಯ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಮ್ಮ ಬಾಯಲ್ಲಿ ಹಿಂದುತ್ವ ಹಾಗೂ, ಹನುಮನ ಭಕ್ತ ಎಂದು ಹೇಳಿಕೊಳ್ಳುತ್ತಾರೆ. ಆದರೆ ಇವರೊಬ್ಬ ಡೋಂಗಿ ರಾಜಕಾರಣಿ ಎಂದು ಆರೋಪಿಸಿ, ಗೇಲಿ ಮಾಡಿದರು.
ಇದನ್ನೂ ಓದಿ: Stock Investment : ಷೇರು ಹೂಡಿಕೆದಾರರು ಉತ್ತಮ ಭವಿಷ್ಯದ ಇಂಡಸ್ಟ್ರಿಗಳನ್ನು ಗುರುತಿಸುವುದು ಹೇಗೆ?
ಕಾಂಗ್ರೆಸ್ಸಿನ ಯಾವೊಬ್ಬರು ಕರಸೇವಕರಾಗಿಲ್ಲ. ಹಾಗೊಂದು ವೇಳೆ ಕಾಂಗ್ರೆಸ್ ಪಕ್ಷದಲ್ಲಿ ಹಿಂದುತ್ವ ನಿಲುವಿರುವ ವ್ಯಕ್ತಿಗಳಿದ್ದರೆ ಜ.22ರ ಬಳಿಕ ನಾವು ಅಯೋಧ್ಯೆಗೆ ಹೋಗುತ್ತಿದ್ದು, ಆಗ ಇವರು ನಮ್ಮೊಂದಿಗೆ ಬರಲಿ ಎಂದು ಮಾಜಿ ಸಚಿವ ಸಿ.ಟಿ. ರವಿ ತಿಳಿಸಿದರು.