Site icon Vistara News

Koppala News: ಸಂತ್ರಸ್ತರಿಗೆ ಮನೆ ದೊರಕಿಸಿಕೊಡುವ ಜವಾಬ್ದಾರಿ ನನ್ನದು: ಶಾಸಕ ಜಿ. ಜನಾರ್ದನ ರೆಡ್ಡಿ ಭರವಸೆ

MLA G Janardana Reddy visit Benchikutri village at Gangavathi

ಗಂಗಾವತಿ: ತಾಲೂಕಿನ ಸಣಾಪುರ (Sanapura) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತುಂಗಭದ್ರಾ (Tungabhadra) ನಡುಗಡ್ಡೆಯಿಂದ ಸ್ಥಳಾಂತರ ಮಾಡಿರುವ ಸಂತ್ರಸ್ತರೆಲ್ಲರಿಗೂ (Victims) ಮನೆ ದೊರಕಿಸಿಕೊಡುವ ಜವಾಬ್ದಾರಿ ನನ್ನದು ಎಂದು ಶಾಸಕ ಜಿ. ಜನಾರ್ದನ ರೆಡ್ಡಿ ಭರವಸೆ ನೀಡಿದ್ದಾರೆ.

ತಾಲೂಕಿನ ಸಣಾಪುರ ಪಂಚಾಯಿತಿಯ ವಿರುಪಾಪುರ ಗಡ್ಡೆಯ ಬೆಂಚಿಕುಟ್ರಿಯಲ್ಲಿ ಸ್ಥಳಾಂತರ ಮಾಡಿದ್ದ ಬಹುತೇಕ ಕುಟುಂಬಗಳಿಗೆ ಸರಿಯಾದ ಅಗತ್ಯ ಸೌಲಭ್ಯಗಳು ಸಿಗದೇ ಪರದಾಡುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಶಾಸಕ ಜನಾರ್ದನ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯರಿಂದ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು.

ತುಂಗಭದ್ರಾ ನದಿಯಲ್ಲಿ ಪ್ರವಾಹ ಉಂಟಾದಾಗ ನಾವು ನಡುಗಡ್ಡೆಯಲ್ಲಿ ಬಂಧಿಯಾಗುತ್ತಿದ್ದೆವು. ನಡುಗಡ್ಡೆ ಸಂಪೂರ್ಣ ಸಂಪರ್ಕ ಕಳೆದುಕೊಳ್ಳುತಿತ್ತು. ಎರಡು ಮೂರು ದಿನ ಊಟ, ನೀರಿನ ಸಮಸ್ಯೆ ಆಗುತ್ತಿತ್ತು.

ಇದನ್ನೂ ಓದಿ: Stock Market : ಮೊಟ್ಟ ಮೊದಲ ಬಾರಿಗೆ ಸೆನ್ಸೆಕ್ಸ್‌ 64,000, ನಿಫ್ಟಿ 19,000ಕ್ಕೆ ಜಿಗಿತ

ಆದರೆ ನದಿಯಲ್ಲಿ ನೀರಿನ ಪ್ರವಾಹ ಕಡಿಮೆಯಾಗುತ್ತಿದ್ದಂತೆಯೆ ನಮ್ಮ ಜೀವನ ಸಹಜ ಸ್ಥಿತಿಗೆ ಬರುತ್ತಿತ್ತು. ಆದರೆ ಅಧಿಕಾರಿಗಳು ನಮ್ಮನ್ನು ಅಲ್ಲಿಂದ ಇಲ್ಲಿಗೆ ಸ್ಥಳಾಂತರ ಮಾಡಿದ್ದಾರೆ. ಆಗಿನ ನಡುಗಡ್ಡೆಗಿಂತಲೂ ಈಗಿನ ನಮ್ಮ ಜೀವನ ಕಷ್ಟದಾಯಕವಾಗಿದೆ ಎಂದು ಮಹಿಳೆಯರು ಅಳಲು ತೋಡಿಕೊಂಡರು.

ಸ್ಥಳಾಂತರ ಮಾಡಿದ ಬಳಿಕ ಕೆಲವರಿಗೆ ನಿವೇಶನ ಕೊಟ್ಟು, ಸರ್ಕಾರದ ಯೋಜನೆಯಲ್ಲಿ ಮನೆ ನೀಡಲಾಗಿದೆ. ಇನ್ನು ಕೆಲವರಿಗೆ ನಿವೇಶನ ನೀಡಲಾಗಿದ್ದು ಮನೆ ಮಂಜೂರಾಗಿಲ್ಲ. ಇನ್ನು ಕೆಲವರಿಗೆ ಮನೆ-ನಿವೇಶನ ಎರಡೂ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡರು.

ಇದನ್ನೂ ಓದಿ: Biological Terrorism: ಲ್ಯಾಬ್‌ನಲ್ಲಿ ಸೃಷ್ಟಿಸಿ, ಜಗತ್ತಿಗೇ ಕೊರೊನಾ ಹಬ್ಬಿಸಿದ ಚೀನಾ; ಸತ್ಯ ಒಪ್ಪಿದ ಅದೇ ರಾಷ್ಟ್ರದ ವಿಜ್ಞಾನಿ

ಸ್ವಂತ ಹಣದಲ್ಲಿ ಮನೆ ನಿರ್ಮಾಣ

ಇದಕ್ಕೆ ಸ್ಪಂದಿಸಿದ ಶಾಸಕ ಜನಾರ್ದನ ರೆಡ್ಡಿ, ಸಂತ್ರಸ್ತ ಎಲ್ಲ ಕುಟುಂಬಕ್ಕೂ ಸರ್ಕಾರದ ನಿವೇಶನ, ಮನೆ ಮತ್ತು ಅಗತ್ಯ ಸೌಲಭ್ಯ ಸಿಗಬೇಕು. ಇವುಗಳನ್ನು ದೊರಕಿಸಿ ಕೊಡುವ ಜವಾಬ್ದಾರಿ ಅಧಿಕಾರಿಗಳದ್ದಾಗಿರುತ್ತದೆ. ಈ ಬಗ್ಗೆ ಸದನದಲ್ಲಿ ಚರ್ಚೆ ನಡೆಸುತ್ತೇನೆ. ಸರ್ಕಾರದ ಗಮನಕ್ಕೆ ತರುತ್ತೇನೆ. ಒಂದೊಮ್ಮೆ ಸರ್ಕಾರ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚದೇ ಹೋದರೆ ನನ್ನ ಸ್ವಂತ ಹಣದಲ್ಲಿ ಸೂರು ಇಲ್ಲದವರಿಗೆ ಮನೆ ಕಟ್ಟಿಕೊಡುತ್ತೇನೆ.

ಸ್ಥಳಾಂತರವಾದ 73 ಕುಟುಂಬದ ಪೈಕಿ 37 ಜನರಿಗೆ ನಿವೇಶನದ ಹಕ್ಕು ಪತ್ರ ಸಿಕ್ಕಿದ್ದು, ಇನ್ನು ಮಿಕ್ಕವರಿಗೆ ಎರಡು ತಿಂಗಳಲ್ಲಿ ಸರ್ಕಾರದಿಂದ ನಿವೇಶನ ಸಿಗದೇ ಹೋದಲ್ಲಿ ಎರಡು ಎಕರೆ ಜಮೀನು ಖರೀದಿಸಿ ಮನೆ ಕಟ್ಟಿಸಿಕೊಡುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.

ಇದನ್ನೂ ಓದಿ: Tech Tips: ನಿಮ್ಮ ಸ್ಮಾರ್ಟ್‌ಫೋನನ್ನೇ ಟಿವಿ ರಿಮೋಟ್ ಮಾಡಿ! ಈ ಸ್ಟೆಪ್ಸ್ ಫಾಲೋ ಮಾಡಿ…

ತುಂಗಭದ್ರಾ ನದಿಯಲ್ಲಿನ ನಡುಗಡ್ಡೆಯಾಗಿದ್ದ ಕರಿಯಮ್ಮನ ಗಡ್ಡಿಯಲ್ಲಿನ 80ಕ್ಕೂ ಹೆಚ್ಚು ಕುಟುಂಬಗಳನ್ನು ವಿರುಪಾಪುರ ಗಡ್ಡೆಯ ಬೆಂಚಿಕುಟ್ರಿ ಎಂಬಲ್ಲಿಗೆ ಸ್ಥಳಾಂತರ ಮಾಡಲಾಗಿದೆ. ಆದರೆ ಆ ಕುಟುಂಬಗಳಿಗೆ ಅಗತ್ಯ ಸೌಲಭ್ಯಗಳು ಸಿಗುತ್ತಿಲ್ಲ ಎಂಬ ಆರೋಪದ ಹಿನ್ನೆಲೆ ಶಾಸಕ ಜನಾರ್ದನ ರೆಡ್ಡಿ, ಸ್ಥಳಕ್ಕೆ ಭೇಟಿ ನೀಡಿದ್ದರು.

Exit mobile version