ಗಂಗಾವತಿ: ವಾಣಿಜ್ಯ ನಗರಿ ಗಂಗಾವತಿಯನ್ನು (Gangavathi) ಕೇಂದ್ರ ಸ್ಥಾನವನ್ನಾಗಿಸಿಕೊಂಡು ಐತಿಹಾಸಿಕ ಕಿಷ್ಕಿಂಧಾ ಎಂಬ ನೂತನ ಜಿಲ್ಲೆ ರಚಿಸಬೇಕು ಎಂದು ಒತ್ತಾಯಿಸಿ, (Koppala News) ನಗರದ ಸಂಕಲ್ಪ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ 1200 ವಿದ್ಯಾರ್ಥಿಗಳು ಶನಿವಾರ ರಾಜ್ಯ ಸರ್ಕಾರಕ್ಕೆ ಪತ್ರ (Letter) ಬರೆದು ಒತ್ತಾಯಿಸಿದರು.
ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಸ್ವ ಹಸ್ತಾಕ್ಷರಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರಿಗೆ ಬರೆದ ಪತ್ರಗಳನ್ನು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಪ್ರಧಾನ ಅಂಚೆ ಕಚೇರಿಯ ಆವರಣದಲ್ಲಿರುವ ಅಂಚೆ ಪೆಟ್ಟಿಗೆಯಲ್ಲಿ ಹಾಕುವ ಮೂಲಕ ಗಮನ ಸೆಳೆದರು.
ಕೇಂದ್ರ ಬಸ್ ನಿಲ್ದಾಣದ ಹಿಂದೆ ಇರುವ ವಿಜಯನಗರ ಕಾಲೋನಿಯ ಸಂಕಲ್ಪ ಕಾಲೇಜಿನ ಆವರಣದಿಂದ ಜಾಥಾ ನಡೆಸಿದ ವಿದ್ಯಾರ್ಥಿಗಳು, ಶ್ರೀಕೃಷ್ಣದೇವರಾಯ ವೃತ್ತ, ನೀಲಕಂಠೇಶ್ವರ ವೃತ್ತದ ಮೂಲಕ ಪ್ರಧಾನ ಅಂಚೆ ಕಚೇರಿಗೆ ಆಗಮಿಸಿ, ಬಳಿಕ ಪತ್ರಗಳನ್ನು ಪೋಸ್ಟ್ ಮಾಡಿದರು.
ಇದನ್ನೂ ಓದಿ: EPF Interest Rate Hike: ನೌಕರರಿಗೆ ಸಿಹಿಸುದ್ದಿ: ಇಪಿಎಫ್ ಬಡ್ಡಿ ದರ ಶೇ.8.25ಕ್ಕೆ ಏರಿಕೆ
ಗಂಗಾವತಿ ನೂತನ ಜಿಲ್ಲೆಯಾಗಬೇಕು, ಶೈಕ್ಷಣಿಕ, ಆರೋಗ್ಯ ಸೇವೆ ನಮ್ಮ ಹಕ್ಕು, ನಮ್ಮ ಜಿಲ್ಲೆ ನಮ್ಮ ಹಕ್ಕು, ಜಿಲ್ಲೆಯಲ್ಲಿ ಅತಿ ಹೆಚ್ಚು ತೆರಿಗೆ ಪಾವತಿದಾರರು ನಾವು, ಸರ್ಕಾರ ಸ್ಪಂದಿಸಲೇಬೇಕು ಎಂಬ ಇತ್ಯಾದಿ ಘೋಷಣೆಗಳನ್ನು ವಿದ್ಯಾರ್ಥಿಗಳು ಕೂಗಿದರು.
ನೂತನ ಕಿಷ್ಕಿಂಧಾ ಜಿಲ್ಲೆಯ ಬಗ್ಗೆ ಬಜೆಟ್ ಅಧಿವೇಶನದಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ ಅವರು ಧ್ವನಿ ಎತ್ತುವ ಮೂಲಕ ಸಿಎಂ ಗಮನಕ್ಕೆ ತರಬೇಕು ಎಂದು ಈ ವೇಳೆ ವಿದ್ಯಾರ್ಥಿಗಳು ಆಗ್ರಹಿಸಿದರು.
ಇದನ್ನೂ ಓದಿ: Elephant attack : ಹಾಸನದಲ್ಲಿ ನೈಟ್ ಬೀಟ್ ಪೊಲೀಸರನ್ನು, ಕೊಡಗಿನಲ್ಲಿ ಅರಣ್ಯ ಸಿಬ್ಬಂದಿಯ ಅಟ್ಟಾಡಿಸಿದ ಒಂಟಿ ಸಲಗ
ಈ ಸಂದರ್ಭದಲ್ಲಿ ಕಾಲೇಜಿನ ಅಧ್ಯಕ್ಷ ನಾಗರಾಜ್ ಗುತ್ತೇದಾರ, ಪ್ರಾಂಶುಪಾಲ ಬಸಪ್ಪ ಸಿರಿಗೇರಿ, ಜಿಲ್ಲಾ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಸಿಂಗನಾಳ ಸುರೇಶ, ಪ್ರಮುಖರಾದ ಮಂಜುನಾಥ ಕಟ್ಟಿಮನಿ, ಅನ್ನಪೂರ್ಣ ಸಿಂಗ್, ಉಗಮರಾಜ್, ಪವನ ಕುಮಾರ ಗುಂಡೂರು ಹಾಗೂ ಇತರರು ಉಪಸ್ಥಿತರಿದ್ದರು.