ಗಂಗಾವತಿ: ಮಕರ ಸಂಕ್ರಾಂತಿ (makara Sankranti) ಹಬ್ಬದ ಅಂಗವಾಗಿ ಸೋಮವಾರ ತಾಲೂಕಿನ ಪ್ರಸಿದ್ಧ ಚಿಕ್ಕರಾಂಪುರದ ಬಳಿ ಇರುವ ಅಂಜನಾದ್ರಿ ದೇವಸ್ಥಾನ (Anjanadri) ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಸಹಸ್ರಾರು ಭಕ್ತರು ಭೇಟಿ ನೀಡಿ, ದೇವರ ದರ್ಶನ ಪಡೆದುಕೊಂಡರು.
ಸೋಮವಾರ ಒಂದೇ ದಿನ ಐವ್ವತ್ತು ಸಾವಿರಕ್ಕೂ ಅಧಿಕ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದಾರೆ. ಮಕರ ಸಂಕ್ರಾಂತಿ ಅಂಗವಾಗಿ ತಾಲೂಕಿನ ಪ್ರಸಿದ್ಧ ಅಂಜನಾದ್ರಿ ದೇಗುಲಕ್ಕೆ ಕೊಪ್ಪಳ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ಆಂಜನೇಯ ಸ್ವಾಮಿಯ ದರ್ಶನ ಪಡೆದರು.
ಮಕರ ಸಂಕ್ರಾಂತಿ ಹಬ್ಬ ಅದರಲ್ಲೂ ಮುಖ್ಯವಾಗಿ ಸೂರ್ಯ ತನ್ನ ಪಥ ಬದಲಿಸುವ ಸಂದರ್ಭದಲ್ಲಿ ನದಿಗಳಲ್ಲಿ ಸ್ನಾನ ಮಾಡಿದರೆ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಹಿನ್ನಲೆಯಲ್ಲಿ ತಾಲೂಕಿನ ಚಿಕ್ಕಜಂತಕಲ್, ಆನೆಗೊಂದಿಯ ನವವೃಂದಾವನ ಗಡ್ಡೆಗೆ ತೆರಳುವ ಮಾರ್ಗ, ಚಿಂತಾಮಣಿ, ಸಣಾಪುರ, ಬಸವನದುರ್ಗಾ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಮಿಂದೆದ್ದ ಜನ ಸಮೀಪದ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಇದನ್ನೂ ಓದಿ: Makar Sankranti: ಸಂಕ್ರಾಂತಿಗೆ ಬೆಂಗಳೂರಲ್ಲಿ 500 ಜನರಿಂದ ಸೂರ್ಯ ನಮಸ್ಕಾರ
ಪಂಪಾಸರೋವರದ ಮಹಾಲಕ್ಷ್ಮಿ ದೇಗುಲ, ಆನೆಗೊಂದಿಯ ಚಿಂತಾಮಣಿ, ಮೇಗೋಟೆಯ ದುರ್ಗಾಶಕ್ತಿ ದೇಗುಲ, ಋಷಿಮುಖ ಪರ್ವತ ಸೇರಿದಂತೆ ಇನ್ನಿತರ ಧಾರ್ಮಿಕ, ಪ್ರವಾಸಿ ತಾಣಗಳಲ್ಲಿ ಜನರ ದಟ್ಟಣೆ ಅಧಿಕವಾಗಿ ಕಂಡು ಬಂದಿತು.
ಗಂಗಾವತಿ-ಆನೆಗೊಂದಿ- ಹುಲುಗಿ-ಮುನಿರಾಬಾದ್ ಮಾರ್ಗದಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿತ್ತು. ವಿಪರೀತವಾದ ಟ್ರಾಫಿಕ್ ಕಿರಿಕಿರಿಯಾಗಿತ್ತು. ಮುಖ್ಯವಾಗಿ ಆನೆಗೊಂದಿ ಸಣಾಪುರದ ಮಧ್ಯೆ ಕೇವಲ ಐದು ಕಿಲೋ ಮೀಟರ್ ಅಂತರದ ಪ್ರಯಾಣಕ್ಕೆ ಅರ್ಧಗಂಟೆಗೂ ಅಧಿಕ ಸಮಯ ಹಿಡಿಯಿತು.
ಇದನ್ನೂ ಓದಿ: ವರ್ಲ್ಡ್ಸ್ ಬ್ರೈಟೆಸ್ಟ್ ಸ್ಟೂಡೆಂಟ್ ಪಟ್ಟಿಯಲ್ಲಿ ಭಾರತೀಯ ಮೂಲದ ಬಾಲಕಿ!
ಗ್ರಾಮೀಣ ಪೊಲೀಸರು, ವಾಹನಗಳ ದಟ್ಟಣೆ ನಿಯಂತ್ರಣಕ್ಕೆ ಹರಸಹಾಸ ಮಾಡಿದರು. ಬೆಳಗ್ಗೆ ಎಂಟು ಗಂಟೆಯಿಂದ ನಿಧಾನವಾಗಿ ಆರಂಭವಾದ ವಾಹನಗಳ ದಟ್ಟಣೆ ಸಂಜೆ ಆರು ಗಂಟೆವರೆಗೂ ಇತ್ತು.