ಗಂಗಾವತಿ: ಕೊಪ್ಪಳ ಜಿಲ್ಲೆಗೆ (Koppala) ಮಂಜೂರಾಗಿರುವ ನೂರು ಕೋಟಿ ರೂಪಾಯಿ ಮೊತ್ತದ ಕಲಾಗ್ರಾಮವನ್ನು (Kala Grama) ಗಂಗಾವತಿಗೆ (Gangavathi) ತರುವ ನಿಟ್ಟಿನಲ್ಲಿ ಶತಪ್ರಯತ್ನ ಮಾಡುತ್ತಿರುವುದಾಗಿ ಶಾಸಕ ಜಿ. ಜನಾರ್ದನರೆಡ್ಡಿ ತಿಳಿಸಿದ್ದಾರೆ.
ಈ ಬಗ್ಗೆ ವಿಸ್ತಾರ ನ್ಯೂಸ್ ನೊಂದಿಗೆ ಮಾತನಾಡಿದ ಅವರು, ಕಲಾಗ್ರಾಮದಲ್ಲಿ ಕರ್ನಾಟಕ ರಾಜ್ಯದ ಜನಪದ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಬಿಂಬಿಸುವ ಕಲಾಕೃತಿ, ಶಿಲ್ಪಕಲೆಗಳು ಮೈದಳೆಯುತ್ತವೆ. ಕಲಾಗ್ರಾಮಕ್ಕೆ ಜಿಲ್ಲೆಯ ಇತರೆ ಕ್ಷೇತ್ರಗಳಿಗಿಂತ ಗಂಗಾವತಿ ಹೆಚ್ಚು ಪ್ರಾಶಸ್ತ್ಯವಾಗಿದೆ.
ಕಲಾಗ್ರಾಮ ಐದು ಎಕರೆಯಲ್ಲಿ ವಿನ್ಯಾಸವಾಗಲಿದೆ. ವಿರುಪಾಪುರಗಡ್ಡೆಯಲ್ಲಿ ನೂರಾರು ಎಕರೆ ಸರ್ಕಾರಿ ಜಮೀನಿದೆ. ಅಲ್ಲದೇ ವಿಶ್ವವಿಖ್ಯಾತ ಪ್ರವಾಸಿ ತಾಣವಾದ ಅಂಜನಾದ್ರಿ ಆನೆಗೊಂದಿ ಭಾಗದಲ್ಲಿದೆ.
ಇದನ್ನೂ ಓದಿ: Vijayanagara News : ಹಂಪಿಯ ಬೀದಿಬದಿ ವ್ಯಾಪಾರಿಯ ಪುತ್ರ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ 3ನೇ ರ‍್ಯಾಂಕ್
ನಿತ್ಯ ಸಾವಿರಾರು ಜನ ಈ ಧಾರ್ಮಿಕ ತಾಣಕ್ಕೆ ಭೇಟಿ ನೀಡುತ್ತಾರೆ. ಅಲ್ಲದೇ ನಿತ್ಯ ನೂರಾರು ಸಂಖ್ಯೆಯ ವಿದೇಶಿಗರು, ಸಾವಿರಾರು ಸಂಖ್ಯೆಯಲ್ಲಿ ಉತ್ತರ ಭಾರತದ ಯಾತ್ರಾರ್ಥಿಗಳು ನಿರಂತರ ಅಂಜನಾದ್ರಿ ಭಾಗಕ್ಕೆ ಭೇಟಿ ನೀಡುತ್ತಾರೆ.
ಹೀಗಾಗಿ ವಿರುಪಾಪುರಗಡ್ಡೆ ಅಥವಾ ಅಂಜನಾದ್ರಿ ಸಮೀಪ ಕಲಾಗ್ರಾಮ ಸ್ಥಾಪನೆಯಾದರೆ ಕರ್ನಾಟಕದ ಕಲೆ-ಸಂಸ್ಕೃತಿಗಳನ್ನು ಜನರಿಗೆ ಮುಖ್ಯವಾಗಿ ಹೊರರಾಜ್ಯದ ಜನ ಮತ್ತು ವಿದೇಶಿಗರಿಗೆ ಪರಿಚಯಿಸಬೇಕು ಎಂಬ ಸರ್ಕಾರದ ಆಶಯ ಈಡೇರುತ್ತದೆ. ಕಲಾಗ್ರಾಮ ಜಿಲ್ಲೆಯ ಬೇರೆ ಯಾವುದೇ ಸ್ಥಳದಲ್ಲಿ ಸ್ಥಾಪನೆ ಮಾಡುವ ಬದಲಿಗೆ ಗಂಗಾವತಿಯಲ್ಲಿ ಅದರಲ್ಲೂ ಆನೆಗೊಂದಿ ಸುತ್ತಲಿನ ಪರಿಸರದಲ್ಲಿ ನಿರ್ಮಾಣವಾದರೆ ಹೆಚ್ಚು ಮೌಲ್ಯ ಸಿಗುತ್ತದೆ ಎಂದು ಶಾಸಕ ಜಿ. ಜನಾರ್ದನರೆಡ್ಡಿ ಹೇಳಿದರು.
ಇದನ್ನೂ ಓದಿ: Vijayapura Tourist Places : ನೋಡಬನ್ನಿ ವಿಜಯಪುರದಲ್ಲಿರುವ ಈ ಪ್ರಸಿದ್ಧ ತಾಣಗಳ…
ಕಲಾಗ್ರಾಮ ಕೊಪ್ಪಳದಲ್ಲಿಯೇ ಆಗಬೇಕು ಎಂಬ ಒತ್ತಾಸೆ ಅಲ್ಲಿನ ಸಾಹಿತಿಗಳಿಗೆ ಇದೆ. ಆದರೆ ಗಂಗಾವತಿ ಕ್ಷೇತ್ರದಲ್ಲಿ ಸ್ಥಾಪನೆಯಾದರೆ ಅದಕ್ಕೆ ಹೆಚ್ಚು ಮೌಲ್ಯ ಸಿಗಲಿದೆ ಎಂಬುವುದರ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.