ಕನಕಗಿರಿ: ಮುಂಗಾರು ಮಳೆ ಮುಗಿಯುತ್ತಾ ಬಂದರೂ ಸಕಾಲಕ್ಕೆ ಮಳೆಯಾಗದ (Rain) ಹಿನ್ನೆಲೆಯಲ್ಲಿ ಕನಕಗಿರಿ ಪಟ್ಟಣದ ಶ್ರೀಕಂಠಿರಂಗನಾಥ ದೇವಸ್ಥಾನ ಕಮಿಟಿಯಿಂದ ಶನಿವಾರ ಶ್ರೀ ತೊಂಡಿತೆವರಪ್ಪ ದೇವಸ್ಥಾನದ ಮುಂಭಾಗ ಸಪ್ತ ಭಜನೆ ಕಾರ್ಯಕ್ರಮವನ್ನು ಆರಂಭಿಸಲಾಯಿತು.
ಸಮರ್ಪಕ ಮಳೆಯಾಗದ ಕಾರಣ ಜನ-ಜಾನುವಾರು ನೀರಿಗಾಗಿ ಹಾಹಾಕಾರ ಪಡುವ ಸ್ಥಿತಿ ನಿರ್ಮಾಣವಾಗುತ್ತಿದ್ದು, ರೈತರೂ ಸಹ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ವರುಣ ಕೃಪೆ ತೋರಿದರೆ ರೈತರ ಕೃಷಿ ಚಟುವಟಿಕೆಗೆ ಪುಷ್ಠಿ ದೊರೆತಂತಾಗುತ್ತದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ವರುಣನ ಕೃಪೆಗಾಗಿ ಪ್ರಾರ್ಥಿಸಿ 7 ದಿನಗಳ ಕಾಲ, ಹಗಲಿರುಳು ನಿರಂತರ ಶಿವಧ್ಯಾನ ಮಾಡುವ ಕಾರ್ಯಕ್ರಮ ಈ ಸಪ್ತ ಭಜನೆಯಾಗಿದೆ.
ಇದನ್ನೂ ಓದಿ: T20 Blast: ವಿಶ್ವಕಪ್ಗೂ ಮುನ್ನ ಒಂದೇ ಓವರ್ನಲ್ಲಿ 4 ವಿಕೆಟ್ ಕಿತ್ತು ವಿಶ್ವ ದಾಖಲೆ ಬರೆದ ಅಫ್ರಿದಿ
ಸಪ್ತ ಭಜನೆ ಕಾರ್ಯಕ್ರಮದ ವಿಶೇಷ
ತಣ್ಣೀರಿನಲ್ಲಿ ಸ್ನಾನ ಮಾಡಿ, ಒದ್ದೆ ಬಟ್ಟೆಯಲ್ಲಿಯೇ ಮಡಿ-ಉಡಿಯಿಂದ, ಹಸಿರು ಚಪ್ಪರದ ಮಧ್ಯೆ ಕುಂಭವನ್ನು ನೆಟ್ಟು, ಓಂ ನಮಃ ಶಿವಾಯ ಎಂಬ ಮಂತ್ರದೊಂದಿಗೆ ಪ್ರದಕ್ಷಿಣೆ ಹಾಕುತ್ತಾ 7 ದಿನಗಳ ಕಾಲ ನಿರಂತರವಾಗಿ ಈ ಸಪ್ತ ಭಜನೆಯು ನಡೆಯಲಿದೆ.
ಕನಕಗಿರಿಯ ಶ್ರೀ ಕನಕಾಚಲಪತಿ ಭಜನಾ ಮಂಡಳಿಯು ನೇತೃತ್ವ ವಹಿಸಿದ್ದು, ಕನಕಗಿರಿಯೂ ಸೇರಿದಂತೆ ವಿವಿಧ ಗ್ರಾಮಗಳ ಹಲವಾರು ಭಜನಾ ಮಂಡಳಿಗಳು ಭಜನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ ಎಂದು ಮುಖಂಡ ಸುರೇಶ್ ರೆಡ್ಡಿ ಮಹಾಲಿನ ಮನೆ ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ಪ್ರಾಣಕ್ಕಿಂತ ಪ್ರಯಾಣವೇ ಮುಖ್ಯ, ಚಲಿಸುವ ರೈಲಿಗೆ ನೇತಾಡಿದ ಯುವಕನ ವಿಡಿಯೊ ವೈರಲ್
ಈ ಸಂದರ್ಭದಲ್ಲಿ ಭಜನಾ ಸಂಘದ ಗೋಪಾಲ್ ರೆಡ್ಡಿ ಮಹಾಲಿನ್ಮನಿ, ಗುಂಡಪ್ಪ ಚಿತ್ರದ, ಲಕ್ಷ್ಮಣ ದಾಯಿಪಲ್ಲಿ, ಹನುಮಂತ ಸಿರವಾರ್, ರಾಮಣ್ಣ ಕುರಿ, ವಿಶ್ವನಾಥ ಮಲ್ಲದಗುಡ್ಡ, ಸೋಮಣ್ಣ ತೊಂಡ್ಯಾಳ, ಸೋಮಣ್ಣ ಕಮ್ಮಾರ್, ವೀರೇಶ್ ಕೊಡಲಿ, ಶ್ರೀನಿವಾಸ್ ರೆಡ್ಡಿ, ಶ್ರೀನಿವಾಸ್ ರೆಡ್ಡಿ ಓಣಿಮನಿ ಸೇರಿದಂತೆ ಭಕ್ತಾಧಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.