Site icon Vistara News

Koppala News: ಶಾಸಕ ಬಸವರಾಜ ರಾಯರೆಡ್ಡಿ ವಿರುದ್ಧ ಪ್ರತಿಭಟನೆ; 20 ಜನರ ವಿರುದ್ಧ ಎಫ್ಐಆರ್

Gangavathi Police station

ಗಂಗಾವತಿ: ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ (Basavaraja Rayareddy) ವಿರುದ್ಧ ಪ್ರತಿಭಟನೆ (Protest)ನಡೆಸಿದ್ದ 20ಕ್ಕೂ ಹೆಚ್ಚು ರೆಸ್ಟೋರೆಂಟ್, ರೆಸಾರ್ಟ್‌, ಹೊಟೇಲ್ ಮಾಲೀಕರ ವಿರುದ್ಧ ಗಂಗಾವತಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ (FIR) ದಾಖಲಾಗಿದೆ. ಪ್ರತಿಭಟನೆ ವೇಳೆ ಸಾರ್ವಜನಿಕರ ಸಂಚಾರಕ್ಕೆ ಅಡೆತಡೆ, ಶಾಸಕರ ಭಾವಚಿತ್ರವುಳ್ಳ ಬ್ಯಾನರ್‌ಗೆ ಬೆಂಕಿ ಹಾಕಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದನೆ ಸೇರಿದಂತೆ ಇತರೆ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

ಆನೆಗೊಂದಿ ಹಾಗೂ ಅಂಜನಾದ್ರಿ ಸುತ್ತಮುತ್ತಲಿನ ಕಿಷ್ಕಿಂಧಾ ಪ್ರದೇಶ ಕರ್ನಾಟಕದ ಡ್ರಗ್ಸ್ ಹಬ್‌ ಆಗಿದ್ದು, ಅನೈತಿಕ ಚಟುವಟಿಕೆ, ಅಕ್ರಮ ಮತ್ತು ಕಾನೂನು ಬಾಹಿರ ಕೃತ್ಯಗಳು ನಡೆಯುತ್ತಿವೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ಅವರು ಸದನದಲ್ಲಿ ಆರೋಪಿಸಿ, ಹೇಳಿಕೆ ನೀಡಿದ್ದರು.

ಇದನ್ನೂ ಓದಿ: Gold rate today : ಬಂಗಾರದ ದರದಲ್ಲಿ 380 ರೂ. ಏರಿಕೆ, ಬೆಳ್ಳಿ 1000 ರೂ. ತುಟ್ಟಿ

ಶಾಸಕರ ಹೇಳಿಕೆ ಖಂಡಿಸಿ ನಗರದ ಕೇಂದ್ರ ಬಸ್ ನಿಲ್ದಾಣದ ಮುಂದಿರುವ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ಮಾಡಿದ್ದ ರೆಸಾರ್ಟ್‌, ರೆಸ್ಟೊರೆಂಟ್‌ ಮಾಲೀಕರು, ರಾಯರೆಡ್ಡಿ ಅವರ ಭಾವಚಿತ್ರಕ್ಕೆ ಪಾದರಕ್ಷೆಯಿಂದ ಥಳಿಸಿ, ಪ್ರತಿಕೃತಿಯನ್ನು ದಹನ ಮಾಡಿದ್ದರು.

ಯಾರ ಮೇಲೆ ಪ್ರಕರಣ?

ಜಂಗಲ್ ಟ್ರಿ ರೆಸ್ಟೋರೆಂಟ್ ವ್ಯವಸ್ಥಾಪಕ ಶಿವಸಾಗರ, ಓಎಂ ರೆಸ್ಟೋರೆಂಟ್‌ನ ಸುನೀಲ್, ಶೇಷಭೋಷ ರೆಸ್ಟೋರೆಂಟ್‌ನ ಗೋಪಿ, ವಾಟರ್ ಫಾಲ್ ರೆಸ್ಟೋರೆಂಟ್‌ನ ರಾಮಾಂಜನೇಯ, ಸಂತೋಷ್, ಡ್ರೀಮ್ ಮ್ಯಾಂಗೋ ರೆಸ್ಟೋರೆಂಟ್‌ನ ಶ್ರೀಕಾಂತ್, ಸನ್‌ ರೈಸ್ ಹೊಟೇಲ್‌ ನ ಎರ್ರಿಸ್ವಾಮಿ, ವೈಲ್ಡ್‌ಸ್ಟೋನ್ ರೆಸ್ಟೋರೆಂಟ್‌ನ ವರುಣ್ ಸೇರಿದಂತೆ ಇತರೆ 15 ರಿಂದ 20 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಪೊಲೀಸರು ನೀಡುವ ಕಾರಣವೇನು?

ಶಾಸಕ ಬಸವರಾಜ ರಾಯರೆಡ್ಡಿ ವಿರುದ್ಧ ಪ್ರತಿಭಟನೆಗೆ ಅನುಮತಿ ಪಡೆದುಕೊಂಡ ಪ್ರತಿಭಟನಾಕಾರರು, ನಿಗದಿತ ಸ್ಥಳದಲ್ಲಿ ಪ್ರತಿಭಟನೆ ಮಾಡದೇ ಸಾರ್ವಜನಿಕ ಸಂಚಾರಕ್ಕೆ ಅಡೆತಡೆ ಮಾಡಿದ್ದು, ಶಾಸಕರ ಭಾವಚಿತ್ರಕ್ಕೆ ಪಾದರಕ್ಷೆಯಿಂದ ಹೊಡೆದು, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ.

ಇದನ್ನೂ ಓದಿ: Weather Report : ಕರಾವಳಿ, ಮಲೆನಾಡಿನಲ್ಲಿ ಬಿರುಸಾಗಿ ಸುರಿಯಲಿದೆ ಮಳೆ

ಅಲ್ಲದೇ ಶಾಸಕರ ಭಾವಚಿತ್ರವುಳ್ಳ ಬ್ಯಾನರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಇದು ಸರಿಯಲ್ಲ ಎಂದು ತಿಳಿ ಹೇಳಿದಾಗಲೂ, ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಬಗ್ಗೆ ಹೇಳಿದಾಗಲೂ ಪ್ರತಿಭಟನಾಕಾರರು ಧರಣಿ ಮಾಡಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಪೊಲೀಸರು ದೂರು ದಾಖಲಿಸಿದ್ದಾರೆ.

Exit mobile version