ಗಂಗಾವತಿ: ಅಳಿವಿನಂಚಿನಲ್ಲಿರುವ ಜೀವಿಗಳ ಪಟ್ಟಿಯಲ್ಲಿ ಗುರುತಿಸಲಾಗಿರುವ 60ಕ್ಕೂ ಹೆಚ್ಚು ವಯಸ್ಸಿನ ಮತ್ತು ಮೂರುವರೆ ಕೆ.ಜಿ ತೂಕದ ಆಮೆಯೊಂದನ್ನು (Tortoise) ಮಕ್ಕಳು ಸಂರಕ್ಷಣೆ ಮಾಡಿ ಅರಣ್ಯ ಇಲಾಖೆಗೆ (Forest Department) ಒಪ್ಪಿಸಿದ ಘಟನೆ ಇಲ್ಲಿನ ಜಯನಗರದ ಸತ್ಯನಾರಾಯಣ ಪೇಟೆಯಲ್ಲಿ ನಡೆದಿದೆ.
ಮಕ್ಕಳು ಓಣಿಯಲ್ಲಿ ಆಟವಾಡಿಕೊಂಡಿರುವ ಸಂದರ್ಭದಲ್ಲಿ ನಸುಸಂಜೆಯ ಕತ್ತಲಲ್ಲಿ ಆಮೆಯೊಂದು ನಡೆದುಕೊಂಡು ಬಂದಿದೆ. ಇದನ್ನು ಗಮನಿಸಿದ ಎಸ್ಕೆಎನ್ಜಿ ಕಾಲೇಜಿನ ವಿಜ್ಞಾನ ಪದವಿ ವಿಭಾಗದ ವಿದ್ಯಾರ್ಥಿ ಚೇತನ ಮುದ್ಗಲ್ ನೇತೃತ್ವದಲ್ಲಿನ ಮಕ್ಕಳು ರಕ್ಷಣೆ ಮಾಡಿದ್ದಾರೆ.
ಮಕ್ಕಳಾದ ಮಾನಸ, ಶ್ರೇಯಸ್, ಸಂಹಿತಾ ನೇತೃತ್ವದಲ್ಲಿನ ತಂಡ, ಆಮೆಯನ್ನು ಹಿಡಿದು ಟಬ್‌ನಲ್ಲಿ ನೀರು ತುಂಬಿಸಿ ಆಹಾರ ನೀಡಿ ಆರೈಕೆ ಮಾಡಿದ್ದಾರೆ. ಬಳಿಕ ಅರಣ್ಯ ಇಲಾಖೆಯ ಪ್ರಾದೇಶಿಕ ಅಧಿಕಾರಿ ಶಿವರಾಜ ಮೇಟಿ ಅವರಿಗೆ ದೂರವಾಣಿ ಕರೆ ಮಾಡಿ ಆಮೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Krishna ByreGowda : ಅಕ್ಟೋಬರ್ 1ರಿಂದ ಶೇ. 30ರಷ್ಟು ಆಸ್ತಿ ಮಾರ್ಗಸೂಚಿ ದರ ಹೆಚ್ಚಳ!
ಕೂಡಲೆ ಸ್ಪಂದಿಸಿದ ಶಿವರಾಜ ಮೇಟಿ, ತಮ್ಮ ಸಿಬ್ಬಂದಿ ಶಿವಾನಂದ ಅವರನ್ನು ಸ್ಥಳಕ್ಕೆ ಕಳಿಸಿದ್ದಾರೆ. ಬಳಿಕ ಶಿವಾನಂದ್, ಆಮೆಯನ್ನು ತೆಗೆದುಕೊಂಡು ಹೋಗಿ ದೇವಘಾಟದ ತುಂಗಭದ್ರಾ ನದಿಯ ಸುರಕ್ಷಿತ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವರಾಜ ಮೇಟಿ, ಮಕ್ಕಳು ರಕ್ಷಣೆ ಮಾಡಿರುವ ಈ ಆಮೆ ಬ್ಲಾಕ್ ಮಾರ್ಶ್ ಟರ್ಟಲ್ ಎಂಬ ಜಾತಿಗೆ ಸೇರಿದೆ. ಅಂತರಾಷ್ಟ್ರೀಯ ನಿಸರ್ಗ ಸಂರಕ್ಷಣಾ ಸಂಸ್ಥೆ (ಐಯುಸಿಎನ್) ಹೊರಡಿಸಿರುವ ಅಳಿವಿನಂಚಿನಲ್ಲಿರುವ ಜೀವಿಗಳ ಪಟ್ಟಿಯಲ್ಲಿ ಈ ಆಮೆ ಕೆಂಪು ಪಟ್ಟಿಯಲ್ಲಿದೆ.
ಇದನ್ನೂ ಓದಿ: Drought in Karnataka : ರಾಜ್ಯದಲ್ಲಿ 42 ಲಕ್ಷ ಹೆಕ್ಟೇರ್ ಬೆಳೆ ಹಾನಿ; 6 ಸಾವಿರ ಕೋಟಿಗಾಗಿ ಕೇಂದ್ರಕ್ಕೆ ಮೊರೆ
ಸರಿ ಸುಮಾರು ಮೂರರಿಂದ ನಾಲ್ಕು ಕೆ.ಜಿ ಭಾರವಿದ್ದು, ಸುಮಾರು 60 ವರ್ಷ ವಯಸ್ಸಾಗಿದೆ. 12ರಿಂದ 15 ಇಂಚು ಉದ್ದ, 16 ಇಂಚು ಅಗಲವಿದೆ. ಕಳೆದ ಕೆಲ ದಿನಗಳಿಂದ ಸತತ ಮಳೆಯಾಗುತ್ತಿರುವ ಕಾರಣಕ್ಕೆ ಸಮೀಪದ ಕೆರೆ, ದೊಡ್ಡ ಕಾಲುವೆಗಳಿಂದ ಆಮೆ ಬಂದಿರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.