Site icon Vistara News

Koppala News | ಆಹಾರ ಅರಸಿ ಬಂದು ಬಾವಿಯಲ್ಲಿ ಬಿದ್ದಿದ್ದ ಕತ್ತೆಕಿರುಬ ರಕ್ಷಣೆ

Koppala News

ಕೊಪ್ಪಳ: ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮದ ದಮ್ಮೂರು ರಸ್ತೆ ಬಳಿಯ ಜಮೀನಿನಲ್ಲಿದ್ದ ಬಾವಿಗೆ ಬಿದ್ದಿದ್ದ ಕತ್ತೆಕಿರುಬವನ್ನು (ಹೈನಾ) ಸೋಮವಾರ (ಸೆ.12) ರಕ್ಷಣೆ ಮಾಡಲಾಗಿದೆ. ಇದು ಆಹಾರ ಅರಸಿ ಬಂದಾಗ ತಿಳಿಯದೇ ಬಾವಿಗೆ ಬಿದ್ದಿದೆ ಎಂದು ಶಂಕಿಸಲಾಗಿದೆ.

ಬಾವಿಯೊಳಗೆ ಯಾವುದೋ ಶಬ್ದ ಬರುತ್ತಿದ್ದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಪ್ರದೇಶದಲ್ಲಿ ಸಂಚಾರ ಮಾಡುತ್ತಿದ್ದವರಿಗೆ ಅನುಮಾನ ಬಂದಿದೆ. ಬಾವಿ ಸಮೀಪ ಬಂದು ಹುಡುಕಿದ್ದಾರೆ. ಬಳಿಕ ಬಾವಿಯೊಳಗೆ ಪ್ರಾಣಿಯೊಂದು ಕೂಗುವ ಶಬ್ದ ಜೋರಾಗಿ ಕೇಳಿದ್ದರಿಂದ ಬಾವಿಯೊಳಗೆ ಬಗ್ಗಿ ನೋಡಿದಾಗ ಕತ್ತೆಕಿರುಬ ಬಿದ್ದಿರುವುದು ಗಮನಕ್ಕೆ ಬಂದಿದೆ.

ಕೂಡಲೇ ಸ್ಥಳೀಯರು ಜಿಲ್ಲಾ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಬಳಿಕ ಅಗ್ನಿಶಾಮಕ ಸಿಬ್ಬಂದಿಯ ಸಹಾಯವನ್ನು ಪಡೆದು ಕತ್ತೆ ಕಿರುಬವನ್ನು ರಕ್ಷಣೆ ಮಾಡಿದ್ದಾರೆ.

ಅರಿವಳಿಕೆ ತಜ್ಞರನ್ನು ಕರೆಸಿದರು

ಇದೇ ವೇಳೆ ಕತ್ತೆಕಿರುಬನನ್ನು ಮೇಲಕ್ಕೆತ್ತುವ ವೇಳೆ ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಅದನ್ನು ಪ್ರಜ್ಞೆ ತಪ್ಪಿಸುವ ತೀರ್ಮಾನಕ್ಕೆ ಬರಲಾಯಿತು. ಈ ಹಿನ್ನೆಲೆಯಲ್ಲಿ ಅರಿವಳಿಕೆ ತಜ್ಞರನ್ನು ಸ್ಥಳಕ್ಕೆ ಕರೆಸಿ ಅದಕ್ಕೆ ಅರಿವಳಿಕೆ ನೀಡಿದ ಬಳಿಕ ಕಾರ್ಯಾಚರಣೆ ನಡೆಸಿ ಬಾವಿಯಿಂದ ಇದನ್ನು ಮೇಲಕ್ಕೆ ಎತ್ತಲಾಗಿದೆ. ಬಳಿಕ ಸೂಕ್ತ ಚಿಕಿತ್ಸೆಯನ್ನು ನೀಡಿ ಗದಗ ಪ್ರಾಣಿ ಸಂಗ್ರಹಾಲಯಕ್ಕೆ ಕತ್ತೆಕಿರುಬವನ್ನು ರವಾನಿಸಲಾಗಿದೆ.

ಇದನ್ನೂ ಓದಿ | Bengaluru Rain | ವಿಲ್ಲಾದಲ್ಲಿ ಶ್ವಾನ ವಿಲವಿಲ, ಎನ್‌ಡಿಆರ್‌ಎಫ್ ತಂಡದಿಂದ ರಕ್ಷಣೆ

Exit mobile version