Site icon Vistara News

Koppala News: ವಿದ್ಯುತ್ ದರ ಹೆಚ್ಚಳ ಖಂಡಿಸಿ ಗಂಗಾವತಿಯಲ್ಲಿ ರೈಸ್‌ ಮಿಲ್ಲರ್ಸ್‌ ಪ್ರತಿಭಟನೆ

Protest led by Gangavati Taluk Rice Millers Association

ಗಂಗಾವತಿ: ರಾಜ್ಯದಲ್ಲಿ ವಿದ್ಯುತ್ ಧರ (Electricity rates) ಏರಿಕೆ ಮಾಡಿರುವುದನ್ನು ಖಂಡಿಸಿ ಹಾಗೂ ಬೆಂಬಲ ಬೆಲೆಯಲ್ಲಿ ಸ್ಥಳೀಯವಾಗಿಯೇ ಭತ್ತ (Paddy) ಖರೀದಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ, ನಗರದಲ್ಲಿ ಅಕ್ಕಿ ಗಿರಣಿ ಮಾಲೀಕರು ಪ್ರತಿಭಟನೆ ನಡೆಸಿದರು.

ಗಂಗಾವತಿ ತಾಲೂಕು ರೈಸ್ ಮಿಲ್ಲರ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ನೂರಾರು ಅಕ್ಕಿ ಗಿರಣಿ ಮಾಲೀಕರು ನಗರದ ಎಪಿಎಂಸಿಯಿಂದ ಸಿಬಿಎಸ್ ಮಹಾವೀರ ವೃತ್ತದ ಮೂಲಕ ಗಾಂಧಿ ವೃತ್ತದವರೆಗೂ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: ICC World Cup 2023: ಭಾರತ ತಂಡಕ್ಕೆ ಮೆಂಟರ್​ ಆಗಲಿದ್ದಾರೆ ಎಂ.ಎಸ್​ ಧೋನಿ; ವರದಿ

ಬಳಿಕ ಮಾತನಾಡಿದ ಸಂಘಟನೆಯ ಪದಾಧಿಕಾರಿಗಳು, ರಾಜ್ಯದಲ್ಲಿ ಅವೈಜ್ಞಾನಿಕವಾಗಿ ವಿದ್ಯುತ್ ದರ ಏರಿಕೆ ಮಾಡಿರುವುದು ಖಂಡನೀಯ. ಇದರಿಂದ ಅಕ್ಕಿ ಗಿರಣಿ ಸೇರಿದಂತೆ ರಾಜ್ಯದ ಬಹುತೇಕ ಕೈಗಾರಿಕಾ ಘಟಕಗಳ ಮೇಲೆ ಪರಿಣಾಮ ಬೀರುತ್ತದೆ.

ಅಲ್ಲದೇ ಅನ್ನಭಾಗ್ಯದ ಅಕ್ಕಿಯನ್ನು ಹೊರ ರಾಜ್ಯದಿಂದ ಖರೀದಿಸುವ ಬದಲಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಭತ್ತ ಖರೀದಿಸಿ ಮಿಲ್ಲಿಂಗ್ ಮಾಡಲು ಅಕ್ಕಿ ಗಿರಣಿಗಳಿಗೆ ನೀಡಬೇಕು. ಇದರಿಂದ ಕೈಗಾರಿಕೆಗಳಿಗೆ ಉತ್ತೇಜನ ಸಿಗಲಿದೆ ಎಂದು ತಿಳಿಸಿದರು.

ಎಪಿಎಂಸಿ ಕಾಯ್ದೆಗೆ ಮರು ತಿದ್ದುಪಡಿ ತರಲು ಹೊರಟಿರುವುದು ಸರಿಯಲ್ಲ. ಇದರಿಂದ ಕೃಷಿ ಉತ್ಪನ್ನಗಳ ಮಾರಾಟದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂದು ಪ್ರತಿಭಟನಾಕಾರರು ದೂರಿದರು.

ರಾಜ್ಯದಲ್ಲಿ ಬೆಳೆಯುತ್ತಿರುವ ಭತ್ತ ಖರೀದಿಸಬೇಕು, ವಿದ್ಯುತ್ ದರ ಇಳಿಕೆ ಮಾಡಬೇಕು ಎಂಬ ಬೇಡಿಕೆಗಳ ಮನವಿಯನ್ನು ಉಪ ತಹಸೀಲ್ದಾರ್ ಮಂಜುನಾಥ ನಂದನ್ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

ಇದನ್ನೂ ಓದಿ: kodi mutt swamiji : ರಾಜ್ಯದಲ್ಲಿ ಕಾದಿದೆ ಜಲಪ್ರಳಯ, ಕೆಲ ಆಪತ್ತು; ಜಾಗತಿಕವಾಗಿ 3 ಗಂಡಾಂತರ: ಕೋಡಿಹಳ್ಳಿ ಶ್ರೀ

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಹಾಗೂ ಅಕ್ಕಿಗಿರಣಿ ಮಾಲಿಕರ ಸಂಘದ ರಾಜ್ಯ ಅಧ್ಯಕ್ಷ ಪರಣ್ಣ ಮುನವಳ್ಳಿ, ಅಸೋಸಿಯೇಷನ್‌ನ ಮಸ್ಕಿ ಸಿದ್ದಣ್ಣ, ಶ್ರೀನಿವಾಸ್ ಕೆ, ಸೂರ್ಯನಾರಾಯಣ, ಪ್ರಕಾಶ್ ಮೂಥಾ, ಸುರೇಶ್ ಬಂಬ್, ಎಂ.ಎನ್. ಸರ್ವೇಶ್, ಉಮೇಶ್ ಸಿಂಗನಾಳ ಹಾಗೂ ಇತರರು ಪಾಲ್ಗೊಂಡಿದ್ದರು.

Exit mobile version