ಗಂಗಾವತಿ: ಆಕಾಶದಲ್ಲಿ ಸಂಚರಿಸುತ್ತಾ, ಬೇಟೆಯಾಡುವ ವೇಳೆ ಆಕಸ್ಮಿಕ ಗಾಯಗೊಂಡು ನೆಲಕ್ಕೆ ಬಿದ್ದು, ಬೀದಿ ನಾಯಿಗಳ ದಾಳಿಗೆ ಒಳಗಾಗಿದ್ದ ರಣಹದ್ದನ್ನು ಸಂರಕ್ಷಿಸಿದ ವ್ಯಕ್ತಿಯೊಬ್ಬರು ಅದಕ್ಕೆ ಚಿಕಿತ್ಸೆ ನೀಡಿ ಆರೈಕೆ ಮಾಡುವ ಮೂಲಕ ಮಾನವೀಯತೆ (Koppala News) ತೋರಿದ್ದಾರೆ.
ಜನವಸತಿ ಪ್ರದೇಶದಕ್ಕೆ ಬರುವ ವಿಷಜಂತು, ಕೀಟ, ಹಾವು, ಮೊಸಳೆಗಳನ್ನು ಅವುಗಳ ಜೀವಕ್ಕೆ ಹಾನಿಯಾಗದಂತೆ ಹಿಡಿದು ಸುರಕ್ಷಿತ ಪ್ರದೇಶಕ್ಕೆ ಬಿಟ್ಟು ಬರುವ ಹವ್ಯಾಸ ರೂಢಿಸಿಕೊಂಡಿರುವ ಈ ಯುವಕ, ಜನಸಾಮಾನ್ಯರಿಂದ ಸ್ನೇಕ್ ಪುಟ್ಟು ಎಂದು ಕರೆಯಿಸಿಕೊಳ್ಳುತ್ತಾರೆ.
ಇದನ್ನೂ ಓದಿ: Kannada New Movie: ʼಜೀನಿಯಸ್ ಮುತ್ತʼನಿಗೆ ಸಾಥ್ ನೀಡಿದ ʼಚಿನ್ನಾರಿ ಮುತ್ತʼ; ಆಗಸ್ಟ್‌ನಲ್ಲಿ ಸಿನಿಮಾ ರಿಲೀಸ್
ಸ್ನೇಕ್ ಪುಟ್ಟು ಅಲಿಯಾಸ್ ರಾಘವೇಂದ್ರ ಸಿರಿಗೇರಿ ಎಂಬುವವರು ರಣಹದ್ದನ್ನು ಸಂರಕ್ಷಣೆ ಮಾಡಿದ್ದಾರೆ. ತಮ್ಮ ಮನೆಗೆ ಕೊಂಡೊಯ್ದು ಗಾಯಗೊಂಡಿದ್ದ ಹದ್ದಿನ ರೆಕ್ಕೆಯ ಪುನಶ್ಚೇತನಕ್ಕೆ ನೋವು ನಿವಾರಕ ಚುಚ್ಚು ಮದ್ದು ನೀಡಿ ಆರೈಕೆ ಮಾಡುತ್ತಿದ್ದಾರೆ.
ಜಯನಗರದಲ್ಲಿ ಪತ್ತೆ
ಗಾಯಗೊಂಡಿದ್ದ ರಣ ಹದ್ದು ಜಯನಗರದ ಮೊದಲ ಹಂತದ 6ನೇ ತಿರುವಿನ ಮನೆಯೊಂದರ ಬಳಿ ಕಂಡು ಬಂದಿದೆ. ಹಾರಲಾಗದ ಸ್ಥಿತಿಯಲ್ಲಿದ್ದ ಹದ್ದಿನ ಮೇಲೆ ಮೂರು-ನಾಲ್ಕು ಬೀದಿ ನಾಯಿಗಳು ದಾಳಿ ಮಾಡಲು ಮುಂದಾಗಿದ್ದನ್ನು ಕಂಡ ಸ್ಥಳೀಯರೊಬ್ಬರು ನಾಯಿಗಳನ್ನು ಓಡಿಸಿದ್ದಾರೆ. ಬಳಿಕ ಸಿರಿಗೇರಿ ರಾಘವೇಂದ್ರ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ರಾಘವೇಂದ್ರ ಹದ್ದನ್ನು ನಿಧಾನವಾಗಿ ಹಿಡಿದುಕೊಂಡು ಸುರಕ್ಷಿತವಾಗಿ ತಮ್ಮ ಮನೆಗೆ ಕೊಂಡೊಯ್ದಿದ್ದಾರೆ. ಬಳಿಕ ಅದಕ್ಕೆ ಚಿಕಿತ್ಸೆ ನೀಡಿ ಆರೈಕೆ ಮಾಡುತ್ತಿದ್ದಾರೆ.
ಇದನ್ನೂ ಓದಿ: Jio Air Fiber: ಗ್ರಾಹಕರಿಗೆ ಭರ್ಜರಿ ರಿಯಾಯಿತಿ ಘೋಷಿಸಿದ ಜಿಯೊ! ಎಲ್ಲಿಯವರೆಗೆ ಈ ಆಫರ್?
ಹದ್ದು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಪಶು ವೈದ್ಯರಲ್ಲಿ ಕರೆದೊಯ್ದು ಹೆಚ್ಚಿನ ಚಿಕಿತ್ಸೆ ನೀಡಲಾಗುವುದು. ಹದ್ದು ಸಂಪೂರ್ಣ ಚೇತರಿಸಿಕೊಂಡ ಬಳಿಕ ಸುರಕ್ಷಿತ ತಾಣಕ್ಕೆ ಬಿಟ್ಟು ಬರಲಾಗುವುದು ಎಂದು ರಾಘವೇಂದ್ರ ಸಿರಿಗೇರಿ ತಿಳಿಸಿದ್ದಾರೆ.